Advertisement

Team India ತ್ರೋಡೌನ್‌ ಸ್ಪೆಷಲಿಸ್ಟ್‌  ರಾಘವೇಂದ್ರರ ಕುಕ್ಕೆ ಸುಬ್ರಹ್ಮಣ್ಯ ನಂಟು

12:18 AM Jul 06, 2024 | Team Udayavani |

ಸುಬ್ರಹ್ಮಣ್ಯ: ಭಾರತೀಯ ಕ್ರಿಕೆಟ್‌ ತಂಡಕ್ಕೂ ಕುಕ್ಕೆ ಸುಬ್ರಹ್ಮಣ್ಯಕ್ಕೂ ಎಲ್ಲಿಲ್ಲದ ನಂಟು. ಕ್ರಿಕೆಟ್‌ ದಂತಕತೆ ಸಚಿನ್‌ ತೆಂಡುಲ್ಕರ್‌ ಆದಿಯಾಗಿ ಬಹುತೇಕ ಎಲ್ಲ ಕ್ರಿಕೆಟ್‌ ದಿಗ್ಗಜರೂ ಸುಬ್ರಹ್ಮಣ್ಯನ ಮುಂದೆ ತಲೆ ಬಾಗಿದವರೇ. ಪ್ರಸ್ತುತ ಭಾರತೀಯ ಕ್ರಿಕೆಟ್‌ ತಂಡದ ತ್ರೋಡೌನ್‌ ಸ್ಪೆಷಲಿಸ್ಟ್‌ ರಾಘವೇಂದ್ರ ಕೂಡ ಇದೇ ಸಾಲಿಗೆ ಸೇರುತ್ತಾರೆ.

Advertisement

ರಾಘವೇಂದ್ರ ಅವರು ಕಳೆದ 25 ವರ್ಷಗಳಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದು ಪ್ರಾರ್ಥನೆ ಸಲ್ಲಿಸಿ, ತಮ್ಮ ಇಷ್ಟಾರ್ಥ ಪೂರೈಸಿಕೊಳ್ಳುತ್ತಿದ್ದಾರೆ. ಭಾರತದ ಸರಣಿಗೂ ಮೊದಲು ಕುಕ್ಕೆ ಸುಬ್ರಹ್ಮಣ್ಯದಲ್ಲಿ ತಂಡದ ಹೆಸರಿನಲ್ಲಿ ಪೂಜೆ ಸಲ್ಲಿಸುತ್ತಾರೆ. ತಂಡ ಗೆದ್ದ ಬಳಿಕ ಕ್ಷೇತ್ರಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸುವುದು ರಾಘವೇಂದ್ರ ಅವರ ಸಂಪ್ರದಾಯ.
ರಾಘವೇಂದ್ರ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾದವರು. ಎಳೆವೆಯಲ್ಲೇ ಕ್ರಿಕೆಟ್‌ ಗೀಳು. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಕ್ರಿಕೆಟ್‌ ಪಂದ್ಯಗಳನ್ನು ನೋಡಿಯೇ ತನ್ನ ಪ್ರತಿಭೆಯನ್ನು ಅನಾವರಣಗೊಳಿಸಿದವರು. ಕ್ರೀಡಾಂಗಣದ ಹೊರಗೆ ಬಂದ ಚೆಂಡನ್ನು ಹೆಕ್ಕಿಕೊಡುತ್ತಿದ್ದ ರಾಘವೇಂದ್ರ ಇದೀಗ ದೇಶ-ವಿದೇಶಗಳ ಕ್ರಿಕೆಟ್‌ ತಂಡಕ್ಕೆ ಬೇಕಾದ ತ್ರೋ ಡೌನ್‌ ಸ್ಪೆಷಲಿಸ್ಟ್‌!

