Advertisement

Uv Fusion: ಮೈಮನ ಪುಳಕಿತಗೊಳಿಸುವ ಅಯ್ಯನಕೆರೆ

02:38 PM May 20, 2024 | Team Udayavani |

ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆ ಒಂದು ಪ್ರಮುಖ ಪ್ರವಾಸಿ ಜಿಲ್ಲೆಯಾಗಿದೆ. ಇಲ್ಲಿರುವ ಸಾಕಷ್ಟು ಸ್ಥಳಗಳು ತಮ್ಮ ಅದ್ಭುತ ಪ್ರಕೃತಿ ಸೌಂದರ್ಯಗಳಿಂದ ಸದಾ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಅಲ್ಲದೆ ಪಶ್ಚಿಮ ಘಟ್ಟಗಳ ನಯನ ಮನೋಹರ ಪ್ರಕೃತಿಯು ಈ ಜಿಲ್ಲೆಯಲ್ಲಿ ಬೀಡು ಬಿಟ್ಟಿದ್ದಾಳೆ ಎಂದರೂ ತಪ್ಪಾಗದು. ಬೆಟ್ಟಗಳಿಂದ ಹಿಡಿದು ಜಲಪಾತಗಳು, ಕೆರೆಗಳು ಹಾಗೂ ಧಾರ್ಮಿಕ ಕೇಂದ್ರಗಳು ಜಿಲ್ಲೆಯಾದ್ಯಂತ ಕಂಡುಬರುತ್ತವೆ.

Advertisement

ಕರ್ನಾಟಕದಲ್ಲೇ ಅತೀ ದೊಡ್ಡ ಕೆರೆ ಎಂಬ ಖ್ಯಾತಿಗೆ ಪಾತ್ರವಾದ ದಾವಣಗೆರೆ ಜಿಲ್ಲೆಯ ಸೂಳೆಕೆರೆ ಅನಂತರ ಎರಡನೆಯ ದೊಡ್ಡ ಕೆರೆ ಎಂದೆ ಪರಿಗಣಿಸಲ್ಪಟ್ಟ ಅಯ್ಯನಕೆರೆ ಇರುವುದು ಈ ಚಿಕ್ಕಮಗಳೂರು ಜಿಲ್ಲೆಯಲ್ಲಿಯೆ. ಚಿಕ್ಕಮಗಳೂರು ನಗರ ಕೇಂದ್ರದ ಉತ್ತರಕ್ಕೆ 20 ಕಿ.ಮೀ. ದೂರದಲ್ಲಿ ಕಡೂರಿಗೆ ಹೋಗುವ ಮಾರ್ಗದಲ್ಲಿ ಈ ಸುಂದರ ಹಾಗೂ ನಯನ ಮನೋಹರವಾದ ಕೆರೆಯನ್ನು ಕಾಣಬಹುದು. ಇದಕ್ಕೆ ಹತ್ತಿರದಲ್ಲಿರುವ ಹಳ್ಳಿ ಎಂದರೆ ಸಕ್ರೆಪಟ್ಟಣ.

ಪ್ರವಾಸಿ ಅನಾನುಕೂಲತೆಗಳು ಹಾಗೂ ಸಾಕಷ್ಟು ಜನರು ಭೇಟಿ ನೀಡದಿರುವ ಕಾರಣಕ್ಕೆ ಇದು ಅಷ್ಟೊಂದು ಹೆಸರುವಾಸಿಯಾಗಿಲ್ಲವಾದರೂ ಭೇಟಿ ಯೋಗ್ಯ ಪ್ರವಾಸಿ ತಾಣವಾಗಿದೆ ಈ ಅದ್ಭುತ ಕೆರೆ. ಈ ಕೆರೆಯ ನೋಟ ನೋಡಿದರೊಮ್ಮೆ ಸಾಕು ಇದು ಯಾವ ವಿದೇಶಿ ಪ್ರವಾಸಿ ತಾಣಕ್ಕೂ ಕಡಿಮೆಯಂತಿಲ್ಲ. ಸ್ವಿಟ್ಜರ್ಲ್ಯಾಂಡ್‌ ದೇಶದ ಸೊಬಗನ್ನು ನೆನಪು ಮಾಡುವಂತಿದೆ ಈ ಕೆರೆ ಹಾಗೂ ಸುತ್ತಮುತ್ತಲಿನ ಹಸಿರುಮಯ ಪರಿಸರ.

