ಮಡಿಕೇರಿ : ದಕ್ಷಿಣ ಕೊಡಗಿನಲ್ಲಿ ಹುಲಿ ಉಪಟಳ ಮುಂದುವರಿದಿದ್ದು, ಎರಡು ಹಸುಗಳು ಬಲಿಯಾಗಿವೆ. ಹಾಡಹಗಲೇ ರಸ್ತೆಯಲ್ಲಿ ರಾಜಾರೋಷವಾಗಿ ಹುಲಿ ಸಂಚರಿಸುತ್ತಿರುವ ದೃಶ್ಯ ಕೆಮರಾದಲ್ಲಿ ಸೆರೆಯಾಗಿದೆ.
ಗದ್ದೆಯಲ್ಲಿ ಬಿಟ್ಟಿದ್ದ ಪೊನ್ನಂಪೇಟೆ ತಾಲೂಕಿನ ಹುದಿಕೇರಿಯ ಹೈಸೊಡ್ಕೂರು ಗ್ರಾಮದ ಕಳ್ಳೇಂಗಡ ಕುಶಾಲಪ್ಪ ಅವರಿಗೆ ಸೇರಿದ ಹಸುವನ್ನು ಹುಲಿ ಕೊಂದು ಹಾಕಿದೆ. ಮತ್ತೂಂದು ಪ್ರಕರಣದಲ್ಲಿ ಕುಂದ ಈಚೂರು ಗ್ರಾಮದ ಗುಮ್ಮಟ್ಟಿರ ದರ್ಶನ್ ನಂಜಪ್ಪ ಅವರಿಗೆ ಸೇರಿದ ಹಸುವನ್ನು ಹುಲಿ ಬಲಿ ಪಡೆದಿದೆ.
ಎರಡೂ ಗ್ರಾಮಗಳಿಗೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ತತ್‌ಕ್ಷಣ ಪರಿಹಾರ ನೀಡಬೇಕು, ಹುಲಿ ಉಪಟಳ ತಡೆಗೆ ಕ್ರಮ ಕೈಗೊಳ್ಳಬೇಕೆಂದು ಜನರು ಆಗ್ರಹಿಸಿದರು.
ರಸ್ತೆಯಲ್ಲಿ ಹುಲಿ
ಪೊನ್ನಂಪೇಟೆ ತಾಲೂಕಿನ ಕಾನೂರು ಸಮೀಪ ಬ್ರಹ್ಮಗಿರಿ ಚೈನ್ ಗೇಟ್ ವ್ಯಾಪ್ತಿಯಲ್ಲಿ ಹುಲಿಯೊಂದು ಹಾಡಹಗಲೇ ರಸ್ತೆಯಲ್ಲಿ ಸಂಚರಿಸುತ್ತಿರುವ ದೃಶ್ಯ ಕಂಡು ಬಂದಿದೆ. ಸುತ್ತಮುತ್ತಲ ಗ್ರಾಮಸ್ಥರು ಆತಂಕಗೊಂಡಿದ್ದು, ಅರಣ್ಯ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.