Advertisement

ಗುಡುಗು-ಮಿಂಚು: ಮುನ್ನೆಚ್ಚರಿಕೆ ಅಗತ್ಯ

04:04 PM May 31, 2023 | Team Udayavani |

ಉಡುಪಿ: ಜಿಲ್ಲಾದ್ಯಂತ ಮಳೆಗಾಲ ಆರಂಭಗೊಂಡಿದೆ. ಮಳೆಯ ಜತೆಗೆ ಬರುವ ಗುಡುಗು ಮಿಂಚು ಮಾಡುವ ಅನಾಹುತ ಅಷ್ಟಿಷ್ಟಲ್ಲ. ಮಳೆಯ ಸ್ವಾಗತದ ಖುಷಿಯ ನಡುವೆ ಸಿಡಿಲು ಮಿಂಚು ಜೀವಕ್ಕೆ ಅಪಾಯ ತಂದು ಬಿಡುತ್ತವೆ. ಆರಂಭದ ಒಂದೆರಡು ಮಳೆಯಲ್ಲಿ ಸಿಡಿಲು ಮಿಂಚಿನ ಆರ್ಭಟದ ಅಘಾತ ಹೆಚ್ಚಿರುತ್ತವೆ. ಸಿಡಿಲಿನಿಂದ ಮನುಷ್ಯರು, ಪ್ರಾಣಿ-ಪಕ್ಷಿ ಗಳು ಅನಾಹುತಗಳ ಬಗ್ಗೆ ಮುಂಜಾಗ್ರತೆ ವಹಿಸುವುದು ಅತ್ಯಗತ್ಯ.

Advertisement

ಎಲ್ಲ ಮೋಡಗಳೂ ಗುಡುಗು ಸಿಡಿಲು ಉಂಟು ಮಾಡುವುದಿಲ್ಲ. ಮಳೆಗಾಲದಲ್ಲಿ ನೀರಿನ ಅಂಶ ಮತ್ತು ವಿದ್ಯುತ್‌ ಅಂಶಗಳನ್ನು ಹೊಂದಿರುವ ಮೋಡಗಳು ಮಾತ್ರ ಸಿಡಿಲು ಹಾಗೂ ಗುಡುಗನ್ನು ಉಂಟು ಮಾಡುತ್ತವೆ. ಧನಾತ್ಮಕ ಹಾಗೂ ಋಣಾತ್ಮಕ ವಿದ್ಯುತ್‌ ಅಂಶಗಳಿರುವ ಮೋಡಗಳು ಬೇರೆಯಾಗಿರುತ್ತವೆ. ಇವೆರಡೂ ಪರಸ್ಪರ ವಿರುದ್ಧವಿರುವ ಮೋಡಗಳಾಗಿದ್ದು, ತುಂಬಾ ಹತ್ತಿರ ಬಂದಾಗ ಋಣ ವಿದ್ಯುತ್‌ ಅಂಶಗಳು ಒಮ್ಮೆಲೆ ಧನಾತ್ಮಕ
ಅಂಶಗಳಿರುವ ಮೋಡದ ಕಡೆಗೆ ಅಪ್ಪಳಿಸುತ್ತವೆ.

30 ಸೆಕೆಂಡ್‌ಗಿಂತ
ಅಧಿಕವಿದ್ದರೆ ಅಪಾಯ
ಈ ರೀತಿ ಅಪಾರ ವಿದ್ಯುತ್‌ ಅಂಶಗಳು ಒಂದು ಮೋಡದಿಂದ ಇನ್ನೊಂದು ಮೋಡಕ್ಕೆ ಜಿಗಿದಾಗ ಬೆಳ್ಳಿಯಂಥ ಪ್ರಖರ ಬೆಳಕಿನ ಗೆರೆಗಳು ಮಿಂಚಿ ಮಾಯವಾಗುತ್ತವೆ. ಇದೇ ಮಿಂಚು. ಮಿಂಚಿನ ಪ್ರಕಾಶ, ಶಬ್ದ ಕೇಳಿಸುವುದು. ಇವುಗಳಲ್ಲಿ 30 ಸೆಕೆಂಡುಗಳಿಗಿಂತ ಕಡಿಮೆ ಅಂತರವಿದ್ದರೆ ಆ ಮಿಂಚು ಅಪಾಯಕಾರಿ ಎಂದರ್ಥ.

ಗುಡುಗು ಸಂಭವಿಸುವಿಕೆ
ಮಿಂಚಿನ ಬೆಳಕು ಮೋಡಗಳಿಂದ ಭೂಮಿಗೂ ಹರಿಯುತ್ತವೆ. ಈ ಎರಡು ಮೋಡಗಳ ಮಧ್ಯೆಯಿರುವ ಗಾಳಿ ಈ ವಿದ್ಯುತ್‌ ಆಘಾತದಿಂದ ಒಮ್ಮೆಗೆ ಕಾದು ಸಿಡಿಯುತ್ತದೆ. ಆಗ ದೊಡ್ಡದಾಡ ಶಬ್ದ ಗುಡುಗು ಆಗಿ ಹೊರಹೊಮ್ಮುತ್ತದೆ.

ಮಿಂಚೆಂದು ಮೈಮರೆಯದಿರಿ!
ಮಿಂಚು ಅಂದಾಜು 30 ಸಾವಿರ ಡಿಗ್ರಿ ಸೆಲ್ಸಿಯಸ್‌ನಷ್ಟು ಬಿಸಿಯಿರುತ್ತದೆ. ಸೂರ್ಯನ ಮೇಲ್ಮೈಗಿಂತ 6 ಪಟ್ಟು ಹೆಚ್ಚು ಬಿಸಿ. ಈ ಶಾಖವು ಸುತ್ತಮುತ್ತಲಿನ ಗಾಳಿಯನ್ನು ವೇಗವಾಗಿ ವಿಸ್ತರಿಸಲು ಮತ್ತು ಕಂಪಿಸಲು ಕಾರಣವಾಗುತ್ತದೆ. ಮಿಂಚಿನ ಬೆಳಕಿನಫ್ಲಾಶ್‌ ಅನ್ನು ನೋಡಿದ ಸ್ವಲ್ಪ ಸಮಯದಲ್ಲಿ ಸಿಡಿಲಿನ ಶಬ್ಧ ಕೇಳುತ್ತದೆ.

Advertisement

ಸಿಡಿಲಿನಿಂದ ರಕ್ಷಣೆ ಹೇಗೆ?
ಗುಡುಗು-ಮಿಂಚು ಬಂದಾಗ ತಗ್ಗು ಪ್ರದೇಶಕ್ಕೆ ತೆರಳಬೇಕು. ಮರಗಳಿದ್ದ ಪ್ರದೇಶದಲ್ಲಿ ಇರಬಾರದು. ಸಿಡಿಲು ಮೋಡದಿಂದ ಭೂಮಿಗೆ ಹರಿಯಲು ಮರದಂತಹ ಹಸಿ, ಒದ್ದೆ ವಸ್ತುವನ್ನೇ ಆರಿಸಿಕೊಳ್ಳುತ್ತದೆ. ಮರದ ಬಳಿ ನಿಲ್ಲದೇ ಹೊರಬರಬೇಕು.