ಪೂಜೆ ನಿರಂತರ…
ಮೊದಲ ಬಾರಿಗೆ ಕುಕ್ಕೆಗೆ ಬಂದಾಗ ಛತ್ರದ ಹೊರಗೆ ಚಾಪೆ ಹಾಕಿ ಮಲಗಿದ್ದ ರಾಘವೇಂದ್ರ, ಕುಕ್ಕೆ ಸುಬ್ರಹ್ಮಣ್ಯ ಕೃಪೆಗೆ ಪಾತ್ರರಾಗಿ ಇಂದು ಬಹಳ ಎತ್ತರಕ್ಕೆ ಬೆಳೆದಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರಲು ಸಾಧ್ಯವಾಗದಿದ್ದಾಗ ಕ್ಷೇತ್ರ ಶಿಷ್ಟಾಚಾರ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುವ ಪ್ರಮೋದ್‌ ಕುಮಾರ್‌ ಹಾಗೂ ಹರೀಶ್‌, ಸ್ಥಳೀಯರಾದ ಪಪ್ಪು ಲೋಕೇಶ್‌, ದೀಪಕ್‌ ನಂಬಿಯಾರ್‌ ಅವರ ಮೂಲಕ ಭಾರತೀಯ ತಂಡದ ಹೆಸರಿನಲ್ಲಿ ಸೇವೆ ಸಲ್ಲಿಸುತ್ತಾರೆ.
ಟಿ20 ವಿಶ್ವಕಪ್‌ ಆರಂಭಕ್ಕೂ ಕೆಲವು ದಿನಗಳ ಮೊದಲು ಕುಕ್ಕೆಗೆ ಆಗಮಿಸಿ ಪ್ರಾರ್ಥನೆ ಮಾಡಿ ತೆರಳಿದ್ದರು. ಇದೀಗ ಭಾರತ ತಂಡ ಜಯಭೇರಿ ಮೊಳಗಿಸಿದೆ. ರಾಘವೇಂದ್ರ ಮುಂದಿನ ದಿನಗಳಲ್ಲಿ ಕ್ಷೇತ್ರಕ್ಕೆ ಆಗಮಿಸಿ ಪೂಜೆ ಸಲ್ಲಿಸುವ ನಿರೀಕ್ಷೆ ಇದೆ.

ಕುಕ್ಕೆ ಮತ್ತು ಭಾರತದ ಕ್ರಿಕೆಟಿಗರು
ಭಾರತೀಯ ಕ್ರಿಕೆಟ್‌ಗೂ ಕುಕ್ಕೆಗೂ ಅವಿನಾಭಾವ ಸಂಬಂಧವಿದೆ. ಭಾರತೀಯ ಕ್ರಿಕೆಟ್‌ ತಂಡದ ದಿಗ್ಗಜರೆಲ್ಲ ಸುಬ್ರಹ್ಮಣ್ಯ ಸ್ವಾಮಿಯ ಪರಮಭಕ್ತರೇ ಆಗಿದ್ದಾರೆ. ತಾರಾ ಕ್ರಿಕೆಟಿಗರಾದ ಅನಿಲ್‌ ಕುಂಬ್ಳೆ, ಸಚಿನ್‌ ತೆಂಡುಲ್ಕರ್‌, ವಿವಿಎಸ್‌ ಲಕ್ಷ¾ಣ್‌, ರಾಹುಲ್‌ ದ್ರಾವಿಡ್‌, ರವಿಶಾಸ್ತ್ರಿ, ಜಾವಗಲ್‌ ಶ್ರೀನಾಥ್‌, ಮನೀಷ್‌ ಪಾಂಡೆ, ಕೆ.ಎಲ್‌. ರಾಹುಲ್‌, ರಾಬಿನ್‌ ಉತ್ತಪ್ಪ, ಮಾಯಾಂಕ್‌ ಅಗರ್ವಾಲ್‌ ಮೊದಲಾದವರೆಲ್ಲ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬಂದು ಯಶಸ್ಸಿನ ಮೆಟ್ಟಿಲನ್ನು ಏರಿದವರೇ. ಭಾರತದ ಈಗಿನ ತಂಡದಲ್ಲೂ ಹೆಚ್ಚಿನ ಸಂಖ್ಯೆಯ ಕ್ರೀಡಾಳುಗಳು ಸುಬ್ರಹ್ಮಣ್ಯ ಸ್ವಾಮಿಯ ಭಕ್ತರೇ ಆಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next