ಅದು ಕತ್ತಲ ರಾತ್ರಿ. ದಟ್ಟ ಕಾಡಿನ ಹಾದಿಯೂ ಹೌದು. ಆ ಹಾದಿಯಲ್ಲಿ ಸಾಗುವ ಒಂದು ಕಾರು. ಅದರೊಳಗಿರುವ ಐವರು ಗೆಳೆಯರ ಮಾತುಕತೆ. ಅವರೆಲ್ಲರೂ ಹುಡುಕಿ ಹೊರಟಿರೋದು ಒಂದು ಕರಡಿ ಗುಹೆ! ಆ ರಾತ್ರಿಯಲ್ಲಿ ಕಾಡಿನ ಸದ್ದು ಬಿಟ್ಟರೆ, ಆ ಐವರು ಗೆಳೆಯರ ಮಾತುಕತೆ ಹೊರತು ಬೇರೇನೂ ಇಲ್ಲ. ಆದರೂ, ಅಲ್ಲೆಲ್ಲೋ ಒಂದು ಧ್ವನಿ ಕೇಳಿಬರುತ್ತೆ, ಇನ್ನೆಲ್ಲೋ ಕಾರು ಇದ್ದಕ್ಕಿದ್ದಂತೆ ನಿಂತುಬಿಡುತ್ತೆ…! ಅಷ್ಟಕ್ಕೂ ಅಲ್ಲಿ ನಡೆಯುವುದೇನು, ಕೊನೆಗೆ ಅವರೆಲ್ಲರೂ “ಕರಡಿ ಗುಹೆ’ ತಲುಪುತ್ತಾರಾ…? ಇದು “ಮನರೂಪ’ ಚಿತ್ರದ ಮೋಷನ್ ಪೋಸ್ಟರ್‌ನಲ್ಲಿ ಕಾಣಸಿಗುವ ಅಂಶ. ಇಷ್ಟು ಅಂಶಗಳಿವೆ ಅಂದರೆ ಇದೊಂದು ಹಾರರ್ ಚಿತ್ರ ಇರಬೇಕು ಎಂಬ ಅನುಮಾನ ಮೂಡಬಹುದು. ಆದರೆ, ಇದೊಂದು ಸೈಕಲಾಜಿಕಲ್ ಕ್ರೈಂ ಥ್ರಿಲ್ಲರ್ ಚಿತ್ರ. ಹೀಗಂತ “ಮನರೂಪ’ ಕುರಿತು ಹೇಳಿಕೊಂಡರು ನಿರ್ದೇಶಕ ಕಿರಣ್ ಹೆಗಡೆ.
ಕಿರಣ್ ಹೆಗಡೆ ಅವರಿಗೆ ಇದು ಮೊದಲ ಚಿತ್ರ. ಸಿನಿಮಾ ಮುಗಿಸಿರುವ ಅವರು ಬಿಡುಗಡೆ ತಯಾರಿಯಲ್ಲಿದ್ದಾರೆ. “ಇದು ಮನುಷ್ಯನ ಮನಸ್ಸಿನ ಮೇಲೆ ವಿವಿಧ ಛಾಯೆ ಮೂಡಿಸುವ ಚಿತ್ರಣ ಹೊಂದಿದೆ. ದಶಕದ ನಂತರ ಭೇಟಿಯಾಗುವ ಐವರು ಗೆಳೆಯರು ಒಂದು ರಾತ್ರಿ ನಿಗೂಢವಾಗಿರುವ ಕರಡಿಗುಹೆಯ ಅನ್ವೇಷಣೆಗೆ ಹೊರಡುತ್ತಾರೆ. ಕಾಡಿನ ಮಧ್ಯೆ ಹೋಗುವಾಗ, ಹಲವು ಅಡೆತಡೆ ಎದುರಾಗುತ್ತವೆ. ಇಡೀ ಚಿತ್ರ ಕಾಡಲ್ಲೇ ನಡೆಯುತ್ತದೆ. ಆ ಐವರು ಗೆಳೆಯರ ಹೊರತಾಗಿ ಬೇರೆ ಯಾರಾದರೂ ಇದ್ದಾರಾ? ಈ ಪ್ರಶ್ನೆ ಎಲ್ಲರನ್ನೂ ಕಾಡುವ ರೀತಿ ಅಲ್ಲಿ ಅಚ್ಚರಿಯ ಸಂಗತಿಗಳು ನಡೆಯುತ್ತವೆ. ಅದಕ್ಕೆ ಉತ್ತರ ಸಿನಿಮಾ ನೋಡಬೇಕು’ ಎಂಬುದು ನಿರ್ದೇಶಕರ ಮಾತು.
ಐದು ಬೆರಳುಗಳು ಹೇಗೆ ಸಮ ಇಲ್ಲವೋ, ಹಾಗೆ ಐವರು ಗೆಳೆಯರ ಮನಸ್ಥಿತಿ ಕೂಡ ಒಂದೊಂದು ರೀತಿಯಲ್ಲಿರುತ್ತೆ. ಚಿತ್ರದಲ್ಲಿ ಹೊಸ ಜನರೇಷನ್‌ನ ಎದುರಿಸುವ ಸಮಸ್ಯೆ ಏನೆಂಬುದನ್ನು ಹೇಳಲಾಗಿದೆ. ಇಡೀ ಕಾಡು ಒಂದು ಕನ್ನಡಿಯಂತೆ ಬಿಂಬಿತಗೊಂಡಿದೆ. 1980 ರಿಂದ 2000 ರ ಅವಧಿಯಲ್ಲಿ ಹುಟ್ಟಿದವರ ಕಥೆ ಇದು. ಚಾರಣಕ್ಕೆ ಹೋಗುವ ಗೆಳೆಯರ ಮನಸ್ಥಿತಿಯ ಚಿತ್ರಣವಿದು. ಕನ್ನಡಕ್ಕೆ ಹೊಸತಾಗಿರಲಿದೆ. ಹಾಗಾದರೆ, ಇದು ಹಾರರ್ ಚಿತ್ರವಾ? ಗೊತ್ತಿಲ್ಲ. ಆದರೆ, ಗುಮ್ಮ ಎಂಬ ಪಾತ್ರ ಇಲ್ಲೂ ಇದೆ. ಅದೇ ಚಿತ್ರದ ಜೀವಾಳ’ ಎಂಬುದು ನಿರ್ದೇಶಕರ ಮಾತು.
ಚಿತ್ರದ ಪ್ರಮುಖ ಪಾತ್ರ ನಿರ್ವಹಿಸಿರುವ ನಿಶಾ ರಂಗಭೂಮಿ ಹಿನ್ನೆಲೆ ಹೊಂದಿದ್ದಾರೆ. ಈ ಹಿಂದೆ ಮೂರು ಚಿತ್ರಗಳಲ್ಲಿ ನಟಿಸಿದ್ದು, ಇಲ್ಲಿ ಹೊಸ ಪಾತ್ರ, ಹೊಸ ಅನುಭವ ಆಗಿದೆ ಅಂತ ಹೇಳಿಕೊಂಡರು.
ಆರ್ಯನ್ ಇಲ್ಲಿ ಗೊಂದಲ ಸೃಷ್ಟಿಸುವ ಪಾತ್ರ ಮಾಡಿದ್ದಾರಂತೆ. ಸದಾ ಅವರ ಬಳಿಯೊಂದು ಛತ್ರಿ ಇದ್ದು, ಅದೊಂದು ಸಾಂಕೇತಿಕ ಎಂಬಂತೆ ಇಲ್ಲಿ ಬಿಂಬಿಸಲಾಗಿದೆಯಂತೆ. ಇನ್ನು, ಅನೂಷಾರಾವ್, “ಒಂದು ಗೆಳೆಯರ ತಂಡ ಚಾರಣಕ್ಕೆ ಹೋದಾಗ, ಏನೆಲ್ಲಾ ಅವಘಡ ಸಂಭವಿಸುತ್ತವೆ ಎಂಬುದರ ಬಗ್ಗೆ ಚಿತ್ರವಿದ್ದದರೂ, ಇಲ್ಲಿ ಸಾಕಷ್ಟು ವಿಶೇಷ ಸಂಗತಿಗಳಿವೆ. ಅದನ್ನು ಸಿನಿಮಾದಲ್ಲೇ ನೋಡಬೇಕು ಅಂದರು.
ಪ್ರಜ್ವಲ್‌ಗೌಡ ಇಲ್ಲಿ “ಗುಮ್ಮ’ ಯಾಕೆ ಆದೆ ಅನ್ನುವ ಕುತೂಹಲ ಕೆರಳಿಸುತ್ತಾರಂತೆ. ಶಿವ ಇಲ್ಲಿ ಶರವಣ ಪಾತ್ರ ಮಾಡಿದ್ದು, ಇವರೂ ರಂಗಭೂಮಿಯಿಂದ ಬಂದಿದ್ದಾರೆ. ಹಿಂದೆ “ಶುದ್ಧಿ’, “ಕರಿಯ 2′ ಚಿತ್ರದಲ್ಲಿ ನಟಿಸಿದ್ದು, ಇಲ್ಲೊಂದು ವಿಶೇಷ ಪಾತ್ರ ಸಿಕ್ಕಿದೆಯಂತೆ. ದಿಲೀಪ್‌ಕುಮಾರ್ ಅವರಿಗೂ ರಂಗಭೂಮಿಯ ನಂಟು ಇದೆ. ಪಾತ್ರದ ಬಗ್ಗೆ ಹೇಳಿ ಖುಷಿಗೊಂಡರು ಅವರು.
ಪತ್ರಕರ್ತ ಮಹಾಬಲ ಸೀತಾಳಭಾವಿ ಚಿತ್ರಕ್ಕೆ ಸಂಭಾಷಣೆ ಬರೆದಿದ್ದು, “ನಿರ್ದೇಶಕ ಕಿರಣ್ ಹೆಗಡೆ ನನ್ನ ಗೆಳೆಯ. ಅವರೊಂದಿಗೆ ಸೇರಿ ಮಾತುಗಳನ್ನು ಪೋಣಿಸಿದ್ದೇನೆ. ಇದು ನನಗೆ ಹೊಸ ಕ್ಷೇತ್ರ ಎಂದರು’ ಮಹಾಬಲ. ಛಾಯಾಗ್ರಾಹಕ ಗೋವಿಂದರಾಜು, ಸಂಗೀತ ನಿರ್ದೇಶಕ ಸರವಣ “ಮನರೂಪ’ ಕುರಿತು ಮಾತನಾಡಿದರು.
ವಿಜಯ್ ಭರಮಸಾಗರ