Advertisement

ತುಂಬೆಯ ಕೀರ್ತಿ ದೊಡ್ಡದು: ನೀರಿನ ಸಮಸ್ಯೆ ಅದಕ್ಕಿಂತಲೂ ದೊಡ್ಡದು !

12:42 PM Jun 20, 2022 | Team Udayavani |

ತುಂಬೆ: ಉದ್ಯಮ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರನ್ನು ಗಳಿಸಿಕೊಂಡಿರುವ ತುಂಬೆ ಗ್ರಾಮವು ಕೃಷಿ ಪ್ರಧಾನ ಗ್ರಾಮ. ಬಹಳ ಮುಖ್ಯವಾಗಿ ನೀರಿನ ಸಮಸ್ಯೆ, ತ್ಯಾಜ್ಯ ಸಮಸ್ಯೆ ಬಹು ವರ್ಷಗಳಿಂದ ಗ್ರಾಮವನ್ನು ಕಾಡುತ್ತಿದೆ.

Advertisement

ಮರದ ಉದ್ಯಮ, ಹೆಂಚಿನ ಉದ್ಯಮ, ಕೋಳಿ ಆಹಾರದ ಉದ್ಯಮ-ಹೀಗೆ ಹಲವು ಉದ್ಯಮಗಳಿವೆ ಈ ಗ್ರಾಮದಲ್ಲಿ. ಇದರ ಅಂಚಿನಲ್ಲಿ ನೇತ್ರಾವತಿ ನದಿ ಹರಿಯುತ್ತಿದ್ದರೆ, ಗ್ರಾಮದ ಮಧ್ಯ ಭಾಗದಲ್ಲಿ ಮಂಗಳೂರು-ಬೆಂಗಳೂರು ರಾ.ಹೆ. 75 ಹಾದು ಹೋಗಿದೆ. ಶೈಕ್ಷಣಿಕವಾಗಿಯೂ ಗ್ರಾಮದ ಸಾಧನೆ ದೊಡ್ಡದು. ಗ್ರಾಮದ ಕೇಂದ್ರ ಸ್ಥಾನದಲ್ಲಿ ಅತ್ಯಾಧುನಿಕ ಆಸ್ಪತ್ರೆಯೂ ಕಾರ್ಯಾಚರಿಸುತ್ತಿದೆ.

ಗ್ರಾಮದ ಸಮಸ್ಯೆಗಳಿವು

ಗ್ರಾಮದ ಪ್ರಾರಂಭದಲ್ಲೇ ನೇತ್ರಾವತಿ ನದಿಗೆ ಅಡ್ಡಲಾಗಿ ಅಣೆಕಟ್ಟನ್ನು ಕಟ್ಟಿರುವುದರಿಂದ ಗ್ರಾಮದಲ್ಲಿ ನೀರಿನ ಕೊರತೆ ಇದೆ ಎಂಬ ಆರೋಪವಿದೆ. ಇಲ್ಲಿನ ಬಾವಿ, ಕೊಳವೆಬಾವಿಗಳಲ್ಲಿ ನೀರಿಲ್ಲ ಎನ್ನಲಾಗುತ್ತಿದೆ. ಮಂಗಳೂರು ನಗರಕ್ಕೆ ತುಂಬೆಯ ನೀರು ಎಂಬ ಹೆಸರಿದ್ದರೂ, ತುಂಬೆ ಗ್ರಾಮದಲ್ಲಿ ನೀರಿಗೆ ಕೊರತೆ ಇದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಸ್ಥಳೀಯರು.

ಗ್ರಾಮ ವ್ಯಾಪ್ತಿಯಲ್ಲಿ ರಾ.ಹೆದ್ದಾರಿ ಹಾದು ಹೋಗುತ್ತಿದ್ದು, ಹೀಗಾಗಿ ತ್ಯಾಜ್ಯದ ಸಮಸ್ಯೆಯನ್ನೂ ಗ್ರಾಮ ಎದುರಿಸುತ್ತಿದೆ. ಸಾಕಷ್ಟು ಕಡೆ ಅನಧಿಕೃತ ತ್ಯಾಜ್ಯದ ರಾಶಿಗಳು ಹೆಚ್ಚಾಗುತ್ತಿವೆ. ಅದರ ವಿಲೇವಾರಿಗೆಂದೇ ಗ್ರಾ.ಪಂ. ಸಾವಿರಾರು ರೂ. ಖರ್ಚು ಮಾಡುತ್ತಿದೆ. ಸಿಸಿ ಕೆಮರಾ ಹಾಕಿ ದಂಡ ಪ್ರಯೋಗ ನಡೆಸಿದರೂ, ಶಾಶ್ವತ ಪರಿಹಾರ ಸಿಕ್ಕಿಲ್ಲ ಎಂಬುದು ಗ್ರಾ.ಪಂ. ಅಭಿಪ್ರಾಯ. ಮತ್ತೂಂದೆಡೆ ತುಂಬೆ ಡ್ಯಾಮ್‌ನಿಂದ ನೀರು ಹೊರ ಬಿಡುತ್ತಿರುವ ಪರಿಣಾಮ ನದಿ ಕಿನಾರೆ ಕೃಷಿ ಪ್ರದೇಶಗಳು ನದಿ ಪಾಲಾಗುತ್ತಿವೆ. ಅದಕ್ಕೂ ಪರಿಹಾರ ಕಲ್ಪಿಸಿಲ್ಲ. ಅದನ್ನು ಹಾಗೇ ಬಿಟ್ಟರೆ ಇನ್ನೂ ಹೆಚ್ಚಿನ ಕೃಷಿ ನದಿ ಪಾಲಾಗುತ್ತದೆ ಎಂದು ರೈತರ ಅಳಲು.

Advertisement

ನೀರು ಪೂರೈಕೆಯ ಸವಾಲು: ಗ್ರಾಮದ ಪ್ರಾರಂಭದಲ್ಲೇ ನೇತ್ರಾವತಿ ನದಿಗೆ ಅಣೆಕಟ್ಟು ನಿರ್ಮಿಸಿದ್ದ ರಿಂದ ಬಾವಿ, ಕೊಳವೆಬಾವಿಗಳು ನೀರಿನ ಸಮಸ್ಯೆ ಎದುರಿಸುತ್ತಿವೆ. ಗ್ರಾಮದ ಜನರಿಗೆ ಕುಡಿಯುವ ನೀರು ಪೂರೈಸುವುದೇ ದೊಡ್ಡ ಸವಾಲಾಗಿದೆ. ಜತೆಗೆ ಗ್ರಾಮ ಮಧ್ಯೆ ಹೆದ್ದಾರಿ ಹಾದು ಹೋಗಿರುವು ದರಿಂದ ತ್ಯಾಜ್ಯವನ್ನು ಎಸೆಯುವ ಸಮಸ್ಯೆ ತೀವ್ರವಾಗಿದೆ. -ಪ್ರವೀಣ್‌ ಬಿ.ತುಂಬೆ, ಅಧ್ಯಕ್ಷರು, ಗ್ರಾ.ಪಂ. ತುಂಬೆ

ಜನರಿಗೂ ಗ್ರಾಮದ ಮಾಹಿತಿ ಅಗತ್ಯ ನಮ್ಮ ಜ್ಯೋತಿಗುಡ್ಡೆ ಪ್ರದೇಶವು ತುಂಬೆ-ಕಳ್ಳಿಗೆ ಗ್ರಾಮಗಳ ಅಂಚಿನ ಪ್ರದೇಶವಾಗಿದ್ದು, ಅಭಿವೃದ್ಧಿಯಲ್ಲಿ ಹಿಂದುಳಿದಿತ್ತು. ಸದ್ಯಕ್ಕೆ ಅಂತಹ ತೊಂದರೆ ಇಲ್ಲ. ಬಹಳ ಮುಖ್ಯವಾಗಿ ಗ್ರಾಮದ ಅಭಿವೃದ್ಧಿಯ ದೃಷ್ಟಿ ಯಿಂದ ಜನರು ಸರಕಾರದ ಸೌಲಭ್ಯ, ಮಾಹಿತಿ ಹಕ್ಕು ಕಾಯ್ದೆ ಮೊದಲಾದ ವಿಷಯಗಳ ಕುರಿತು ತಿಳಿದುಕೊಳ್ಳಬೇಕು. ನೀರಿನ ಸಮಸ್ಯೆಯ ಕುರಿತು ಮಾತನಾಡುವ ನಾವು ನೀರಿಂಗಿಸುವಿಕೆಯ ಕುರಿತೂ ಗಮನಹರಿಸಬೇಕಿದೆ. –ಉದಯಕುಮಾರ್‌, ಜ್ಯೋತಿಗುಡ್ಡೆ  

-ಕಿರಣ್‌ ಸರಪಾಡಿ

 

Advertisement

Udayavani is now on Telegram. Click here to join our channel and stay updated with the latest news.

Next