ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಹೊರಬಂದಿದ್ದ ಸಲಗವೊಂದು ಗುರುಪುರ ಸುತ್ತಮುತ್ತಲಿನಲ್ಲಿ ಸಾಕಷ್ಟು ದಾಂಧಲೆ ನಡೆಸಿದ್ದು, ಸಲಗವನ್ನು ಕಾಡಿಗಟ್ಟುವ ವೇಳೆ ಕ್ಯಾಂಪಿಗೂ ನುಗ್ಗಿದ್ದರಿಂದ ಟಿಬೇಟಿಯನ್ನುರು ಆತಂಕಕ್ಕೊಳಗಾಗಿ ಕಲ್ಲು ಹೊಡೆದು ಹೊರಗಟ್ಟಿರುವ ಘಟನೆ ನಡೆದಿದೆ.
ಬುಧವಾರ ಮುಂಜಾನೆ ಉದ್ಯಾನವದ ಸೊಳ್ಳೆಪುರ ಕಡೆಯಿಂದ ಅರಣ್ಯ ದಾಟಿ ಬಂದಿದ್ದ ಸಲಗವು ಬಾಳೆ, ಜೋಳದ ಬೆಳೆಯನ್ನು ತಿಂದು ತುಳಿದು ನಾಶಪಡಿಸಿದೆ. ರಾತ್ರಿ ಅರಣ್ಯದಾಟಿರುವ ಸಲಗವು ಹೊಸಪೆಂಜಹಳ್ಳಿ ಕಡೆಯಿಂದ ಮುಂಜಾನೆ ಗುರುಪುರ ಟಿಬೇಟ್ ಕ್ಯಾಂಪಿನ ಮೂಲಕ ಕಾಡು ಸೇರುವ ವೇಳೆ ಬೆಳಗಾಗಿದ್ದರಿಂದ ಜೋಳದ ಹೊಲದಲ್ಲೇ ಮೇವು ಮೇಯುತ್ತಿತ್ತು.
ಈ ವೇಳೆ ಸಲಗ ಕಂಡ ಟಿಬೇಟಿಯನ್ನರು ಕಾಡಿಗಟ್ಟುವ ವೇಳೆ ಕ್ಯಾಂಪಿನೊಳಗೆ ನುಗ್ಗಿದ್ದರಿಂದ ಆತಂಕಗೊಂಡ ಟಿಬೇಟಿಯನ್ನರು ಕೊನೆಗೆ ಕಲ್ಲು ಹೊಡೆದು ಸಲಗವನ್ನು ಓಡಿಸಿದ್ದರೂ ಪಕ್ಕದ ಕುರುಚಲು ಕಾಡಿನಲ್ಲಿ ಸೇರಿಕೊಂಡು, ಆತಂಕ ಸೃಷ್ಟಿಸಿತ್ತು. ಸಲಗವನ್ನು ಕಂಡ ಟಿಬೇಟಿಯನ್ನರು ಅಕ್ಕಪಕ್ಕದವರ ನೆರವಿನೊಂದಿಗೆ ಕಾಡಿಗಟ್ಟುವ ವೇಳೆ ಮನೆಗಳ ಬಳಿ ಧಾವಿಸಿ ಅಲ್ಲಿಯೂ ದಾಂಧಲೆ ನಡೆಸಿದೆ.
ಕೊನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಗೊಂಡ ಟಿಬೇಟಿಯನ್ನರು ನಾಯಿಗೆ ಹೊಡೆಯುವಂತೆ ಕಲ್ಲು ಹೊಡೆದು ಹಿಮ್ಮೆಟ್ಟಿಸಿದದರು. ಪಕ್ಕದಲ್ಲೇ ಇರುವ ವೀರನ ಹೊಸಹಳ್ಳಿ ವಲಯದ ಕುರುಚಲು ಕಾಡು ಸೇರಿಕೊಂಡಿದೆ. ವಿಷಯ ತಿಳಿದ ಅರಣ್ಯ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದ್ದಾರೆ.
ಕಾಡಾನೆ ಹಾವಳಿ ತಡೆಯಲು ಆಗ್ರಹ: ವೀರನಹೊಸಹಳ್ಳಿ ವಲಯದ ಹೆಚ್.ಡಿ.ಕೋಟೆ ಗಡಿಯಂಚಿನ ಮಹದೇಶ್ವರ ಕಾಲೋಕಿನ (ಕುಂಟೇರಿ)ಬಳಿಯಿಂದ ಆನೆಗಳು ಅರಣ್ಯದಿಂದ ಹೊರಬರುತ್ತಿದ್ದು, ಹೆಚ್ಚಿನ ಕಾವಲು ಸಿಬ್ಬಂದಿ ನೇಮಿಸಬೇಕು, ನಷ್ಟಕ್ಕೊಳಗಾದ ರೈತರಿಗೆ ಸಕಾಲದಲ್ಲಿ ಮಾರುಕಟ್ಟೆ ದರದಲ್ಲಿ ಪರಿಹಾರ ನೀಡಲು ಕ್ರಮವಹಿಸಬೇಕೆಂದು ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಅರಣ್ಯಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.