Advertisement

ದಾವಣಗೆರೆಯಲ್ಲಿ ಮೂವರು ