ಗುಂಡ್ಲುಪೇಟೆ: ಬಂಡೀಪುರ ಹುಲಿ ಯೋಜನೆಯ ವ್ಯಾಪ್ತಿಯಲ್ಲಿ ಈಚೆಗೆ ಎರಡು ಹುಲಿಗಳು ಸಾವನ್ನಪ್ಪಿದ್ದು, ಇವು ರಾಸಾಯನಿಕ ಮಿಶ್ರಿತದಿಂದ ಎಂದು ಪ್ರಯೋಗಾಲಯದ ವರದಿ ಬಂದಿದೆ. ಈ ಹಿನ್ನೆಲೆಯಲ್ಲಿ ಶಂಕಿತ ವ್ಯಕ್ತಿಗಳ ಬಂಧನಕ್ಕೆ ಅರಣ್ಯಾಧಿಕಾರಿಗಳ ತಂಡ ಮುಂದಾಗಿದೆ.
ಬಂಡೀಪುರ ಅಭಯಾರಣ್ಯದ ಗೋಪಾಲಸ್ವಾಮಿಬೆಟ್ಟ ಅರಣ್ಯ ವಲಯದ ಹಿರಿಕೆರೆ ಬಳಿಯಲ್ಲಿ ಜ.25ರಂದು ಸುಮಾರು ಮೂರು ವರ್ಷದ ಒಂದು ಗಂಡು ಹಾಗೂ ಒಂದು ಹೆಣ್ಣು ಹುಲಿ ಸಂಶಯಾಸ್ಪದವಾಗಿ ಮೃತಪಟ್ಟಿದ್ದವು.
ಇದರ ಸಮೀಪವೇ ಸುಮಾರು 25 ವರ್ಷದ ಹೆಣ್ಣಾನೆಯ ಕಳೇಬರ ಸಹ ಕೊಳೆತ ಸ್ಥಿತಿಯಲ್ಲಿ ಬಿದ್ದಿರುವುದನ್ನು ಹುಲಿಗಣತಿಗೆ ಕ್ಯಾಮೆರಾ ಅಳವಡಿಸಲು ಹೋಗಿದ್ದ ಸಿಬ್ಬಂದಿ ಪತ್ತೆ ಹಚ್ಚಿದ್ದರು. ದೇಹದ ಕೆಲವು ಅಂಗಾಂಗಗಳನ್ನು ಬೆಂಗಳೂರು, ಮೈಸೂರು ಹಾಗೂ ಕೊಯಮತ್ತೂರಿನ ವಿಧಿವಿಜಾnನ ಪ್ರಯೋಗಾಲ ಯಗಳಿಗೆ ಕಳುಹಿಸಲಾಗಿತ್ತು. ಕೊಯಮತ್ತೂರಿನ ಪ್ರಯೋಗಾಲಯದ ವರದಿ ಬಂದಿದ್ದು, ರಾಸಾಯನಿಕ ಮಿಶ್ರಿತ ವಿಷ ಪ್ರಾಶನದಿಂದ ಪ್ರಾಣಿಗಳು ಸಾವಿಗೀಡಾಗಿದೆ ಎಂದು ವರದಿಯಲ್ಲಿದೆ.
ಈ ಹಿನ್ನೆಲೆಯಲ್ಲಿ ಪ್ರಾಣಿಗಳ ನಿಗೂಢ ಸಾವಿನ ಪತ್ತೆಗೆ ಅರಣ್ಯ ಇಲಾಖೆಯು ಹೆಡಿಯಾಲ ಉಪವಿಭಾಗದ ಎಸಿಎಫ್ ಕೆ.ಪರಮೇಶ್ ನೇತೃತ್ವದಲ್ಲಿ ತನಿಖಾ ತಂಡ ನೇಮಿಸಿ ಮಾಹಿತಿದಾರರಿಂದ ಮಾಹಿತಿ ಸಂಗ್ರಹಿಸಿತ್ತು. ವನ್ಯಜೀವಿಗಳು ಸಾವಿಗೀಡಾದ ಸ್ಥಳದ ಪಕ್ಕದಲ್ಲಿರುವ ಕಾಡಂಚಿನ ಜಮೀನಿನಲ್ಲಿ ವನ್ಯ ಜೀವಿಗಳ ಹಾವಳಿ ಹೆಚ್ಚಾಗಿದ್ದು, ಇದರಿಂದ ಬೇಸತ್ತ ಕೆಲವರು ಜಮೀನಿನಲ್ಲಿರುವ ತೊಟ್ಟಿಯ ನೀರಿಗೆ ಕ್ರಿಮಿನಾಶಕ ಮಿಶ್ರಣ ಮಾಡಿದ್ದರು ಎನ್ನಲಾಗಿದೆ. ಈ ನೀರು ಕುಡಿದ ಆನೆಯು ಅರಣ್ಯ ಪ್ರದೇಶದಲ್ಲಿ ಸಾವಿಗೀಡಾಗಿದ್ದು, ಇದರ ಮಾಂಸ ತಿಂದ ಎರಡು ಹುಲಿಗಳು ಸಾವಿಗೀಡಾಗಿವೆ ಎನ್ನಲಾಗಿದೆ.