“ತ್ರಿಕೋನ’- ಹೀಗೊಂದು ಚಿತ್ರ ತಯಾರಾಗಿದ್ದು ನಿಮಗೆ ಗೊತ್ತಿರಬಹುದು. ಈಗ ಆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಏ.01ಕ್ಕೆ ತೆರೆಕಾಣಲಿದೆ. ಈ ಚಿತ್ರಕ್ಕೆ ಚಂದ್ರಕಾಂತ್, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ. ಈ ಹಿಂದೆ “ಬರ್ಫಿ’ ನಿರ್ಮಿಸಿದ್ದ ರಾಜಶೇಖರ್ ಈ ಚಿತ್ರದ ನಿರ್ಮಾಪಕರು.
ಅಂದಹಾಗೆ, ಈ ಚಿತ್ರದಲ್ಲಿ ಪ್ರಮುಖ ಆಕರ್ಷಣೆ ಸುರೇಶ್ ಹೆಬ್ಳೀಕರ್ ಮತ್ತು ಹಿರಿಯ ಕಲಾವಿದೆ ಲಕ್ಷ್ಮೀ. ಅಂದುಕೊಂಡಂತೆ ಇದು 60 ಪ್ಲಸ್ ಜೋಡಿಯ ಹೊಸ ಬಗೆಯ ಕಥೆ. ಇವರೊಂದಿಗೆ 45 ಪ್ಲಸ್ ಜೋಡಿಯ ಕಥೆಯೂ ಇರಲಿದೆ. ಇವರೊಂದಿಗೆ ಅಚ್ಯುತಕುಮಾರ್, ಸುಧಾರಾಣಿ ಕೂಡ ಇರಲಿದ್ದು, ಅವರ ಕಥೆಯಲ್ಲೂ ವಿಶೇಷತೆ ಇದೆ ಎಂಬುದು ನಿರ್ದೇಶಕ ಚಂದ್ರಕಾಂತ್ ಅವರ ಮಾತು. ಅಂದಹಾಗೆ, ಇದು ನಿರ್ಮಾಪಕ ರಾಜಶೇಖರ್ ಅವರು ಬರೆದ ಕಥೆಯಾಗಿದೆ.
“ಇದೊಂದು ಆ್ಯಕ್ಷನ್ ಕಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಸಿನಿಮಾ. ನೋವು,ನಲಿವು, ತಮಾಷೆ ಇತ್ಯಾದಿ ಅಂಶಗಳು ಇಲ್ಲಿರಲಿವೆ. ಒಂದು ಹೊಸತನದ ಹೂರಣ ಇಲ್ಲಿ ಉಣಬಡಿಸುವ ಪ್ರಯತ್ನ ಮಾಡಿದ್ದೇನೆ. ಇದೊಂದು ರೀತಿಯ ಅಜ್ಜ-ಅಜ್ಜಿಯ ಕಥೆ’ ಎನ್ನುತ್ತಾರೆ ಚಂದ್ರಕಾಂತ್.
ಒಂದೇ ಕಥೆಯನ್ನು ಮೂರು ಭಾಷೆಯಲ್ಲಿ ಮೂರು ವಿಭಿನ್ನ ರೀತಿಯಲ್ಲಿ ತೆರೆಮೇಲೆ ಹೇಳಿದ್ದೇವೆ. ಚಿತ್ರಕ್ಕೆ ಆಯಾ ಭಾಷೆ, ನೇಟಿವಿಟಿಗೆ ತಕ್ಕಂತೆ ಮೂರು ಸಂಗೀತ ನಿರ್ದೇಶಕರು ಸಂಗೀತ ಸಂಯೋಜಿಸಿದ್ದಾರೆ.
ಎಲ್ಲರ ಜೀವನದಲ್ಲಿ ನಡೆದಿರುವ, ನಡೆಯುತ್ತಿರುವ, ನಡೆಯುವಂತೆ ಇರುವ ಘಟನೆಗಳನ್ನು ಇಟ್ಟುಕೊಂಡು ಈ ಚಿತ್ರ ಮಾಡಿದ್ದೇವೆ. ಇಪ್ಪತ್ತೈದು ವಯಸ್ಸಿನವರು, ನಲವತ್ತು ವಯಸ್ಸಿನವರು ಮತ್ತು ಅರವತ್ತು ದಾಟಿದ ಹಿರಿಯ ನಾಗರೀಕರು ಹೀಗೆ ಮೂರು ವಯೋಮಾನದವರಿಗೂ ತಲುಪುವಂತ ಕಥೆ ಚಿತ್ರದಲ್ಲಿದೆ. ಸನ್ನಿವೇಶಗಳು ದೃಶ್ಯಗಳ ಮೂಲಕ ನೋಡಿಸಿಕೊಂಡು ಹೋಗುತ್ತದೆ’ ಎಂದು ಚಿತ್ರದ ವಿಶೇಷತೆಗಳನ್ನು ತೆರೆದಿಡುತ್ತದೆ ಚಿತ್ರತಂಡ.
ಅಹಂ, ಶಕ್ತಿ ಮತ್ತು ತಾಳ್ಮೆ ಒಂದಕ್ಕೊಂದು ಪೈಪೋಟಿಗೆ ಬಿದ್ದಾಗ ಯಾವ ರೀತಿ ಇರುತ್ತದೆ. ಮನುಷ್ಯನ ವಯೋಮಾನ ದಲ್ಲಿ ಇವೆಲ್ಲವು ಬಂದು ಹೋಗುತ್ತದೆ. ಅಂತಿಮವಾಗಿ ಸಹಿಷ್ಣುತೆ ಜೀವನದಲ್ಲಿ ಎಷ್ಟು ಮುಖ್ಯ ಎಂಬುದನ್ನು ಹೇಳುವ ಪ್ರಯತ್ನವೇ ಚಿತ್ರದ ತಿರುಳಾಗಿದೆ.