Advertisement

ಥಿಯಾಫೊ-ಫ್ರಿಟ್ಜ್ : ಆಲ್‌ ಅಮೆರಿಕನ್‌ ಸೆಮಿಫೈನಲ್‌

11:16 PM Sep 04, 2024 | Team Udayavani |

ನ್ಯೂಯಾರ್ಕ್‌: ಅಮೆರಿಕನ್‌ +ಓಪನ್‌ ಟೆನಿಸ್‌ ಪಂದ್ಯಾವಳಿಯಲ್ಲಿ “ಆಲ್‌ ಅಮೆರಿಕನ್‌’ ಸೆಮಿ ಫೈನಲ್‌ ಪಂದ್ಯವೊಂದಕ್ಕೆ ವೇದಿಕೆ ಸಜ್ಜುಗೊಂಡಿದೆ. ಪುರುಷರ ಸಿಂಗಲ್ಸ್‌ನಲ್ಲಿ ಟೆನಿಸ್‌ ಗೆಳೆಯರಾದ ಫ್ರಾನ್ಸೆಸ್‌ ಥಿಯಾಫೊ ಮತ್ತು ಟೇಲರ್‌ ಫ್ರಿಟ್ಜ್ ಮುಖಾ ಮುಖೀ ಆಗಲಿದ್ದಾರೆ. ಅಲ್ಲಿಗೆ ಆತಿಥೇಯ ದೇಶದವ ರೊಬ್ಬರು ಫೈನಲ್‌ನಲ್ಲಿ ಸೆಣಸುವುದು ಖಾತ್ರಿಯಾಗಿದೆ.

Advertisement

ಫ್ರಾನ್ಸೆಸ್‌ ಥಿಯಾಫೊ 3 ವರ್ಷಗಳಲ್ಲಿ ಯುಎಸ್‌ ಓಪನ್‌ ಸೆಮಿಫೈನಲ್‌ ಪ್ರವೇಶಿಸುತ್ತಿರುವುದು ಇದು 2ನೇ ಸಲ. ಬಲ್ಗೇರಿಯಾದ ಎದುರಾಳಿ ಗ್ರಿಗರ್‌ ಡಿಮಿಟ್ರೋವ್‌ 4ನೇ ಸೆಟ್‌ ವೇಳೆ ಗಾಯಾಳಾದ ಕಾರಣ ನಿವೃತ್ತರಾಗಬೇಕಾಯಿತು. ಆಗ ಥಿಯಾಫೊ 6-3, 6-7 (5-7), 6-3, 4-1ರ ಮುನ್ನಡೆಯಲ್ಲಿದ್ದರು.

ಇದಕ್ಕೊಂದು ಗಂಟೆ ಮುನ್ನ ಟೇಲರ್‌ ಫ್ರಿಟ್ಜ್ ರಷ್ಯಾದ ಅಲೆಕ್ಸಾಂಡರ್‌ ಜ್ವೆರೇವ್‌ ವಿರುದ್ಧ 4 ಸೆಟ್‌ಗಳ ಹೋರಾಟದಲ್ಲಿ 7-6 (7-2), 3-6, 6-4, 7-6 (7-3) ಗೆಲುವು ಸಾಧಿಸಿದ್ದರು. ಇದು ಟೇಲರ್‌ ಫ್ರಿಟ್ಜ್ ಅವರ ಮೊದಲ ಗ್ರ್ಯಾನ್‌ಸ್ಲಾಮ್‌ ಸೆಮಿಫೈನಲ್‌ ಆಗಿದೆ.

ಕ್ಯಾಲಿಫೋರ್ನಿಯಾದ ಟೇಲರ್‌ ಫ್ರಿಟ್ಜ್ ಹಾಗೂ ಮೇರಿಲ್ಯಾಂಡ್‌ನ‌ ಫ್ರಾನ್ಸೆಸ್‌ ಥಿಯಾಫೊ ನಡುವಿನ ಕದನ ಕೌತುಕವನ್ನು ಕಾಣಲು ಅಮೆರಿಕವೇ ತುದಿಗಾಲಲ್ಲಿ ನಿಂತಿದೆ. ಥಿಯಾಫೊ ಮತ್ತು ಫ್ರಿಟ್ಜ್ ಈವರೆಗೆ 7 ಸಲ ಎದುರಾಗಿದ್ದು, ಆರರಲ್ಲಿ ಫ್ರಿಟ್ಜ್ ಜಯ ಸಾಧಿಸಿದ್ದಾರೆ.

