ವಿದೇಶದಲ್ಲಿ ನೆಲೆಸಿರುವ ಕನ್ನಡಿಗರಿಗೆ ನಮ್ಮ ಕನ್ನಡ ಭಾಷೆ ಅಂದರೆ ಎಲ್ಲಿಲ್ಲದ ಪ್ರೀತಿ. ಈಗಾಗಲೇ ವಿದೇಶದಲ್ಲಿರುವ ಅನೇಕ ಕನ್ನಡಿಗರು ಕನ್ನಡ ಸಿನಿಮಾ ನಿರ್ಮಾಣ ಮಾಡುವ ಮೂಲಕ ಕನ್ನಡ ಮೇಲಿನ ಪ್ರೀತಿ ತೋರಿದ್ದಾರೆ. ಆ ಸಾಲಿಗೆ ಈಗ “ಬೆಂಗಳೂರು 69′ ಚಿತ್ರದ ನಿರ್ಮಾಪಕರೂ ಸೇರಿದ್ದಾರೆ. ಹೌದು, ಅವರು ಬೇರಾರೂ ಅಲ್ಲ, ಜಾಕೀರ್ ಹುಸೇನ್ ಕರೀಂಸಾಬ್. ಅಪ್ಪಟ ಕನ್ನಡಿಗರಾದ ಇವರು, ದುಬೈನಲ್ಲಿ ನೆಲೆಸಿದ್ದಾರೆ. ಸಿನಿಮಾ ಮೇಲಿನ ಪ್ರೀತಿಯಿಂದ ಕನ್ನಡ ಚಿತ್ರದ ಮೂಲಕ ನಿರ್ಮಾಣಕ್ಕಿಳಿದಿದ್ದಾರೆ. ಇತ್ತೀಚೆಗೆ ಚಿತ್ರದ ಹಾಡು, ಟೀಸರ್ ಬಿಡುಗಡೆಯೊಂದಿಗೆ ಒಂದಷ್ಟು ಮಾಹಿತಿ ಹಂಚಿಕೊಳ್ಳಲೆಂದೇ ಪತ್ರಕರ್ತರ ಎದುರು ಬಂದಿದ್ದರು ಜಾಕೀರ್ ಹುಸೇನ್ ಕರೀಂಖಾನ್.
ಅಂದು ಟೀಸರ್ ಬಿಡುಗಡೆ ಮಾಡಿದ್ದು ನಿರ್ದೇಶಕ ಕಮ್ ನಟ ರಿಷಭ್ ಶೆಟ್ಟಿ . ಅವರೊಂದಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ಕಾರ್ಯದರ್ಶಿ ಎನ್.ಎಂ.ಸುರೇಶ್, ನಾಗಣ್ಣ, ಚಿನ್ನೇಗೌಡ ಇತರರು ಸಾಕ್ಷಿಯಾದರು. ನಿರ್ದೇಶಕ ಕ್ರಾಂತಿ ಚೈತನ್ಯ ಅವರಿಗೆ ಇದು ಮೊದಲ ಚಿತ್ರ. ಮಾತಿಗಿಳಿದ ಅವರು ಹೇಳಿದ್ದಿಷ್ಟು. “ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸ್ಟೋರಿ. ಜಗತ್ತಲ್ಲಿ ಪ್ರೀತಿ, ನಂಬಿಕೆ, ವ್ಯಾಮೋಹ, ಮೋಸ, ದ್ವೇಷ, ಅಸೂಯೆ, ಅಪರಾಧ ಹೀಗೆ ಎಲ್ಲವೂ ನಡೆಯುತ್ತಿದೆ. ಇದೂ ಕೂಡ ಒಂದು ಕಿಡ್ನಾéಪ್ ಕಥೆ. ಯಾಕೆ ಕಿಡ್ನಾಪ್ ಆಗುತ್ತೆ, ಕಿಡ್ನಾಪ್ ಮಾಡೋರು ಯಾರು, ಆಗೋರು ಯಾರು ಎಂಬುದೇ ಸಸ್ಪೆನ್ಸ್. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿದಿದ್ದು, ದುಬೈನಲ್ಲಿ ಹಾಡೊಂದರ ಚಿತ್ರೀಕರಣ ಮಾಡಿದರೆ ಚಿತ್ರ ಮುಗಿಯಲಿದೆ’ ಎಂದು ವಿವರ ಕೊಟ್ಟರು ನಿರ್ದೇಶಕ ಕ್ರಾಂತಿ ಚೈತನ್ಯ.
