Advertisement

‘ತುರ್ತು ನಿರ್ಗಮನ’ಚಿತ್ರ ವಿಮರ್ಶೆ; ಹುಟ್ಟು ಸಾವಿನ ನಡುವೆ ಸಿಕ್ಕ ಹೊಸ ಜಗತ್ತು

12:05 PM Jun 25, 2022 | Team Udayavani |

ಮನುಷ್ಯನ ಜೀವನದಲ್ಲಿ ಹುಟ್ಟು ಮತ್ತು ಸಾವು ಎರಡೂ ಕೂಡ ಅನಿರೀಕ್ಷಿತ. ಹುಟ್ಟು ಮತ್ತು ಸಾವು ಎರಡಕ್ಕೂ “ತುರ್ತು ನಿರ್ಗಮನ’ ಎಂಬುದಿರುವುದಿಲ್ಲ. ಒಂದು ವೇಳೆ ಅಂಥ “ತುರ್ತು ನಿರ್ಗಮನ’ ಸಾಧ್ಯವಾದರೆ ಅದು ಹೇಗಿರುತ್ತದೆ ಅನ್ನೋದು ಈ ವಾರ ತೆರೆಗೆ ಬಂದಿರುವ “ತುರ್ತು ನಿರ್ಗಮನ’ ಚಿತ್ರದ ಒಂದು ಎಳೆ.

Advertisement

ಸದಾ ಸೋಂಬೇರಿಯಾಗಿರುವ, ಆಲಸ್ಯವನ್ನೇ ಹೊದ್ದು ಮಲಗಿರುವಂಥ, ಜೀವನದಲ್ಲಿ ಗೊತ್ತು-ಗುರಿಯಿಲ್ಲದ, ತುಂಬ ಉಡಾಫೆಯಾಗಿರುವಂಥ, ತನ್ನನ್ನು ತಾನು ಗ್ರೇಟ್‌ ಎಂದು ಭಾವಿಸಿಕೊಂಡಿರುವ ಹುಡುಗನೊಬ್ಬನಿಗೆ ಇದ್ದಕ್ಕಿದ್ದಂತೆ ಲೈಫ್ನ ಎಂಡ್‌ ಸ್ಟೇಜ್‌ ಬಂದಾಗ ಹೇಗೆ ರಿಯಾಕ್ಟ್ ಮಾಡುತ್ತಾನೆ ಅನ್ನೋದು ಔಟ್‌ ಆ್ಯಂಡ್‌ ಔಟ್‌ ಸಸ್ಪೆನ್ಸ್‌ ಕಂ ಫಿಕ್ಷನ್‌ “ತುರ್ತು ನಿರ್ಗಮನ’ ಸಿನಿಮಾದ ಕಥಾಹಂದರ. ಅದು ಹೇಗೆ ಅನ್ನೋ ಕುತೂಹಲವಿದ್ದರೆ, ಒಮ್ಮೆ ಸಿನಿಮಾ ನೋಡಿ ಬರಲು ಅಡ್ಡಿಯಿಲ್ಲ.

ಹುಟ್ಟು, ಬದುಕು ಮತ್ತು ಸಾವು ಎಲ್ಲವನ್ನೂ ಅದರದ್ದೇ ಆದ ದೃಷ್ಟಿಕೋನದ ಮೂಲಕ ಒಂದಷ್ಟು ಕಾಮಿಡಿಯಾಗಿ ಜೊತೆಗೆ ಸಸ್ಪೆನ್ಸ್‌-ಥ್ರಿಲ್ಲರ್‌ ಆಗಿ ತೆರೆಮೇಲೆ ಕಟ್ಟಿಕೊಟ್ಟಿರುವ ನಿರ್ದೇಶಕರ ಪ್ರಯತ್ನ ಪ್ರಶಂಸನಾರ್ಹ. ಕನ್ನಡದಲ್ಲಿ ಅಪರೂಪಕ್ಕೆ ಮಬಂದಿರುವ ಸೈ-ಫೈ ಶೈಲಿಯ ಸಿನಿಮಾ ಇದಾಗಿದ್ದು, ಕಾಲ್ಪನಿಕವಾಗಿ ಒಂದೊಳ್ಳೆ ವಿಚಾರವನ್ನು ಚಿತ್ರದಲ್ಲಿ ಹೇಳಲಾಗಿದೆ.

ಇದನ್ನೂ ಓದಿ:‘ಹರಿಕಥೆ ಅಲ್ಲ ಗಿರಿಕಥೆ’ ಚಿತ್ರವಿಮರ್ಶೆ: ಸಿನಿ ಕನಸಿನ ಹುಡುಗರ ಜಾಲಿರೈಡ್‌

ಬಹುಕಾಲದ ನಂತರ ನಟ ಸುನೀಲ್‌ ರಾವ್‌ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ತೆರೆಮೇಲೆ ಬಂದಿದ್ದು, ಸದಾ ಸೋಮಾರಿಯಾಗಿರುವ ಹುಡುಗನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ನಟಿ ಸುಧಾರಾಣಿ ನರ್ಸ್‌ ಪಾತ್ರದಲ್ಲಿ, ರಾಜ್‌ ಬಿ ಶೆಟ್ಟಿ ಕ್ಯಾಬ್‌ ಡ್ರೈವರ್‌ ಪಾತ್ರದಲ್ಲಿ ಮತ್ತು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿ ಅಚ್ಯುತ ಕುಮಾರ್‌ ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ತಮ್ಮ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ.

Advertisement

ಉಳಿದಂತೆ ಹಿತಾ ಚಂದ್ರಶೇಖರ್‌, ನಾಗೇಂದ್ರ ಶಾ, ಅಮೃತಾ, ಅರುಣಾ ಬಾಲರಾಜ್‌ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಮಾಮೂಲಿ ಕಮರ್ಷಿಯಲ್‌ ಸಿನಿಮಾಗಳಿಗಿಂತ ಹೊರತಾದ ಸಿನಿಮಾಗಳನ್ನು ನಿರೀಕ್ಷಿಸುವ ಪ್ರೇಕ್ಷಕರು ಒಮ್ಮೆ “ತುರ್ತು ನಿರ್ಗಮನ’ದಲ್ಲಿ ಪ್ರವೇಶಿಸಿ ಬರಲು ಅಡ್ಡಿಯಿಲ್ಲ

 ಜಿಎಸ್‌ ಕೆ

Advertisement

Udayavani is now on Telegram. Click here to join our channel and stay updated with the latest news.

Next