ಬಂಟ್ವಾಳ: ಗುರುವಿನ ಛಾಯೆ ಅಥವಾ ನೆರಳು ಇದ್ದರೆ ಸಾಕು, ಆಗ ವಿದ್ಯಾರ್ಥಿಯಾದವನು ಏನನ್ನೂ ಸಾಧಿಸಬಹುದು. ಆದರೆ ವಿದ್ಯಾರ್ಥಿಗಳಲ್ಲಿ ಆಸಕ್ತಿ, ಗುರಿ ಇರಬೇಕಾದುದು ಅಗತ್ಯ ಎಂದು ಬೊಕ್ಕಪಟ್ಟಣ ಸರಕಾರಿ ಪ.ಪೂ. ಕಾಲೇಜಿನ ಉಪನ್ಯಾಸಕ ವಾಸುದೇವ ಬೆಳ್ಳೆ ಹೇಳಿದರು. ಅವರು ತುಂಬೆ ಪ.ಪೂ. ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ವಿದಾಯಕೂಟದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಇಂದಿನ ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸದ ಕೊರತೆ ಎದ್ದು ಕಾಣುತ್ತಿದೆ. ಅದು ನಿವಾರಣೆಯಾಗಬೇಕಾದರೆ ಸೋತರೂ ಮುನ್ನಡೆಯುವ, ಸತತ ಪರಿಶ್ರಮದ, ಹಿರಿಯರ ಮಾರ್ಗದರ್ಶನ ಕೇಳುವ, ಅನುಸರಿಸುವ ಪ್ರವೃತ್ತಿ ವಿದ್ಯಾರ್ಥಿಗಳಲ್ಲಿ ಬೆಳೆಯಬೇಕಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತುಂಬೆ ಕಾಲೇಜಿನ ಪ್ರಾಂಶುಪಾಲ ಕೆ. ಎನ್. ಗಂಗಾಧರ ಆಳ್ವ ಮಾತನಾಡಿ, ವಿದ್ಯಾರ್ಥಿಗಳು ಇಂದಿನ ಸ್ಪರ್ಧಾ ಯುಗದಲ್ಲಿ ಸತತ ಅಭ್ಯಾಸ, ಶ್ರದ್ಧೆ, ಮಾನವೀಯತೆ ಇತ್ಯಾದಿ ಅಮೂಲ್ಯ ಗುಣ ಬೆಳೆಸಿಕೊಂಡು ಭವಿಷ್ಯತ್ತಿನಲ್ಲಿ ಉತ್ತಮ ನಾಗರಿಕರಾಗಬೇಕೆಂದರು.
ವಿದ್ಯಾರ್ಥಿಗಳ ವತಿಯಿಂದ ಹರೀಶ್ ಕುಮಾರ್, ಲಿಖೀತಾ ಹಾಗೂ ಅಝಿ¾ಯಾ ತಮ್ಮ ಕಲಿಕಾ ಅನುಭವಗಳ ಕುರಿತಾಗಿ ಮಾತನಾಡಿದರು.
ಉಪನ್ಯಾಸಕರಾದ ಸುಬ್ರಹ್ಮಣ್ಯ ಭಟ್, ಡಾ| ವಿಶ್ವನಾಥ ಪೂಜಾರಿ, ಸಾಯಿರಾಮ್ ನಾಯಕ್, ಶರ್ಮಿಳಾ, ಅಮಿತಾ, ಆಡಳಿತಾಧಿಕಾರಿ ಕಿಶೋರ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು. ಉಪನ್ಯಾಸಕ ದಿನೇಶ ಶೆಟ್ಟಿ ಅಳಿಕೆ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ಡಿ. ಬಿ. ಅಬ್ದುಲ್ ರಹಿಮಾನ್ ವಂದಿಸಿದರು. ಉಪನ್ಯಾಸಕಿ ಪ್ರಪುಲ್ಲಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.