Advertisement

Tiger: ಹುಲಿ ಉಗುರು ಪ್ರಕರಣ: ಎಚ್ಚೆತ್ತುಕೊಂಡ ಸರಕಾರ- ವಾರದೊಳಗೆ ವರದಿ ಸಲ್ಲಿಸಲು ಸೂಚನೆ

12:24 AM Oct 26, 2023 | Team Udayavani |

ಬೆಂಗಳೂರು: ಹುಲಿ ಉಗುರು ಪ್ರಕರಣ ಹೊರಬೀಳುತ್ತಲೇ ಎಚ್ಚೆತ್ತಿರುವ ರಾಜ್ಯ ಸರಕಾರ, ಹುಲಿ ಉಗುರು, ಹುಲಿ ಹಲ್ಲು ಸೇರಿದಂತೆ ವನ್ಯಜೀವಿಗಳ ಯಾವುದೇ ಅಂಗಾಂಗದಿಂದ ಮಾಡಿದ ಉತ್ಪನ್ನ ಮತ್ತು ವಸ್ತುಗಳ ಮಾರಾಟ ತಡೆಗೆ ಜನ ಜಾಗೃತಿ ಮೂಡಿಸಲು ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಮಗ್ರ ವರದಿ ಸಲ್ಲಿಸಲು ಉನ್ನತ ಮಟ್ಟದ ಸಮಿತಿ ರಚಿಸುವಂತೆ ಆದೇಶಿಸಿದೆ.
ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ – ಎಪಿಸಿಸಿಎಫ್ (ವನ್ಯಜೀವಿ) ನೇತೃತ್ವದಲ್ಲಿ ಸಮಿತಿ ರಚಿಸುವಂತೆ ಅರಣ್ಯ, ವನ್ಯಜೀವಿ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ನಿರ್ದೇಶಿಸಿದ್ಧಾರೆ.

Advertisement

ವನ್ಯಜೀವಿ ಸಂರಕ್ಷಣ ಕಾಯಿದೆ ಜಾರಿಗೆ ಬಂದಾಗಿನಿಂದ ದಾಖಲಾಗಿರುವ (ದೂರು) ಪ್ರಕರಣಗಳು, ಕಾನೂನಿನಡಿಯಲ್ಲಿ ಕೈಗೊಂಡಿರುವ ಕ್ರಮ ಹಾಗೂ ಹಾಲಿ ದಾಖಲಾಗಿರುವ ಮತ್ತು ದಾಖಲಾಗುತ್ತಿರುವ ಪ್ರಕರಣಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ವಾರದೊಳಗೆ ವರದಿ ಸಲ್ಲಿಸಲು ಸಮಿತಿಗೆ ಸೂಚಿಸಿದ್ಧಾರೆ. ಸಂತೋಷ್‌ ಬಂಧನದ ಬಳಿಕ ಹಲವು ಗಣ್ಯರ ಬಳಿಯೂ ಹುಲಿ ಉಗುರಿನ ಸರ ಇದೆ ಎಂಬ ಬಗ್ಗೆ ದೂರುಗಳು ಬರುತ್ತಿದ್ದು, ರಾಜ್ಯಾದ್ಯಂತ ವನ್ಯಜೀವಿಗಳ ಯಾವುದೇ ಅಂಗಾಂಗ ಹೊಂದಿದ ವಸ್ತುಗಳ ಸಂಗ್ರಹಣೆ, ಮಾರಾಟ, ದಾಸ್ತಾನನ್ನು ಸಂಪೂರ್ಣ ನಿಯಂತ್ರಿಸಲು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಗಳೂ ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಸಚಿವರು ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ಧಾರೆ.

ಸೆಲೆಬ್ರೆಟಿಗಳ ವಿರುದ್ಧ ಕ್ರಮಕ್ಕೆ ಕೂಗು
ವರ್ತೂರು ಸಂತೋಷ್‌ ಬಂಧನವಾಗುತ್ತಿದ್ದಂತೆ ಹುಲಿ ಉಗುರು ಪೆಂಡೆಂಟ್‌ ಧರಿಸಿದ ಪ್ರಭಾವಿಗಳು, ಸೆಲಬ್ರೆಟಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂಬ ಕೂಗು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬಂದಿದ್ದವು. ಸೆಲೆಬ್ರಿಟಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಒಂದೇ ಮಾತರಂ ಸಮಾಜ ಸೇವಾ ಸಂಸ್ಥೆಯಿಂದ ಅರಣ್ಯಾಧಿಕಾರಿಗಳಿಗೆ ದೂರು ನೀಡಲಾಗಿತ್ತು. ನಿಯಮ ಉಲ್ಲಂ ಸಿದ ಸೆಲೆಬ್ರೆಟಿಗಳ ವಿರುದ್ಧ ಕ್ರಮ ಕೈಗೊಳ್ಳದಿರುವುದು ನ್ಯಾಯವೇ ಎಂದು ಪ್ರಶ್ನಿಸಿ ಸೆಲೆಬ್ರೆಟಿಗಳು ಧರಿಸಿದ್ದ ಹುಲಿ ಉಗುರು ಪೆಂಡೆಂಟ್‌ ಚಿತ್ರಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಕೆಲವರು ಅಪ್‌ಲೋಡ್‌ ಮಾಡಿದ್ದಾರೆ.

