Advertisement

Tiger Attack: ಸಿಬ್ಬಂದಿ ಮಾತು ಕೇಳಿದ್ದರೆ ಗಣೇಶನ ಪ್ರಾಣ ಉಳಿಯುತ್ತಿತ್ತು

09:45 PM Oct 03, 2023 | Team Udayavani |

ಹುಣಸೂರು:ನಾಗರಹೊಳೆ ಉದ್ಯಾನದ ಉದ್ದನಹಳ್ಳಿ ಬಫರ್‌ ಝೋನ್‌ನ ಕೆರೆ ಬಳಿ ಹುಲಿ ದಾಳಿಗೆ ಬಲಿಯಾಗಿದ್ದ ಉಡುವೆಪುರದ ರೈತ ಗಣೇಶನ ಅಂತ್ಯಕ್ರಿಯೆ ಮಂಗಳವಾರ ಮಧ್ಯಾಹ್ನ ಸ್ವಗ್ರಾಮದಲ್ಲಿ ನಡೆಯಿತು.

Advertisement

ಹನಗೋಡು ಆಸ್ಪತ್ರೆ ವೈದ್ಯ ಡಾ.ಜೋಗೇಂದ್ರನಾಥ್‌ ಸೋಮವಾರ ರಾತ್ರಿ 10.30ರ ವೇಳೆ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು.

ಕಂಬನಿ ಮಿಡಿದರು:
ಕುಟುಂಬ, ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಅಕ್ಕಪಕ್ಕದ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿ, ಸಾವಿಗೆ ಕಂಬನಿ ಮಿಡಿದರು.

ಮೆದುಳಿಗೆ ಪೆಟ್ಟಾಗಿತ್ತು:
ಹುಲಿಯು ಗಣೇಶನ ತಲೆ ಕಚ್ಚಿದ್ದು, ಮೆದುಳಿಗೆ ತೀವ್ರ ಪೆಟ್ಟಾಗಿತ್ತು. ಪಂಜದಲ್ಲಿ ಎಲ್ಲೆಡೆ ಪರಚಿದೆ. ಎರಡೂ ತೊಡೆಗಳನ್ನು ಕಚ್ಚಿದ್ದು, ಎಳೆದಾಡಿದ್ದರಿಂದ ಸಾವನ್ನಪ್ಪಿದ್ದಾನೆ.

ಹುಲಿ ಪತ್ತೆಗೆ 30-40 ಕ್ಯಾಮರಾ:
ಹುಲಿ ಸೆರೆಗೆ ಸರ್ಕಾರದಿಂದ ಯಾವುದೇ ನಿರ್ದೇಶನ ಬಂದಿಲ್ಲ, ಆದರೆ, ಗಣೇಶನನ್ನು ಬಲಿ ಪಡೆದ ಹುಲಿ ಪತ್ತೆಗೆ ಈಗಾಗಲೆ 12 ಕಡೆ ಕ್ಯಾಮೆರಾ ಅಳವಡಿಸಿದ್ದು, ಹೆಜ್ಜೆ ಪತ್ತೆಯಾಗಿದೆ. ಹುಲಿ ಕುರುಹು ಪತ್ತೆಯಾಗಿಲ್ಲ. ಮತ್ತಷ್ಟು ಕ್ಯಾಮರಾ ಅಳವಡಿಸಲಾಗುವುದು.

Advertisement

ವಿಶೇಷ ಪ್ರಕರಣ ಪರಿಹಾರಕ್ಕೆ ಮನವಿ:
ಉದ್ಯಾನದೊಳಗೆ ಘಟನೆ ನಡೆದಿರುವುದರಿಂದ ಪರಿಹಾರ ಕೊಡಲು ಸಾಧ್ಯವಿಲ್ಲ. ಆದರೆ, ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಜಿ.ಡಿ.ಹರೀಶ್‌ಗೌಡರು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಅವರೊಂದಿಗೆ ಚರ್ಚಿಸಿದ್ದು, ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಪರಿಹಾರಕ್ಕೆ ಮನವಿ ಮಾಡಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದೆಂದು ಹುಲಿ ಯೋಜನೆ ನಿರ್ದೇಶಕ ಹರ್ಷಕುಮಾರ್‌ ಚಿಕ್ಕನರಗುಂದ “ಉದಯವಾಣಿ’ಗೆ ತಿಳಿಸಿದರು.

ಎಚ್ಚರಿಕೆ ನಡುವೆಯೂ ಅಕ್ರಮ ಪ್ರವೇಶ:
ಕಳೆದ ತಿಂಗಳಿನಿಂದೀಚೆಗೆ ಮುದ್ದನಹಳ್ಳಿ, ಉಡುವೆಪುರ ಸುತ್ತಮುತ್ತ ಜಾನುವಾರು ಸೇರಿ ಸಾಕು ಪ್ರಾಣಿಗಳನ್ನು ಹುಲಿ ಕೊಂದಿತ್ತು. 10 ದಿನಗಳ ಹಿಂದೆ ಮುದ್ದನಹಳ್ಳಿ ರಮೇಶ್‌ ಎಂಬಾತನ ಮೇಲೆ ಹುಲಿ ದಾಳಿ ನಡೆಸಿ ಗಾಯಗೊಳಿಸಿದ ನಂತರ ಯಾರೂ ಉದ್ಯಾನವನ ಪ್ರವೇಶಿಸದಂತೆ ಅರಣ್ಯ ಸಿಬ್ಬಂದಿ ಮನವಿ ಮಾಡಿದ್ದಾರೆ. ಮೈಕ್‌ ಮೂಲಕ ಸಾರಲಾಗಿತ್ತು. ಸೋಮವಾರವೂ ಮೃತ ಗಣೇಶ ಅರಣ್ಯದಲ್ಲಿ ಜಾನುವಾರು ಮೇಯಿಸುವಾಗಲೇ ಸಿಬ್ಬಂದಿ ಎಚ್ಚರಿಕೆ ನೀಡಿರುವ ವಿಡಿಯೋ ಸಹ ಇದ್ದು, ಸಿಬ್ಬಂದಿ ಮಾತು ಕೇಳದ ಗಣೇಶ ಪ್ರಾಣ ಕಳೆದುಕೊಂಡಿರುವುದು ವಿಪರ್ಯಾಸವೇ ಸರಿ.

ಎಚ್ಚರಿಕೆ ಪಾಲಿಸಿ:
ಮುಂದಾದರೂ ಅರಣ್ಯದಂಚಿನ ಜಾನುವಾರು ಸಾಕಣೆದಾರರು, ರೈತರು ಜಾನುವಾರು, ಕುರಿಗಳನ್ನು ಅರಣ್ಯದೊಳಗೆ ಬಿಡಬೇಡಿ, ಅಕ್ರಮ ಪ್ರವೇಶ ಮಾಡದಂತೆ ಹುಲಿ ಯೋಜನೆ ನಿರ್ದೇಶಕ ಹರ್ಷಕುಮಾರ್‌ ಚಿಕ್ಕನರಗುಂದ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next