ಗುಂಡ್ಲುಪೇಟೆ(ಚಾಮರಾಜನಗರ): ರೈತನೋರ್ವನ ಮೇಲೆ ಹುಲಿ ದಾಳಿ ನಡೆಸಿದ ಪರಿಣಾಮ ತಲೆ ಹಾಗೂ ಕಣ್ಣಿನ ಭಾಗಕ್ಕೆ ತೀವ್ರತರದ ಗಾಯಗಳಾಗಿರುವ ಘಟನೆ ತಾಲೂಕಿನ ಲಕ್ಕಿಪುರ ಗ್ರಾಮದ ಪಕ್ಕದ ಜಮೀನಿನಲ್ಲಿ ನಡೆದಿದೆ.
ಗೋಪಾಲಪುರ ಗ್ರಾಮದ ಗವಿಯಪ್ಪ(45) ಎಂಬ ರೈತನ ಮೇಲೆ ಹುಲಿ ದಾಳಿ ನಡೆಸಿದ್ದು, ರೈತ ಎಂದಿನಂತೆ ಜಮೀನಿಗೆ ತೆರಳಿ ಕೆಲಸ ಮಾಡುತ್ತಿದ್ದ ವೇಳೆ ದಾಳಿಗೆ ಮುಂದಾಗಿದೆ. ಈ ವೇಳೆ ಗವಿಯಪ್ಪ ಕೂಗಿಕೊಂಡ ಹಿನ್ನಲೆ ಸುತ್ತಮುತ್ತಲ ಜಮೀನಿನ ರೈತರು ಚೀರಾಡಿಕೊಂಡು ಧಾವಿಸಿದಾಗ ಹುಲಿ ಓಡಿಹೋಗಿ ಪಕ್ಕದ ಜಮೀನಿನ ಪೊದೆಯಲ್ಲಿ ಅವಿತುಕೊಂಡಿದೆ ಎಂದು ಪ್ರತ್ಯಕ್ಷ ದರ್ಶಿಗಳು ಮಾಹಿತಿ ನೀಡಿದರು.
ಘಟನೆಯಲ್ಲಿ ರೈತ ಕಣ್ಣಿನ ಭಾಗ ಹಾಗೂ ತಲೆಗೆ ತೀವ್ರ ಗಾಯವಾಗಿದ್ದು, ಮೈ ಮೇಲೆ ಪರಚಿದೆ. ಗಾಯಾಳುವನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಸ್ಥಳಕ್ಕೆ ಬಂಡೀಪುರ ವ್ಯಾಪ್ತಿಯ ಗೋಪಾಲಸ್ವಾಮಿ ಬೆಟ್ಟ ವಲಯದ ಅರಣ್ಯಾಧಿಕಾರಿ ನವೀನ್ ಕುಮಾರ್ ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಜೊತೆಗೆ ಹುಲಿ ಸೆರೆ ಕಾರ್ಯಾಚರಣೆ ಆರಂಭಿಸಿದ್ದಾರೆ.
ಇದನ್ನೂ ಓದಿ : ಯುಪಿ: 40 ದಿನಗಳೊಳಗೆ ಐದು ಜನರ ಬಲಿ; ಮೃಗಾಲಯದಲ್ಲಿ ಬಂಧಿಯಾದ ಹುಲಿ
ಸೂಕ್ತ ಪರಿಹಾರಕ್ಕೆ ಒತ್ತಾಯ: ಹುಲಿ ದಾಳಿಗೆ ಒಳಗಾದ ರೈತ ಗವಿಯಪ್ಪ ತೀರ ಬಡವನಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಚಿಕಿತ್ಸೆ ಜೊತೆಗೆ ಪರಿಹಾರ ನೀಡಬೇಕೆಂದು ಗೋಪಾಲಪುರ ಗ್ರಾಪಂ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಜಿ.ಕೆ.ಲೋಕೇಶ್ ಒತ್ತಾಯಿಸಿದ್ದಾರೆ.