ಇತಿಹಾಸ ಕೆದಕಿದರೆ, ಇದು ಸುಮಾರು 900 ವರ್ಷಗಳಷ್ಟು ಪುರಾತನವಾದ ಕೆರೆ ಎಂದು ತಿಳಿದುಬರುತ್ತದೆ. ಸುಮಾರು 12 ನೆಯ ಶತಮಾನದಲ್ಲಿ ಈ ಪ್ರದೇಶದ‌ ಅರಸನಾಗಿದ್ದ ರಾಜಾ ರುಕಾ¾ಂಗದ ರಾಯ ಎಂಬಾತನು ರೈತರು ಮಳೆಯಿಲ್ಲದ ಸಮಯದಲ್ಲೂ ನೀರಿಗೆ ಪರಿತಪಿಸದೆ ಬೆಳೆ ಬೆಳೆಯಲೆಂಬ ಸದುದ್ದೇಶದಿಂದ ಈ ಕೆರೆಯನ್ನು ನಿರ್ಮಿಸಿದ. ಅನಂತರ ಹೊಯ್ಸಳರು, ಮೈಸೂರು ಅರಸರು ಇತ್ಯಾದಿ ಈ ಪ್ರದೇಶ ಆಕ್ರಮಿಸಿಕೊಂಡರಾದರೂ ಈ ಕೆರೆಯನ್ನು ನಾಶ ಮಾಡದೆ ಹಾಗೆಯೆ ಪೋಷಿಸಿಕೊಂಡು ಬಂದರು.

ಇನ್ನೊಂದು ದಂತಕಥೆಯ ಪ್ರಕಾರ, ಹಿಂದೆ ಈ ಕೆರೆಯು ಮೇಲಿಂದ ಮೇಲೆ ಬತ್ತಿಹೋಗುತ್ತಿತ್ತು. ಆಗ ಆ ಪ್ರದೇಶದ ಸಂತರಾಗಿದ್ದ ಶ್ರೀ ನಿರ್ವಾಣಸ್ವಾಮಿಯವರ ಅಣತಿಯಂತೆ ಪೂಜಾ ವಿಧಿ ವಿಧಾನಗಳನ್ನು ಅನುಸರಿಸಿದಾಗ ಕೆರೆಯ ಬತ್ತುವಿಕೆ ಹೊರಟು ಹೋಯಿತು. ನಿರ್ವಾಣಸ್ವಾಮಿಯವರನ್ನು ಅಯ್ಯ ಎಂತಲೂ ಕರೆಯುತ್ತಿದ್ದರಿಂದ ಈ ಕೆರೆಗೆ ನಂತರ ಅಯ್ಯನಕೆರೆ ಎಂಬ ಹೆಸರು ಬಂದಿತೆನ್ನಲಾಗಿದೆ. ಮತ್ತೂಂದು ರೋಚಕ ದಂತಕಥೆ ಈ ಕೆರೆಯೊಂದಿಗೆ ನಂಟು ಹಾಕಿಕೊಂಡಿದೆ. ಆ ಕಥೆಯ ಮುಖ್ಯ ಪಾತ್ರಧಾರಿಗಳು ಹೊನ್ನಬಿಲ್ಲ ಹಾಗೂ ಚೆನ್ನಬಿಲ್ಲ.

