Advertisement

ತಿಡಗುಂದಿ ಕಾಲುವೆ, ಕೆರೆ ತುಂಬುವ ನೀರಾವರಿ ನನ್ನ ಕನಸಿನ ಯೋಜನೆ : ಎಂ.ಬಿ.ಪಾಟೀಲ

01:16 PM Jul 13, 2021 | Team Udayavani |

ವಿಜಯಪುರ : ರಾಜ್ಯದ ಜಲಸಂಪನ್ಮೂಲ ಸಚಿವನಾಗಿ ಸೇವೆ ಸಲ್ಲಿಸಿರುವ ನಾನು ವಿಜಯಪುರ ಜಿಲ್ಲೆ ಮಾತ್ರವಲ್ಲ ರಾಜ್ಯದ ಎಲ್ಲ ನೀರಾವರಿ ಯೋಜನೆ ಬಗ್ಗೆ ಮಾತನಾಡುವ ಅಧಿಕಾರ ಹೊಂದಿದ್ದೇನೆ. ತಿಡಗುಂದಿ ಶಾಖಾ‌ ಕಾಲುವೆ ಹಾಗೂ 16 ಕೆರೆ ತುಂಬುವ ಯೋಜನೆ ನನ್ನ ಕನಸಿನ ಯೋಜನೆ. ಈ ಬಗ್ಗೆ ವಿಪಕ್ಷದಲ್ಲಿದ್ದರೂ ಮಾತನಾಡುವುದಕ್ಕೆ ಯಾರ ಅನುಮತಿ ಬೇಕಿಲ್ಲ ಎಂದು ಜಲಸಂಪನ್ಮೂಲ ಮಾಜಿ ಸಚಿವ ಎಂ.ಬಿ.ಪಾಟೀಲ ಪ್ರತಿಕ್ರಿಯಿಸಿದ್ದಾರೆ.

Advertisement

ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮದೇ ಕಾಂಗ್ರೆಸ್ ಪಕ್ಷದ ಇಂಡಿ ಶಾಸಕ ಯಶವಂತ್ರಾಯಗೌಡ ಪಾಟೀಲ ಹೆಸರು ಪ್ರಸ್ತಾಪಿಸದೇ ತಿರುಗೇಟು ನೀಡಿದರು.

ಜಲಸಂಪನ್ಮೂಲ ಸಚಿವನಾಗಿದ್ದ ಸಂದರ್ಭದಲ್ಲಿ ತಿಡಗುಂದಿ ಶಾಖಾ ಕಾಲುವೆಯಿಂದ 16 ಕರೆಗಳಿಗೆ ನೀರು ತುಂಬುವ 140 ಕೋಟಿ. ರೂ. ಮೊತ್ತದ ಯೋಜನೆ ಹಾಗೂ ಹಳ್ಳಗಳಿಗೆ ನೀರು ಹರಿಸುವ ಯೋಜನೆ ನನ್ನ ಚಿಂತನೆಯಿಂದ‌ ರೂಪುಗೊಂಡ ಯೋಜನೆಗಳು. ವಿಪಕ್ಷದಲ್ಲಿದ್ದರೂ ನಾನು ರೂಪಿಸಿದ ಯೋಜನೆ ಅನುಷ್ಠಾನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಹಲವು ಬಾರಿ ಭೇಟಿ ಮಾಡಿ ಮನವಿ ಮಾಡಿದ್ದೆ. ಅಂದೂ ಕೂಡ ಸಭೆಗೆ ಮುನ್ನ ಮುಖ್ಯಮಂತ್ರಿ ಸಮಯ ಪಡೆದು ಭೇಟಿ ಮಾಡಿ ಮನವಿ ಸಲ್ಲಿಸಿದ್ದೆ.

ಸದರಿ ಮನವಿ ಸಂದರ್ಭದಲ್ಲಿ ತಿಡಗುಂದಿ ಶಾಖಾ ಕಾಲುವೆಯಿಂದ 140 ಕೋಟಿ ರೂ. ವೆಚ್ಚದ 16 ಕೆರೆ ತುಂಬುವ ಹಾಗಜಿಲ್ಲೆಯನಯ ಹಳ್ಳಗಳಿಗೆ ನೀರು ಹರಿಸುವ ಯೋಜನೆಗೆ ಆರ್ಥಿಕ ಅನುದಾನಕ್ಕೆ ಮನವಿ ಮಾಡಿದ್ದೆ. ಎರಡರಲ್ಲಿ ಒಂದು ಯೋಜನೆಯ ಅನುದಾನ ನೀಡಿಕೆಗೆ ಅನುಮತಿಸುವುದಾಗಿ ಸಿ.ಎಂ. ಹೇಳಿದಾಗ ಕೆರೆಗಳಿಗೆ ನೀರು ತುಂಬುವ ಯೋಜನೆಗೆ ಅನುಮತಿಸಿ ಎಂದು ಕೋರಿದ್ದೆ. ಹೀಗಾಗಿಯೇ ಸದರಿ ಯೋಜನೆಗೆ ಸರ್ಕಾರ ಅನುದಾನ ಬಿಡುಗಡೆಗೆ ಮುಂದಾಗಿದೆ ಎಂದು ವಿವರಿಸಿದರು.

