ಬೆಂಗಳೂರು: ಈ ಬಾರಿ ಚುನಾವಣೆಗೆ ಟಿಕೆಟ್ ಹಂಚಿಕೆ ಸಂದರ್ಭದಲ್ಲಿ ಹೊಂದಾಣಿಕೆಯ ರಾಜಕೀಯ ಹಾಗೂ ಕೋಟಾ ವ್ಯವಸ್ಥೆಗೆ ತಿಲಾಂಜಲಿ ನೀಡಲು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಿಸಿದೆ.
ಕಳೆದ ಚುನಾವಣೆಯಲ್ಲಿ ಇದರಿಂದಾಗಿಯೇ ಕೆಲವು ಕ್ಷೇತ್ರಗಳಲ್ಲಿ ಸೋಲು ಅನುಭವಿಸಿ ಪಾಠ ಕಲಿತಿದ್ದು, ಹೀಗಾಗಿ ಈ ಬಾರಿ ಸಮೀಕ್ಷೆ ಆಧರಿಸಿಯೇ ಟಿಕೆಟ್ ನೀಡಲು ನಿರ್ಧರಿಸಲಾಗಿದೆ.
ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಮೈಸೂರು ಕಡೆ ಹೊಂದಾಣಿಕೆ ನಡೆಯಬಹುದು ಎಂಬ ದೂರು ಹೈಕಮಾಂಡ್ ಅಂಗಳಕ್ಕೆ ತಲುಪಿದ್ದು, ಎಚ್ಚರಿಕೆಯಿಂದ ಟಿಕೆಟ್ ನೀಡಲು ತೀರ್ಮಾನಿ ಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯ ನಾಯಕರಿಗೆ ತಾಕೀತು
ವಿಪಕ್ಷ ನಾಯಕರು, ಕೆಪಿಸಿಸಿ ಅಧ್ಯಕ್ಷರು, ರಾಜ್ಯ ಉಸ್ತುವಾರಿ, ಪ್ರಮುಖ ನಾಯಕರು- ಹೀಗೆ ವಿವಿಧ ಕೋಟಾಗಳಿಗೂ ಈ ಬಾರಿ ಅಂತ್ಯ ಹಾಡಲು ನಿರ್ಧ ರಿಸಲಾಗಿದೆ. ಯಾರಿಗೂ ಟಿಕೆಟ್ ಕೊಡಿಸುವ ಭರವಸೆ ನೀಡದಂತೆ ರಾಜ್ಯ ನಾಯಕರಿಗೆ ಹೈಕಮಾಂಡ್ ತಾಕೀತು ಮಾಡಿದೆ ಎಂದು ತಿಳಿದು ಬಂದಿದೆ.
Related Articles
ಹಿಂದಿನ ಚುನಾವಣೆಗಳಲ್ಲಿ ಅಭ್ಯರ್ಥಿ ಬದಲಾವಣೆಯೂ ಕೆಲವು ಕ್ಷೇತ್ರಗಳಲ್ಲಿ ಪಕ್ಷದ ಮತಗಳಿಕೆ ಕುಸಿಯಲು ಕಾರಣ ಎಂಬುದು ಸಮೀಕ್ಷೆಯಲ್ಲಿ ಗೊತ್ತಾಗಿದೆ. ಹೀಗಾಗಿ ವರ್ಚಸ್ಸು, ಸಮುದಾಯ, ಸಾಮರ್ಥ್ಯದ ಆಧಾರದ ಮೇಲೆ ಟಿಕೆಟ್ ನೀಡಲಾಗುತ್ತದೆ. ಈ ಬಾರಿ ಸೋತರೂ ಮುಂದಿನ ಚುನಾವಣೆಯ ವರೆಗೆ ತಾಳ್ಮೆಯಿಂದ ಪಕ್ಷ ಸಂಘಟನೆ, ಕ್ಷೇತ್ರ ಸಂಪರ್ಕದಲ್ಲಿ ಇರಬಲ್ಲಂಥ ಅಭ್ಯರ್ಥಿಗಳಿಗೆ ಆದ್ಯತೆ ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ವೈಯಕ್ತಿಕ ವಾಗಿ, ಕೆಪಿಸಿಸಿ ವತಿಯಿಂದ ಹಾಗೂ ರಾಜ್ಯ ಉಸ್ತುವಾರಿ ಮಾಡಿರುವ ಸಮೀಕ್ಷೆಯ ಜತೆಗೆ ಎಐಸಿಸಿ ಕೂಡ ಅಂತಿಮ ಸಮೀಕ್ಷೆ ನಡೆಸಿದೆ. ಅದು ಕೇಂದ್ರ ಚುನಾವಣ ಸಮಿತಿಯ ಮುಂದೆ ಬರಲಿದೆ. ಅದರ ಆಧಾರದ ಮೇಲೆಯೇ ಟಿಕೆಟ್ ಘೋಷಣೆ ಯಾಗಲಿದೆ ಎಂದು ತಿಳಿದು ಬಂದಿದೆ.
