ಹೈದರಾಬಾದ್: ತೆಲಂಗಾಣ ರಾಜ್ಯ ರಸ್ತೆ ಸಾರಿಗೆಯಲ್ಲಿ ನಿರ್ವಾಹಕರಾಗಿರುವ ಮಹಿಳೆ ಆಲಿಯಾ ಜೆಹಾನ್ ತಾವು ಕೆಲಸಕ್ಕೆ ಹೋಗುವಾಗ ಚೀಲವನ್ನು ಮಾತ್ರ ಹೆಗಲಿಗೇರಿಸಿಕೊಂಡು ಹೋಗುವುದಿಲ್ಲ. ಜೊತೆಗೆ ತಮ್ಮ ಪುಟ್ಟ ಮಗುವನ್ನೂ ಕರೆದೊಯ್ಯುತ್ತಾರೆ. ಅಷ್ಟಲ್ಲದೇ ಮಗುವಿಗೆ ಬಸ್ಸಿನಲ್ಲೇ ಹಾಲುಣಿಸುತ್ತಾರೆ. ಮಗುವನ್ನು ಒಂದು ತೋಳಿನಲ್ಲಿರಿಸಿಕೊಂಡೇ ಪ್ರಯಾಣಿಕರಿಗೆ ಟಿಕೆಟ್ ಕೂಡ ನೀಡುತ್ತಾರೆ. ಇವರ ಆತ್ಮಸ್ಥೈರ್ಯ ಕಂಡು ಬೆರಗಾಗದ ಪ್ರಯಾಣಿಕರಿಲ್ಲ. ಮಗುವನ್ನು ಹೊತ್ತು ಕೆಲಸ ನಿರ್ವಹಿಸುವ ಕುರಿತು ಆಲಿಯಾ ಹೀಗೆ ಹೇಳುತ್ತಾರೆ. “ನಮ್ಮದು ಅಂತರ್‌ಧರ್ಮೀಯ ವಿವಾಹ. ನಮಗೆ ಕುಟುಂಬದವರ ಬೆಂಬಲ ಇಲ್ಲ. ಮಕ್ಕಳನ್ನು ನೋಡಿಕೊಳ್ಳಲು ಮನೆಯಲ್ಲಿ ಯಾರೂ ಇಲ್ಲ. ಹಾಗಾಗಿ ಹಿರಿಯ ಮಗನನ್ನು ಗಂಡ ಅವರ ಕೆಲಸದ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಾರೆ. ನಾನು ಮಗಳನ್ನು ಕರೆದುಕೊಂಡು ಬರುತ್ತೇನೆ’ ಎಂದಿದ್ದಾರೆ. ಅಲ್ಲದೇ ಬಿ.ಕಾಂ ಪದವೀಧರೆಯಾದ ಆಲಿಯಾ ಇಂದಲ್ಲಾ ನಾಳೆ ಕಚೇರಿ ಕೆಲಸ ಸಿಗುತ್ತದೆ ಎಂಬ ನಿರೀಕ್ಷೆಯನ್ನೂ ಇರಿಸಿಕೊಂಡಿದ್ದಾರೆ.