ನಿರ್ಮಾಪಕ ಜಾಕೀರ್ ಹುಸೇನ್ ಕರೀಂಖಾನ್ ಅವರಿಗೆ ಇದು ಮೊದಲ ಚಿತ್ರ. ಆ ಬಗ್ಗೆ ಹೇಳಿಕೊಂಡ ಅವರು, “ನನಗೆ ಅಪ್ಪ, ಅಮ್ಮನ ನಂತರ ನಮ್ಮ ಕನ್ನಡ ಭಾಷೆ ಮೇಲೆ ಪ್ರೀತಿ ಮತ್ತು ಗೌರವ ಹೆಚ್ಚು. ದುಬೈನಲ್ಲಿದ್ದರೂ, ಕನ್ನಡ ಭಾಷೆ ಮೇಲೆ ಅತಿಯಾದ ಗೌರವ ಇಟ್ಟುಕೊಂಡಿದ್ದೇನೆ. ಸಂಸ್ಕೃತ ಕಲಿತಿರುವ ನನಗೆ ಶೃಂಗೇರಿ ಶ್ರೀಗಳಿಂದ ಗೌರವ, ಪುರಸ್ಕಾರವೂ ಸಿಕ್ಕಿದೆ. ಪ್ರತಿ ಸಲವೂ ಇಲ್ಲಿಗೆ ಬಂದಾಗೆಲ್ಲ, ಕನ್ನಡ ಸಿನಿಮಾ ಮಾಡುವ ಆಸೆ ಆಗುತ್ತಿತ್ತು. ಹಾಗಾಗಿ, “ಬೆಂಗಳೂರು 69′ ಮೂಲಕ ಕನ್ನಡಕ್ಕೊಂದು ಹೊಸ ಬಗೆಯ ಚಿತ್ರ ಕೊಡುವ ಪ್ರಯತ್ನ ಮಾಡಿದ್ದೇನೆ. ಇದೊಂದು ಇಂಟರ್‌ನ್ಯಾಷನಲ್ ಕಾನ್ಸೆಪ್ಟ್ ಹೊಂದಿದೆ. ಕನ್ನಡಿಗರಿಗೆ ಈ ಚಿತ್ರ ಖಂಡಿತ ರುಚಿಸಲಿದೆ’ ಎಂಬ ವಿಶ್ವಾಸ ನನಗಿದೆ. ಇನ್ನು, ಪತ್ನಿ ಗುಲ್ಜರ್ ಹೆಸರಲ್ಲಿ ಚಿತ್ರ ನಿರ್ಮಾಣವಾಗಿದೆ’ ಎಂದರು ಜಾಕೀರ್ ಹುಸೇನ್.
ನಾಯಕ ಪವನ್ ಶೆಟ್ಟಿ ಅವರು ಬಾಡಿ ಬಿಲ್ಡ್ ಮೂಲಕ ಈಗಾಗಲೇ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಚಿತ್ರದ ಬಗ್ಗೆ ಹೇಳಿಕೊಂಡ ಪವನ್ ಶೆಟ್ಟಿ, “ಇಲ್ಲೊಂದು ವಿಶೇಷ ಕಥೆ ಇದೆ. ಪಾತ್ರಕ್ಕೂ ಅಷ್ಟೇ ಆದ್ಯತೆ ನೀಡಲಾಗಿದೆ. ಸಿನಿಮಾ ನೋಡುವ ಜನರಿಗೆ ಖಂಡಿತ ಖುಷಿಯಾಗುತ್ತೆ. ನಾನಿಲ್ಲಿ ಒಂದು ರೀತಿ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದೇನೆ. ಒಳ್ಳೆಯ ಟೀಮ್ ಜೊತೆ ಕೆಲಸ ಮಾಡಿದ್ದು ಖುಷಿಕೊಟ್ಟಿದೆ’ ಎಂದರು ಪವನ್.
ಅನಿತಾ ಭಟ್ ಅವರಿಲ್ಲಿ ಎಂದಿನಂತೆಯೇ ಬೋಲ್ಡ್ ಪಾತ್ರ ಮಾಡಿದ್ದಾರಂತೆ. ತಮ್ಮ ಪಾತ್ರ ಕುರಿತು ಹೇಳುವ ಅವರು, “ಇಲ್ಲಿ ನಾನು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರೂ, ಅದಕ್ಕೊಂದು ಹಿನ್ನೆಲೆಯೂ ಇರಲಿದೆ. ಅದನ್ನು ಸಿನಿಮಾದಲ್ಲೇ ನೋಡಬೇಕು. ನಿರ್ದೇಶಕರು ನನ್ನ ಕೈಯಲ್ಲಿ ಗನ್ ಕೊಟ್ಟಿದ್ದಾರೆ. ಇದೇ ಮೊದಲ ಬಾರಿಗೆ ಡಿಫರೆಂಟ್ ಪಾತ್ರ ಮಾಡಿದ ಖುಷಿ ಇದೆ. ಈಗಾಗಲೇ ಟೀಸರ್ ಮತ್ತು ಹಾಡಿಗೆ ಮೆಚ್ಚುಗೆ ಸಿಗುತ್ತಿರುವುದು ಖುಷಿಕೊಟ್ಟಿದೆ’ ಎಂದರು ಅನಿತಾ ಭಟ್.
ಚಿತ್ರಕ್ಕೆ ವಿಕ್ರಂ ಚಂದನಾ ದಂಪತಿ ಸಂಗೀತ ನೀಡಿದ್ದು, ಚಿತ್ರದಲ್ಲಿ ಎರಡು ಹಾಡುಗಳಿವೆಯಂತೆ. ಚಿತ್ರಕ್ಕೆ ಹಿನ್ನೆಲೆ ಸಂಗೀತ ಕೂಡ ಇವರೇ ಮಾಡಿದ್ದು, ಮೊದಲ ಸಲ ಅವರೇ ಸೌಂಡ್ ಡಿಸೈನ್ ಮಾಡಿದ ಬಗ್ಗೆ ಹೇಳಿಕೊಂಡರು. ಚಿತ್ರದಲ್ಲಿ ತೆಲುಗು ನಟ ಷಫಿ ಸೇರಿದಂತೆ ಹಲವರು ನಟಿಸಿದ್ದಾರೆ.
ವಿಜಯ್ ಭರಮಸಾಗರ