“ಇದು ನನ್ನ ಮತ್ತು ಟೇಲರ್‌ ಬಾಳ್ವೆಯ ದೊಡ್ಡ ಪಂದ್ಯ ವಾಗಲಿದೆ. ನಾವು ಸುದೀರ್ಘಾವಧಿಯಿಂದ ಪರಸ್ಪರ ಒಬ್ಬರನ್ನೊಬ್ಬರು ಚೆನ್ನಾಗಿ ಅರಿತು ಕೊಂಡಿ ದ್ದೇವೆ. ಅಂಡರ್‌-14 ಪಂದ್ಯಾವಳಿಯಿಂದಲೇ ನಾವಿಬ್ಬರು ಒಟ್ಟಿಗೇ ಆಡುತ್ತಿದ್ದೆವು. ಈಗ ತವರಿನ ದೊಡ್ಡ ಟೂರ್ನಿಯಲ್ಲಿ ಎದುರಾಗುತ್ತಿದ್ದೇವೆ. ಇದೊಂದು ಅದ್ಭುತ ಅನುಭವವಾಗಲಿದೆ’ ಎಂದು ಥಿಯಾಫೊ ಹೇಳಿದ್ದಾರೆ.

Advertisement

2005ರ ಬಳಿಕ…
ಇದು 2005ರ ಬಳಿಕ ಗ್ರ್ಯಾನ್‌ಸ್ಲಾಮ್‌ ಪಂದ್ಯಾ ವಳಿಯ ಸೆಮಿಫೈನಲ್‌ನಲ್ಲಿ ಅಮೆರಿಕದವರಿಬ್ಬರು ಪರಸ್ಪರ ಎದುರಾಗುತ್ತಿರುವ ಮೊದಲ ನಿದರ್ಶನ. ಅಂದಿನ ಯುಎಸ್‌ ಓಪನ್‌ನಲ್ಲಿ ಆ್ಯಂಡ್ರೆ ಅಗಾಸ್ಸಿ ಮತ್ತು ರಾಬಿ ಜಿನೆಪ್ರಿ ಮುಖಾಮುಖೀ ಆಗಿದ್ದರು.

ಉಳಿದೆರಡು ಕ್ವಾರ್ಟರ್‌ ಫೈನಲ್‌ನಲ್ಲಿ ಜಾನಿಕ್‌ ಸಿನ್ನರ್‌-ಡ್ಯಾನಿಲ್‌ ಮೆಡ್ವೆಡೇವ್‌, ಅಲೆಕ್ಸ್‌ ಡಿ ಮಿನೌರ್‌-ಜಾಕ್‌ ಡ್ರಾಪರ್‌ ಮುಖಾಮುಖೀ ಆಗಲಿದ್ದಾರೆ.

ನವಾರೊ: ಮೊದಲ ಸೆಮಿಫೈನಲ್‌
ವನಿತಾ ಸಿಂಗಲ್ಸ್‌ನಲ್ಲಿ ಅಮೆರಿಕದ ಎಮ್ಮಾ ನವಾರೊ ಮೊದಲ ಸಲ ಗ್ರ್ಯಾನ್‌ಸ್ಲಾಮ್‌ ಸೆಮಿಫೈನಲ್‌ ತಲುಪಿದ್ದಾರೆ. ಅವರು ಪೌಲಾ ಬಡೋಸಾ ವಿರುದ್ಧ 6-2, 7-5ರಿಂದ ಗೆದ್ದು ಬಂದರು. ಮುಂದಿನ ಎದುರಾಳಿ ಬೆಲರೂಸ್‌ನ ಅರಿನಾ ಸಬಲೆಂಕಾ. ಇವರು ಪ್ಯಾರಿಸ್‌ ಒಲಿಂಪಿಕ್ಸ್‌ ಚಾಂಪಿಯನ್‌, ಚೀನದ ಕ್ವಿನ್ವೆನ್‌ ಜೆಂಗ್‌ ವಿರುದ್ಧ 6-1, 6-2 ಅಂತರದ ಜಯ ಸಾಧಿಸಿದರು.

ಬೋಪಣ್ಣ ಜೋಡಿಗೆ ಸೋಲು
ಯುಎಸ್‌ ಓಪನ್‌ ಮಿಶ್ರ ಡಬಲ್ಸ್‌ ಸಮಿಫೈನಲ್‌ನಲ್ಲಿ ರೋಹನ್‌ ಬೋಪಣ್ಣ- ಅಲ್ದಿಲಾ ಸುಜಿಯಾದಿ ಸೋಲನುಭವಿಸಿದರು. ಆತಿಥೇಯ ಅಮೆರಿಕದ ಯುವ ಜೋಡಿಯಾದ ಡೊನಾಲ್ಡ್‌ ಯಂಗ್‌-ಟೇಲರ್‌ ಟೌನ್ಸೆಂಡ್‌ ವಿರುದ್ಧದ ಪಂದ್ಯವನ್ನು ಇವರು 3-6, 4-6ರಿಂದ ಕಳೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next