ನೈಜತೆ ಪರಿಶೀಲಿಸಿ ಕ್ರಮ
ನಟ ಜಗ್ಗೇಶ್‌ ಒರಿಜಿನಲ್‌ ಹುಲಿ ಉಗುರು ಧರಿಸಿರುವುದಾಗಿ ವಿಡಿಯೋದಲ್ಲಿ ಹೇಳಿರು ವುದನ್ನು ಗಣನೆಗೆ ತೆಗೆದುಕೊಳ್ಳ ಲಾಗಿದೆ. ಸಂತೋಷ್‌ ಬಳಿಕ ಬೇರೆಯವರ ವಿರುದ್ಧವೂ ಕ್ರಮಕ್ಕೆ ದೂರುಗಳು ಬರುತ್ತಿವೆ. ನಟ ದರ್ಶನ್‌ ಸೇರಿ ಹಲವು ಸೆಲೆಬ್ರೆಟಿಗಳ ವಿರುದ್ಧವೂ ಸಾಮಾ ಜಿಕ ಜಾಲತಾಣಗಳಿಂದ ದೂರುಗಳು ಬಂದಿವೆ. ಆದರೆ, ಇವರು ಧರಿಸಿರುವ ಹುಲಿ ಉಗುರಿನ ನೈಜತೆ ಪರಿಶೀಲಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿದಿದ್ದಾರೆ.

ಎಫ್ಎಸ್‌ಎಲ್‌ ವರದಿ ದೃಢಪಟ್ಟರೆ ಸಂಕಷ್ಟ

Advertisement

ಬಿಗ್‌ ಬಾಸ್‌ ಸ್ಪರ್ಧಿ, ಹಳ್ಳಿಕಾರ್‌ ವರ್ತೂರ್‌ ಸಂತೋಷ್‌ ಧರಿಸಿರುವುದು ಹುಲಿ ಉಗುರು ಎಂಬುದಾಗಿ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್ಎಸ್‌ಎಲ್‌)ದಿಂದ ವರದಿ ಬಂದರೆ ಜಾಮೀನು ಸಿಗುವುದು ಕಷ್ಟ ಎನ್ನಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಸೆಕ್ಷನ್‌ ಅಡಿಯಲ್ಲಿ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ. ಎಷ್ಟು ವರ್ಷದ, ಯಾವ ಜಾತಿಗೆ ಸೇರಿದ ಹುಲಿಯ ಉಗುರು? ಎಂಬುದು ತನಿಖೆಯಲ್ಲಿ ಗೊತ್ತಾಗಲಿವೆ. ಮತ್ತೂಂದೆಡೆ ಸಂತೋಷ್‌ಗೆ ಹುಲಿ ಉಗುರು ನೀಡಿದವರು, ಮಾರಾಟ ಮಾಡಿದವರ ಜಾಡು ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಮುಂದಾಗಿದ್ದಾರೆ. ಸಂತೋಷ್‌ ಆಪ್ತ ರಂಜಿತ್‌ ಹಾಗೂ ಹುಲಿ ಉಗುರನ್ನು ಪೆಂಡೆಂಟ್‌ ಮಾದರಿ ಮಾಡಿಕೊಟ್ಟಿರುವ ಚಿನ್ನದಂಗಡಿ ಮಾಲೀಕನಿಗೆ ನೋಟಿಸ್‌ ನೀಡಿ ವಿವರಣೆ ಕೇಳಲಾಗಿದೆ. ಎಫ್ಎಸ್‌ಎಲ್‌ ವರದಿ ಹಾಗೂ ತನಿಖೆ ವೇಳೆ ಪತ್ತೆಯಾಗಿರುವ ಅಂಶಗಳ ವರದಿಯನ್ನು ತನಿಖಾಧಿಕಾರಿಗಳು ಕೇಂದ್ರ ಹಾಗೂ ರಾಜ್ಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ಹಸ್ತಾಂತರ ಮಾಡಲಿದ್ಧಾರೆ. ಈ

ವರದಿಗಳ ಆಧಾರದ ಮೇಲೆ ಪ್ರಾಧಿಕಾರಗಳು ಹುಲಿ ಸಂರಕ್ಷಿತ ಅರಣ್ಯ ಪ್ರದೇಶಗಳ ದತ್ತಾಂಶ ಪರಿಶೀಲಿಸಲಿವೆ. ದಾಂಡೇಲಿ, ನಾಗರಹೊಳೆ, ಭದ್ರಾ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಗಳು, ತಮಿಳುನಾಡಿನ ಅಣ್ಣಾಮಲೈ, ಸತ್ಯಮಂಗಲ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ 5 ವರ್ಷಗಳಲ್ಲಿ ಬೇಟೆಯಾಡಿರುವ ಹುಲಿಗಳ ದಾಖಲೆ ಸಂಗ್ರಹಿಸಲಾಗುತ್ತದೆ.

 

Advertisement

Udayavani is now on Telegram. Click here to join our channel and stay updated with the latest news.

Next