ಹರ್ಯಾಣ:ಬೀದಿ ನಾಯಿಗಳು ಸಾಮಾನ್ಯವಾಗಿ ದಾಳಿ ನಡೆಸಿರುವ ಘಟನೆಗಳೇ ಹೆಚ್ಚಾಗಿ ಓದಿರುತ್ತೀರಿ. ಆದರೆ ಅದಕ್ಕೊಂದು ಅಪವಾದ ಎಂಬಂತೆ ಚರಂಡಿಗೆ ಎಸೆದಿದ್ದ ಮಗುವನ್ನು ಬೀದಿ ನಾಯಿಗಳ ಗುಂಪೊಂದು ಹೊರಗೆಳೆದು ಬೊಗಳುವ ಮೂಲಕ ದಾರಿಯಲ್ಲಿ ಹೋಗುತ್ತಿದ್ದವರ ಗಮನ ಸೆಳೆದು ರಕ್ಷಿಸಿದ ಘಟನೆ ಹರ್ಯಾಣದಲ್ಲಿ ನಡೆದಿದೆ.
ನವಜಾತ ಹೆಣ್ಣು ಶಿಶುವನ್ನು ಪ್ಲಾಸ್ಟಿಕ್ ಕವರ್ ನಲ್ಲಿ ಸುತ್ತಿ ಮಹಿಳೆಯೊಬ್ಬಳು ಹರ್ಯಾಣದ ಕೈಥಾಲ್ ಪಟ್ಟಣ ಸಮೀಪದ ಚರಂಡಿಗೆ ಎಸೆದಿದ್ದಳು. ಇದನ್ನು ಗಮನಿಸಿದ ಬೀದಿನಾಯಿಗಳ ಹಿಂಡು ಪ್ಲಾಸ್ಟಿಕ್ ನಲ್ಲಿ ಸುತ್ತಿದ್ದ ಮಗುವನ್ನು ಮೇಲಕ್ಕೆ ತಂದು, ಪ್ಲಾಸ್ಟಿಕ್ ಗಳನ್ನು ಹರಿದಿದ್ದವು. ತದನಂತರ ದಾರಿಯಲ್ಲಿ ಹೋಗುವವರ ಗಮನ ಸೆಳೆಯಲು ಬೊಗಳಲು ಆರಂಭಿಸಿದ್ದವು.
ಇದನ್ನು ಗಮನಿಸಿದ ಪಾದಚಾರಿಗಳು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು. ಈ ಎಲ್ಲಾ ಘಟನೆ ಸಮೀಪದಲ್ಲಿ ಇದ್ದ ಸಿಸಿಟಿವಿಯಲ್ಲಿ ದಾಖಲಾಗಿದೆ. ಸಿಸಿಟಿವಿ ಫೂಟೇಜ್ ನಲ್ಲಿ, ಮಹಿಳೆಯೊಬ್ಬಳು ಮಗುವನ್ನು ಪ್ಲಾಸ್ಟಿಕ್ ನಲ್ಲಿ ಸುತ್ತಿ ಚರಂಡಿಗೆ ಎಸೆದಿದ್ದು, ಬಳಿಕ ನಾಯಿಗಳು ಮಗುವನ್ನು ಚರಂಡಿಯಿಂದ ಮೇಲಕ್ಕೆ ತಂದಿದ್ದು ದಾಖಲಾಗಿದೆ ಎಂದು ಪೊಲೀಸರು ಐಎಎನ್ ಎಸ್ ಗೆ ತಿಳಿಸಿದ್ದಾರೆ.
ಈ ಘಟನೆ ಗುರುವಾರ ಮುಂಜಾನೆ 4ಗಂಟೆಗೆ ನಡೆದಿರುವುದಾಗಿ ಪೊಲೀಸರು ವಿವರಿಸಿದ್ದಾರೆ. ಮಗುವನ್ನು ಚಿಕಿತ್ಸೆಗಾಗಿ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೆಣ್ಣು ಮಗುವಿನ ತೂಕ 1,100 ಗ್ರಾಂನಷ್ಟಿದ್ದು, ಮಗುವಿನ ಸ್ಥಿತಿ ಗಂಭೀರವಾಗಿದೆ ಎಂದು ಸಿವಿಲ್ ಆಸ್ಪತ್ರೆಯ ಮೆಡಿಕಲ್ ಅಧಿಕಾರಿ ತಿಳಿಸಿರುವುದಾಗಿ ವರದಿ ವಿವರಿಸಿದೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.