Advertisement

ಸಿಡಿಮದ್ದು ತಾಲೀಮಿಗೆ ಬೆದರಿದ ಅಶ್ವ, ಗಜಪಡೆ

11:56 AM Sep 09, 2017 | Team Udayavani |

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಸಿದ್ಧತೆಗಳು ಆರಂಭವಾಗುತ್ತಿರುವ ಬೆನ್ನಲ್ಲೇ ದಸರಾ ಗಜಪಡೆ ಹಾಗೂ ಕುದುರೆಗಳಿಗೆ ಅರಮನೆ ಆವರಣದಲ್ಲಿ ಶುಕ್ರವಾರ ಕುಶಾಲತೋಪು ಸಿಡಿಸುವ ಮೂಲಕ ಯಶಸ್ವಿಯಾಗಿ ತಾಲೀಮು ನಡೆಸಲಾಯಿತು.

Advertisement

 ಅರಮನೆಯ ವರಹಾ ದ್ವಾರದಲ್ಲಿ ನಡೆದ ತಾಲೀಮಿನಲ್ಲಿ ನಗರ ಸಶಸ್ತ್ರ ಮೀಸಲು ಪೊಲೀಸ್‌ಪಡೆ(ಸಿಎಆರ್‌) ಸಿಬ್ಬಂದಿ ಕುಶಾಲತೋಪು ಸಿಡಿಸುವ ತಾಲೀಮು ನಡೆಸಿದರು. ಕಳೆದ ಆ.25 ರಿಂದಲೇ ಕುಶಾಲತೋಪು ಸಿಡಿಸಲು ಡ್ರೈ ಪ್ರಾಕ್ಟೀಸ್‌ ಪ್ರಾರಂಭಿಸಿದ್ದ ಸಿಎಆರ್‌ನ 30 ಸಿಬ್ಬಂದಿ, ಶುಕ್ರವಾರ ಕುಶಾಲತೋಪು ಸಿಡಿಸಿದರು.

ದಸರಾ ಜಂಬೂಸವಾರಿ ಮೆರವಣಿಗೆ ಆರಂಭಕ್ಕೂ ಮುನ್ನ ಹಾಗೂ ಬನ್ನಿಮಂಟಪದಲ್ಲಿ ನಡೆಯುವ ಪಂಜಿನ ಕವಾಯತಿಗೂ ಮುನ್ನ 3 ಸುತ್ತುಗಳಲ್ಲಿ 21 ಕುಶಾಲತೋಪು ಸಿಡಿಸಲಾಗುತ್ತದೆ. ಈ ಸಂದರ್ಭದಲ್ಲಿ ದಸರಾ ಆನೆಗಳು ಹಾಗೂ ಕುದುರೆಗಳು ವಿಚಲಿತಗೊಳ್ಳಬಾರದೆಂಬ ಕಾರಣದಿಂದ ಪ್ರತಿಬಾರಿಯೂ ದಸರೆಗೂ ಮೊದಲು ಕುಶಾಲತೋಪು ಸಿಡಿಸಲಾಗುತ್ತದೆ. 

ಈ ಹಿನ್ನೆಲೆಯಲ್ಲಿ ಶುಕ್ರವಾರ ನಡೆದ ಮೊದಲ ತಾಲೀಮಿನಲ್ಲಿ ಸಿಎಆರ್‌ ಸಿಬ್ಬಂದಿ ಒಟ್ಟು 12 ಕುಶಾಲತೋಪುಗಳನ್ನು ಸಿಡಿಸಿದರು. ದಸರೆ ವೇಳೆ ಕುಶಾಲತೋಪು ಸಿಡಿಸಲು 7 ಫಿರಂಗಿ ಗಾಡಿಗಳನ್ನು ಬಳಸಲಾಗುವುದು. ಆದರೆ, ಮೊದಲ ಸುತ್ತಿನ ತಾಲೀಮಿಗಾಗಿ 3 ಫಿರಂಗಿ ಗಾಡಿಗಳನ್ನು ಮಾತ್ರವೇ ಬಳಸಲಾಗಿತ್ತು. ತಾಲೀಮಿನ ಸಂದರ್ಭದಲ್ಲಿ 15 ಆನೆ, 24 ಅಶ್ವಗಳು ಸ್ಥಳದಲ್ಲಿದ್ದವು. 

ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕುಂಡಲ ಮಾತನಾಡಿ, ಕುಶಾಲತೋಪು ಸಿಡಿಸುವ ಮೊದಲ ತಾಲೀಮು ಯಶಸ್ವಿಯಾಗಿ ನಡೆದಿದೆ. 4 ಆನೆಗಳು ಹೊರತು ಪಡಿಸಿ ಉಳಿದೆಲ್ಲಾ ಆನೆಗಳು ಕುಶಾಲತೋಪಿನ ಶಬ್ಧಕ್ಕೆ ಹೊಂದಿಕೊಂಡಿವೆ. ಮೊದಲ ಬಾರಿಗೆ ದಸರೆಯಲ್ಲಿ ಪಾಲ್ಗೊಂಡಿರುವ ಭೀಮ ಮತ್ತು ಕೃಷ್ಣ ಆನೆಗಳು ಬಾರಿ ಶಬ್ಧಕ್ಕೆ ವಿಚಲಿತರಾಗದೆ ಇರುವುದು ಅಚ್ಚರಿ ಮೂಡಿಸಿದೆ ಎಂದರು.

Advertisement

ವೇದಾ ಕೃಷ್ಣಮೂರ್ತಿ ಭೇಟಿ: ಅರಮನೆ ಆವರಣದಲ್ಲಿ ನಡೆದ ಕುಶಾಲತೋಪು ಸಿಡಿಸುವ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ಭಾರತ ಮಹಿಳಾ ಕ್ರಿಕೆಟ್‌ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಎಲ್ಲರ ಗಮನ ಸೆಳೆದರು. ತಾಲೀಮಿನಲ್ಲಿ ಭಾಗವಹಿಸಿದ್ದ ದಸರಾ ಆನೆಗಳೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

ನಗರ ಪೊಲೀಸ್‌ ಆಯುಕ್ತ ಡಾ.ಎ.ಸುಬ್ರಮಣ್ಯೇಶ್ವರ ರಾವ್‌, ಡಿಸಿಪಿಗಳಾದ ಎನ್‌.ವಿಷ್ಣುವರ್ಧನ್‌, ಡಾ.ವಿಕ್ರಂ ಅಮಟೆ, ಅಶ್ವಾರೋಹಿಪಡೆ ಪಡೆಯ ಕಮಾಂಡೆಂಟ್‌ ಪ್ರವೀಣ್‌ ಆಳ್ವಾ, ಎಸಿಪಿ ಸುರೇಶ್‌, ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕುಂಡಲು, ಪಶುವೈದ್ಯ ಡಾ.ನಾಗರಾಜ್‌ ಇದ್ದರು.

ಶಬ್ಧಕ್ಕೆ ಬೆಚ್ಚಿ ಡಿಸಿಪಿ ಕಾರಿಗೆ ಒದ್ದ ಕುದುರೆಗಳು
ಸಿಡಿಮದ್ದು ತಾಲೀಮಿನ ವೇಳೆ ಕುಶಾಲತೋಪಿನ ಕಿವಿಡಚಿಕ್ಕುವ ಶಬ್ದಕ್ಕೆ ಮೊದಲ ಬಾರಿಗೆ ದಸರಾದಲ್ಲಿ ಪಾಲ್ಗೊಳ್ಳುತ್ತಿರುವ ದ್ರೋಣ ಹೆಚ್ಚು ಗಾಬರಿಯಾದರೆ, ಗೋಪಾಲಸ್ವಾಮಿ, ವಿಜಯ, ಪ್ರಶಾಂತ ಆನೆಗಳು ಸ್ವಲ್ಪ ಮಟ್ಟಿಗೆ ಗಾಬರಿಗೊಂಡವು. ಇನ್ನೂ ಸಿಡಿಮದ್ದಿನ ಶಬ್ಧಕ್ಕೆ ಕುದುರೆಗಳು ಬೆಚ್ಚಿ ಪಕ್ಕದಲ್ಲಿದ್ದ ಡಿಸಿಪಿ ವಿಷ್ಣುವರ್ಧನ್‌ರ ಇನ್ನೋವಾ ಕಾರಿಗೆ ಒದ್ದವು.

ಪರಿಣಾಮ ಕಾರಿನ ಕಿಟಕಿ ಗಾಜು ಜಖಂಗೊಂಡವು. ಇದಲ್ಲದೆ ದಸರೆಯಲ್ಲಿ ಭಾಗವಹಿಸಿರುವ ದುಬಾರೆ ಆನೆ ಶಿಬಿರದ 61 ವರ್ಷದ ಪ್ರಶಾಂತ ಕಳೆದ ಬಾರಿಯಂತೆ ಈ ಬಾರಿಯೂ ಕುಶಾಲತೋಪು ಶಬ್ದಕ್ಕೆ ಬೆಚ್ಚಿದ. ಅಲ್ಲದೆ ಕುಶಾಲತೋಪು ಸಿಡಿಸುವ ಜಾಗಕ್ಕೆ ಬರಲು ಹಿಂದೇಟು ಹಾಕಿದ ಪರಿಣಾಮ ಈತನನ್ನು ಸಮೀಪದ ಮರವೊಂದಕ್ಕೆ ಕಟ್ಟಿಹಾಕಿ ತಾಲೀಮು ನಡೆಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next