ನಂಜನಗೂಡು: ತಾಲೂಕಿನ ಬಳ್ಳೂರುಹುಂಡಿ ಗ್ರಾಮದಲ್ಲಿ ಹಾಡ ಹಗಲೇ ಹುಲಿಯೊಂದು ದಾಳಿ ಮಾಡಿದ್ದು, ರೈತ ಪಾರಾಗಿರುವ ಬೆಚ್ಚಿ ಬೀಳುವ ಘಟನೆ ಸೋಮವಾರ ನಡೆದಿದೆ.
ಜಮೀನಿನಲ್ಲಿ ಜಾನುವಾರುಗಳನ್ನು ಮೇಯಿಸುತ್ತಿದ್ದಾಗ ಹುಲಿ ಪ್ರತ್ಯಕ್ಷವಾಗಿ ಸ್ವಾಮಿ (52) ಎಂಬ ರೈತರ ಮೇಲೆ ಎರಗಿದೆ. ಸಾರ್ವಜನಿಕರು ಜೋರಾಗಿ ಕಿರುಚಿಕೊಂಡಾಗ ಅವರನ್ನು ಬಿಟ್ಟು ಪರಾರಿಯಾಗಿದೆ.
ಅರಣ್ಯ ಅಧಿಕಾರಿಗಳಿಗೆ ಕರೆ ಮಾಡಿದಾಗ ಸ್ಪಂದಿಸಿ ಸ್ವಾಮಿಯನ್ನು ತಕ್ಷಣ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ. ತಲೆ ಹಾಗೂ ಕೆನ್ನೆ ಮುಖದ ಭಾಗದಲ್ಲಿ ಗಂಭೀರ ಗಾಯವಾಗಿರುವ ಬಗ್ಗೆ ತಿಳಿದು ಬಂದಿದೆ.
ಸ್ವಲ್ಪ ದಿನಗಳ ಹಿಂದೆ ಹಾದನೂರು ಒಡೆಯನಪುರ ಗ್ರಾಮದಲ್ಲಿ ಹುಲಿ ದಾಳಿ ಮಾಡಿ ಪುಟ್ಟಸ್ವಾಮಿಗೌಡ ಎಂಬಾತ ಜೀವ ಕಳೆದುಕೊಂಡ ಬಳಿಕ ಭಯದ ವಾತಾವರಣ ಸೃಷ್ಟಿಯಾಗಿತ್ತು.ಇಂದಿನ ಈ ಘಟನೆಯ ಬಳಿಕ ಕಾಡಂಚಿನ ಪಕ್ಕದಲ್ಲಿರುವ ರೈತರು ತಮ್ಮ ತಮ್ಮ ಜಮೀನಿಗೆ ತೆರಳಿ ಕೆಲಸ ಮಾಡುವುದು ಹೇಗೆ ಎಂದು ಭಯದ ವಾತಾವರಣ ಸೃಷ್ಟಿಯಾಗಿದೆ.
ದಾಳಿ ಮಾಡಿದ ಹುಲಿಯನ್ನು ಸೆರೆ ಹಿಡಿಯದೆ ಹಾಗೆ ಬಿಟ್ಟಿರುವುದು ಅರಣ್ಯ ಅಧಿಕಾರಿಗಳ ನಿರ್ಲಕ್ಷತನ ಎಂಬ ಕೂಗು ಕೇಳಿ ಬರುತ್ತಿದೆ.