ಸ್ವಂತ ವರ್ಚಸ್ಸಿನ ಅಭ್ಯರ್ಥಿಗಳಿಲ್ಲ
ಕೆಲವು ಕ್ಷೇತ್ರಗಳಲ್ಲಿ ಮತದಾರರ ಒಲವು ಪಕ್ಷದ ಪರ ಇದ್ದರೂ ಸ್ವಂತ ವರ್ಚಸ್ಸಿನಿಂದ ಗೆಲ್ಲಬಲ್ಲ ಅಭ್ಯರ್ಥಿಗಳಿಲ್ಲ ಎಂಬುದು ಮತಗಟ್ಟೆ ವ್ಯಾಪ್ತಿಯಲ್ಲಿ ನಡೆಸಿದ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ. ಇದು ಪಕ್ಷದಲ್ಲಿ ಚಿಂತೆಗೆ ಕಾರಣವಾಗಿದ್ದು, ಇಂಥ ಕ್ಷೇತ್ರಗಳಲ್ಲಿ ಸಮರ್ಥರಿಗಾಗಿ ಶೋಧ ನಡೆಸಲಾಗಿದೆ.
ಈ ಮಧ್ಯೆ, ಫೆ. 15ರೊಳಗೆ ಮೊದಲ ಅಭ್ಯರ್ಥಿ ಪಟ್ಟಿ ಬಿಡುಗಡೆ ಅನುಮಾನ, ಮಾಸಾಂತ್ಯಕ್ಕೆ ಆಗಬಹುದು. ಹಾಸನ, ಮಂಡ್ಯ ಹುಬ್ಬಳ್ಳಿ- ಧಾರವಾಡ ಭಾಗದಲ್ಲಿ ಬಿಜೆಪಿ, ಜೆಡಿಎಸ್‌ನಿಂದ ಕೆಲವು ನಾಯಕರು ಬರಲು ಮುಂದಾಗಿದ್ದು, ಹೈಕಮಾಂಡ್ ಅನುಮತಿಗಾಗಿ ಕಾಯಲಾಗುತ್ತಿದೆ ಎನ್ನಲಾಗಿದೆ.
ಕೋಟಿ ಕುಟುಂಬಗಳಿಗೆ ಕಾಂಗ್ರೆಸ್ ಭರವಸೆ ಕಾರ್ಡ್
ಬಿಜೆಪಿಯವರು “ಬೂತ್ ವಿಜಯ’ ಅಭಿಯಾನ ನಡೆಸಿರುವ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಕೋಟಿ ಕುಟುಂಬಗಳಿಗೆ “ಭರವಸೆ ಕಾರ್ಡ್’ ತಲುಪಿಸುವ ಅಭಿಯಾನಕ್ಕೆ ಸಿದ್ಧತೆ ನಡೆಸಲಾಗಿದೆ. 200 ಯೂನಿಟ್ ಉಚಿತ ವಿದ್ಯುತ್, ಮಹಿಳೆಯರಿಗೆ ಮಾಸಿಕ 2 ಸಾವಿರ ರೂ. ಘೋಷಣೆ ಜತೆಗೆ ಇನ್ನೂ ಮೂರು ಘೋಷಣೆ ಗಳುಳ್ಳ ಕಾರ್ಡ್ ಸಿದ್ಧಪಡಿಸಿ, ಅದಕ್ಕೆ ಸಿದ್ದರಾಮಯ್ಯ-ಡಿ.ಕೆ. ಶಿವಕುಮಾರ್ ಖಾತರಿಯ ಸಹಿ ಹಾಕಿ ಮಾರ್ಚ್ ತಿಂಗಳಲ್ಲಿ ಒಂದು ಕೋಟಿ ಕುಟುಂಬಗಳಿಗೆ ತಲುಪಿಸಲು ನಿರ್ಧರಿಸಲಾಗಿದೆ. ಜತೆಗೆ ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಪರ ಇರುವ ಮತ ದಾರರನ್ನು ಮತಗಟ್ಟೆಗೆ ಕರೆತಂದು ಮತ ಹಾಕಿಸುವ ಹೊಣೆಗಾರಿಕೆಯನ್ನು ಬೂತ್ ಸಮಿತಿಗೆ ವಹಿಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
-ಎಸ್. ಲಕ್ಷ್ಮೀನಾರಾಯಣ