ಟ್ರಾನ್ಸ್‌ಫಾರ್ಮರ್‌ ಸನಿಹ ನಿಲ್ಲಬೇಡಿ
ಸಿಡಿಲು ಆರ್ಭಟಿಸುತ್ತಿದ್ದರೆ ನದಿಯಲ್ಲಿ, ಕೆರೆಯಲ್ಲಿ ಈಜುವುದು, ಸ್ನಾನ ಮಾಡುವುದು ಮಾಡಬಾರದು. ನೀರಿನಲ್ಲಿದ್ದರೆ ತತ್‌ಕ್ಷಣ ಹೊರ ಬರಬೇಕು. ವಿದ್ಯುತ್‌ ಕಂಬ, ಎಲೆಕ್ಟ್ರಿಕಲ್‌ ಟವರ್‌, ಮೊಬೈಲ್‌ ಟವರ್‌, ಟ್ರಾನ್ಸ್‌ಫಾರ್ಮರ್‌ ಹತ್ತಿರ ಇರಕೂಡದು. ಸಿಡಿಲು ಬರುವಾಗ ಟೆರೇಸ್‌ ಮೇಲೇರದಿರಿ ತಂತಿ ಬೇಲಿ, ಬಟ್ಟೆ ಒಣ ಹಾಕುವ ತಂತಿಗಳಿಂದ ದೂರವಿರಬೇಕು. ಮಳೆ ಬರುವ ಸಮಯದಲ್ಲಿ ಮನೆಯ ಟೆರೇಸ್‌ ಸ್ವತ್ಛ ಮಾಡುವುದು, ಮನೆಯ ಕಿಟಕಿಯ ಬಳಿ ನಿಲ್ಲುವುದಕ್ಕಿಂತ ಮನೆಯ ಮಧ್ಯದಲ್ಲಿರುವುದು ಸುರಕ್ಷಿತ ಜಾಗವಾಗಿದೆ.ಮೊಬೈಲ್‌ ಬಳಸದಿರಿ ಗುಡುಗು-ಸಿಡಿಲಿನ ಸಂದರ್ಭ ಫೋನ್‌ ಬಳಕೆ ಮಾಡಬಾರದು. ಅದನ್ನು ಚಾರ್ಜ್‌ ಮಾಡುವ ಸಾಹಸ ಮಾಡಬಾರದು. ಕಾರಿನಲ್ಲಿ ಪ್ರಯಾಣಿಸುತ್ತಿದ್ದರೆ ಗಾಜನ್ನು ಮುಚ್ಚಿಕೊಳ್ಳಬೇಕು. ಕಾರಿನ ಬಾಡಿ ಸಾಧ್ಯವಾದಷ್ಟು ಸ್ಪರ್ಶಿಸದಿರುವುದೊಳಿತು. ಕಂಪ್ಯೂಟರ್‌ಗಳಿಂದ ದೂರವಿರಬೇಕು. ಮನೆಯ ಕಾಂಕ್ರೀಟ್‌ ಗೋಡೆ ಸ್ಪರ್ಶಿಸದೆ ಕೋಣೆಯ ಮಧ್ಯದಲ್ಲಿದ್ದರೆ ಹೆಚ್ಚು ಸುರಕ್ಷಿತ.ಲೋಹದ ವಸ್ತುಗಳಿಂದ ಅಂತರವಿರುವುದೊಳಿತು ಸಿಡಿಲು ಆರ್ಭಟಿಸುವಾಗ ಲೋಹದ ವಸ್ತು ಮುಟ್ಟಬಾರದು. ಕುಡುಗೋಲು, ಕತ್ತಿ, ಹಾರೆ, ಕೊಡಲಿ ಇತ್ಯಾದಿ ಮುಟ್ಟಬಾರದು. ಮನೆಯಲ್ಲಿನ ವಿದ್ಯುತ್‌ ಪ್ರವಾಹದ ಮೈನ್‌ ಸ್ವಿಚ್‌ ಆಫ್ ಮಾಡಿ ವಿದ್ಯುತ್‌ ಪ್ರವಾಹವನ್ನು ಸ್ಥಗಿತಗೊಳಿಸಬೇಕು. ದೂರದರ್ಶನ ಉಪಕರಣ, ಮಿಕ್ಸರ್‌ ಇತ್ಯಾದಿ ವಿದ್ಯುತ್‌ ಉಪಕರಣಗಳ ಪಿನ್‌ ಬೋರ್ಡ್‌ನಿಂದ ಕಳಚಿಡಬೇಕು.

ಎಸಿ, ಫ್ರಿಡ್ಜ್ ಬಳಕೆ ಬೇಡ
ಈ ಅವಧಿಯಲ್ಲಿ ಲಿಫ್ಟ್, ಹವಾ ನಿಯಂತ್ರಕ (ಎ.ಸಿ.), ಹೇರ್‌ ಡ್ರೈಯರ್‌ ಇತ್ಯಾದಿಗಳನ್ನು ಉಪಯೋಗಿಸಬಾರದು. ಶೀತಕವನ್ನು (ಫ್ರಿಡ್ಜ್) ಸ್ಪರ್ಶಿಸಬಾರದು. ಸುರಕ್ಷೆ ದೃಷ್ಟಿಯಿಂದ ಮೊಬೈಲ್‌ ಉಪಯೋಗಿಸದಿದ್ದರೆ ಒಳ್ಳೆಯದು. ಇವೆಲ್ಲ ಮುಂಜಾಗ್ರತೆ ವಹಿಸುವುದರಿಂದ ಮಳೆ ಜತೆಗೆ ಉಂಟಾಗುವ ಸಿಡಿಲು ಮಿಂಚಿನ ಅಪಾಯದಿಂದ ಪಾರಾಗಬಹುದಾಗಿದೆ.

ಕಾರ್ಕಳ: ಅಧಿಕ ಸಿಡಿಲು
ಜಿಲ್ಲೆಯ ಇತರ ತಾಲೂಕುಗಳಿಗೆ ಹೋಲಿಸಿದರೆ ಕಾರ್ಕಳದಲ್ಲಿ ಮಳೆ, ಸಿಡಿಲು, ಮಿಂಚಿನ ಪ್ರಮಾಣ ಕೊಂಚ ಜಾಸ್ತಿಯಿರುತ್ತದೆ. ತಾಲೂಕಿನಲ್ಲಿ ಪಾದೆ ಕಲ್ಲುಗಳು ಹೆಚ್ಚಿರುವುದರಿಂದ ಹೀಗಾಗುತ್ತದೆ ಎನ್ನುವ ಮಾತಿದೆ. ಮಳೆ ಜತೆಗೆ ಬರುವ ಗುಡುಗು, ಮಿಂಚು ಮಾಡುವ ಅನಾಹುತ ಅಷ್ಟಿಷ್ಟಲ್ಲ. ಕೆಲವೊಂದು ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next