ಬೆಂಗಳೂರು:ವಲಸಿಗರಿಗೆ ಟಿಕೆಟ್ ನೀಡುವುದು ಸೇರಿದಂತೆ ಕಾಂಗ್ರೆಸ್ ಅಭ್ಯರ್ಥಿಗಳ ಟಿಕೆಟ್ ಆಯ್ಕೆ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅವರ ನಡೆಗೆ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಭ್ಯರ್ಥಿಗಳ ಆಯ್ಕೆ ಹಾಗೂ ಬೇರೆ ಪಕ್ಷದಿಂದ ಕರೆತರುವ ಸಂದರ್ಭದಲ್ಲಿ ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿರುವುದು, ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಕೂಡ ಸಮ್ಮತಿಸುತ್ತಿರುವುದರ ಬಗ್ಗೆ ದೆಹಲಿಯಲ್ಲಿ ಮಂಗಳವಾರ ನಡೆದ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಖರ್ಗೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ವಿಶೇಷವಾಗಿ ಬೇರೆ ಪಕ್ಷಗಳಿಂದ ಕರೆತಂದಿರುವ ಎಲ್ಲರಿಗೂ ಟಿಕೆಟ್ ನೀಡುವ ಭರವಸೆ ನೀಡಿರುವುದಕ್ಕೆ ಮಲ್ಲಿಕಾರ್ಜುನ ಖರ್ಗೆ ವಿರೋಧ ವ್ಯಕ್ತಪಡಿಸಿದ್ದು, ಪಕ್ಷದಲ್ಲಿ ಕಳೆದ ಚುನಾವಣೆಯಲ್ಲಿ ಸೋತವರು, ಪಕ್ಷಕ್ಕಾಗಿ ಕೆಲಸ ಮಾಡಿದವರು, ಈ ಬಾರಿಯ ಚುನಾವಣೆಯಲ್ಲಿ ಗೆಲ್ಲುವ ಸಾಮರ್ಥ್ಯ ಇರುವ ಅಭ್ಯರ್ಥಿಗಳು ಇರುವಂತಹ ಕ್ಷೇತ್ರಗಳಿಗೂ ಬೇರೆ ಪಕ್ಷದಿಂದ ಕರೆದುಕೊಂಡು ಬಂದು ಅಂತವರಿಗೆ ಟಿಕೆಟ್ ನೀಡಿದರೆ, ಪಕ್ಷದ ಸಂಘಟನೆಯ ಜವಾಬ್ದಾರಿ ಯಾರು ನೋಡಿಕೊಳ್ಳುತ್ತಾರೆ ಎಂದು ನೇರವಾಗಿಯೇ ಅಸಮಾಧಾನ ಹೊರ ಹಾಕಿದರು.
ವಿಶೇಷವಾಗಿ ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಅಶೋಕ್ ಖೇಣಿಯನ್ನು ಕರೆದುಕೊಂಡು ಬಂದು ಟಿಕೆಟ್ ನೀಡಲು ಮುಂದಾಗಿರುವುದು ಪಕ್ಷಕ್ಕೆ ದುಡಿದ ಕಾರ್ಯಕರ್ತರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಅಶೋಕ್ ಖೇಣಿ ಚುನಾವಣೆಯಲ್ಲಿ ಸೋತರೆ, ಅವರು, ಆ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡುತ್ತಾರೆಯೇ ಎಂದು ಖರ್ಗೆ ಖಾರವಾಗಿಯೇ ಪ್ರಶ್ನಿಸಿದ್ದಾರೆ ಎಂದು ತಿಳಿದು ಬಂದಿದೆ.
ಬೆಂಗಳೂರಿನ ಪುಲಕೇಶಿ ನಗರ ಕ್ಷೇತ್ರದಲ್ಲಿಯೂ 2013 ರಲ್ಲಿ ಪಕ್ಷದ ಪರಾಜಿತ ಅಭ್ಯರ್ಥಿ ಪ್ರಸನ್ನ ಕುಮಾರ್ ಈ ಬಾರಿಯ ಚುನಾವಣೆಯಲ್ಲಿ ಗೆಲ್ಲುವ ಸಾಮರ್ಥ್ಯ ಹೊಂದಿದ್ದು, ಅವರನ್ನು ಪರಿಗಣಿಸದೆ ಒಂದು ರಾಜಸಭೆ ಸೀಟಿಗಾಗಿ ಜೆಡಿಎಸ್ ಬಂಡಾಯ ಶಾಸಕರನ್ನೆಲ್ಲ ಸೇರಿಸಿಕೊಂಡು ಅವರೆಲ್ಲರಿಗೂ ಟಿಕೆಟ್ ನೀಡುವ ಭರವಸೆ ನೀಡಿದ್ದು ಸರಿಯಲ್ಲ. ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿಯೂ ಭೀಮಾನಾಯ್ಕಗೆ ಟಿಕೆಟ್ ನೀಡಲು ಮಲ್ಲಿಕಾರ್ಜುನ ಖರ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಹೂವಿನ ಹಡಗಲಿ ಕ್ಷೇತ್ರದಲ್ಲಿ ಪಿ.ಟಿ. ಪರಮೇಶ್ವರ್ ನಾಯಕ್ ಅವರ ನಡವಳಿಕೆಯಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿದ್ದು, ಅವರ ಬದಲಿಗೆ ಕೃಷ್ಣಾ ನಾಯಕ್‌ಗೆ ಟಿಕೆಟ್ ನೀಡುವಂತೆ ಖರ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಂದೇ ಜಿಲ್ಲೆಯಲ್ಲಿ ಇಬ್ಬರೂ ಬಂಜಾರಾ ಸಮುದಾಯಕ್ಕೆ ಟಿಕೆಟ್ ನೀಡುವುದಕ್ಕೂ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.