ನಾನು ಜಲಸಂಪನ್ಮೂಲ ಸಚಿವನಾಗಿದ್ದ ವೇಳೆ ರಾಜ್ಯದ ಪಾಲಿನ ನೀರನ್ನು ಬಳಸಿಕೊಂಡು ವಿಜಯಪುರ ಜಿಲ್ಲೆಯಲ್ಲಿ ಹಲವು ಹೊಸ ಯೋಜನೆ ರೂಪಿಸಿದ್ದು, ಕೆಲವನ್ನು ಅನುಷ್ಠಾನಕ್ಕೂ ತಂದಿದ್ದೇನೆ. ಚಾಲನೆ ದೊರೆಯದ ನನ್ನ ಕನಸಿನ ಯೋಜನೆಗಳಿಗೆ ವಿಪಕ್ಷದಲ್ಲಿದ್ದರೂ ಮುಖ್ಯಮಂತ್ರಿ ಗಳನ್ನು ಭೇಟಿ ಮಾಡಿ ಜಿಲ್ಲೆಯ ಜನರ ಪರವಾಗಿ ಒತ್ತಡ ಹೇರುವುದು ನನ್ನ ಕರ್ತವ್ಯ. ಅದು ನನ್ನ ಹಕ್ಕೂ ಕೂಡ, ಅದನ್ನು ಮಾಡಿದ್ದೇನೆ ಎಂದರು.

Advertisement

ರಾಜ್ಯ ಹಾಗೂ ಜಿಲ್ಲೆಯ ನೀರಾವರಿ ಯೋಜನೆಗಳ ಕುರಿತು ಹಿಂದೆಯೂ ಮಾತನಾಡಿದ್ದು, ಈಗಲೂ ಮಾತನಾಡಿದ್ದೇನೆ. ಮುಂದೆಯೂ ಮಾತನಾಡುತ್ತೇನೆ. ಅದಕ್ಕೆ ಯಾರ ಅನುಮತಿಯೂ ಬೇಕಿಲ್ಲ, ಯಾರ ಆಕ್ಷೇಪಣೆಗೂ ನಾನು ಹಿಂಜರಿಯುವುದಿಲ್ಲ ಎಂದು ಪರೋಕ್ಷವಾಗಿ ಇಂಡಿ ಕಾಂಗ್ರೆಸ್ ಸ್ವಪಕ್ಷೀಯ ಶಾಸಕ ಯಶವಂತರಾಯಗೌಡ ಅವರು ತಮ್ಮ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದಕ್ಕೆ ತಿರುಗೇಟು ನೀಡಿದರು.

ಸಿದ್ದೇಶ್ವರ ಶ್ರೀಗಳ ಆಶಯದಂತೆ ಜಿಲ್ಲೆಯನ್ನು ಸಮಗ್ರ ನೀರಾವರಿ ಮಾಡುವ ಅವಕಾಶ ಸಿಕ್ಕಾಗ ಅದನ್ನು ಸಮರ್ಥವಾಗಿ ಬಳಸಿಕೊಂಡಿದ್ದೇನೆ. ನನ್ನ ಕೆಲಸದ ಬಗ್ಗೆ ನನಗೆ ಸಂತೃಪ್ತಿ ಇದೆ. ಹೀಗಾಗಿ ನಾನು ಮಾಡಿದ ಕೆಲಸಗಳನ್ನು ಮಾಧ್ಯಮದ ಮೂಲಕ ಜನತೆಯ ಮುಂದೆ ಇರಿಸಿದ್ದೇನೆ. ಇದು ಯಾರ ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ ಹಸ್ತಕ್ಷೇಪವೂ ಅಲ್ಲ, ರಾಜಕೀಯ ಪ್ರತಿಷ್ಠೆ, ಕೀರ್ತಿ ಪಡೆಯಲು ಮಾಡುತ್ತಿರುವುದೂ ಅಲ್ಲ.
ಕೀರ್ತಿ ಪಡೆಯಲು ನಾನು ಮಾಡಿದ ಕೆಲಸಗಳೇ ಸಾಕ್ಷಿ‌ ಇವೆ ಎಂದು‌ ಕುಟುಕಿದರು.

ನನ್ನ ವಿರುದ್ಧ ಯಾರೇ ಪಕ್ಷದ ವರಿಷ್ಠರಿಗೆ ದೂರು ನೀಡಿದರೂ ಪಕ್ಷದ ವೇದಿಕೆಯಲ್ಲಿ ಅದಕ್ಕೆ ಉತ್ತರ ನೀಡುತ್ತೇನೆ. ಅದರ ಹೊರತಾಗಿ ಟೀಕೆ, ಆಕ್ಷೇಪಣೆಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next