Advertisement

ರುಕ್ಮಾಂಗದನ ಕಾಲದಲ್ಲಿ ಹೊನ್ನಬಿಲ್ಲ ಹಾಗೂ ಚೆನ್ನಬಿಲ್ಲ ಎಂಬಿಬ್ಬರು ಕೆರೆಯ ನಿರ್ವಹಣೆಯನ್ನು ನೋಡಿಕೊಳ್ಳುತ್ತಿದ್ದರು. ಒಂದು ಪೌರ್ಣಮಿಯ ದಿನದಂದು ದೇವತೆಯ ಆಕಾಶವಾಣಿಯೊಂದು, ಈ ಕೆರೆಯಲ್ಲಿ ನೀರು ತುಂಬಿ ಪ್ರವಾಹ ಉಂಟಾಗಿ ಹಳ್ಳಿಯನ್ನೆ ಕೊಚ್ಚಿಕೊಂಡು ಹೋಗುತ್ತದೆಂದು ಹೇಳಿದಾಗ, ಇಬ್ಬರೂ ಚಿಂತಾಕ್ರಾಂತರಾಗಿ ದೇವಿಯನ್ನು ತಾವು ತಮ್ಮ ಒಡೆಯನನ್ನು ಭೇಟಿಯಾಗಿ ಮರಳುವವರೆಗೆ ಪ್ರವಾಹ ಉಂಟಾಗದಂತೆ ನೋಡಿಕೊಳ್ಳಲು ಪ್ರಾರ್ಥಿಸಿದರು.

ಅನಂತರ ಇಬ್ಬರೂ ಹೇಗಾದರೂ ಮಾಡಿ ತಮ್ಮ ಹಳ್ಳಿಯನ್ನು ಉಳಿಸಿಕೊಳ್ಳಬೇಕೆಂಬ ವಿಚಾರ ಮಾಡಿ, ದೇವಿಗೆ ಹೇಳಿಕೊಂಡಂತೆ ಮತ್ತೆ ಮರಳದ ಹಾಗೆ ಸಂದರ್ಭ ತರಲು ತಮ್ಮ ಶಿರಗಳನ್ನು ತಾವೇ ಕಡಿದುಕೊಂಡು ಪ್ರಾಣ ತ್ಯಾಗ ಮಾಡಿದರು. ಹೀಗಾಗಿ ಇಂದಿಗೂ ಅವರಿಬ್ಬರು ಇನ್ನೂ ಮರಳದಿರುವುದಕ್ಕೆ ಈ ಕೆರೆಯಲ್ಲಿ ಪ್ರವಾಹ ಉಂಟಾಗಿಲ್ಲ ಎನ್ನಲಾಗುತ್ತದೆ ಹಾಗೂ ಅವರಿಬ್ಬರ ಬಲಿದಾನದ ಕುರುಹಾಗಿ ಕೆರೆಯ ಒಂದು ಸ್ಥಳದಲ್ಲಿ ಮಂಟಪವೊಂದನ್ನು ನಿರ್ಮಿಸಲಾಗಿದೆ. ಅಯ್ಯನಕೆರೆಯ ಇನ್ನೊಂದು ವಿಶೇಷವೆಂದರೆ ಇದರ ಹಿನ್ನೆಲೆಯಲ್ಲಿ ಕಂಡುಬರುವ ದೊಡ್ಡ ಗಾತ್ರದ ಕೋನಾಕಾರದ ಶಕುನಗಿರಿ ಬೆಟ್ಟ. ಇದರ ನೋಟವಂತೂ ಈ ಕೆರೆಯಿಂದ ನೋಡಿದಾಗ ವರ್ಣನಾತೀತ. ಅಷ್ಟೊಂದು ಮನೋಜ್ಞವಾಗಿದೆ ಇಲ್ಲಿನ ದೃಶ್ಯಾವಳಿ. ಅಲ್ಲದೆ ಕೆರೆಯ ತಟದಲ್ಲಿ ಶಕುನಿರಂಗನಾಥನ ದೇವಸ್ಥಾನವಿದ್ದು ಶಿವನಿಗೆ ಮುಡಿಪಾಗಿದೆ.ಅಲ್ಲದೆ ಸುಂದರವಾಗಿ ಕೆತ್ತಲಾದ ವಿಷ್ಣುವಿನ ವಿಗ್ರಹವನ್ನೂ ಇಲ್ಲಿ ಕಾಣಬಹುದು. ಹೊಯ್ಸಳರ ಕಾಲದಲ್ಲಿ ನಿರ್ಮಿತ ಈ ದೇವಾಲಯವನ್ನು ಪ್ರವಾಸಿಗರು ಇಲ್ಲಿಗೆ ತೆರಳಿದಾಗ ಖಂಡಿತವಾಗಿಯೂ ಒಮ್ಮೆ ನೋಡಲೇಬೇಕು.

– ನೈದಿಲೆ,

 ಎಸ್‌ಡಿಎಂ ಕಾಲೇಜು, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next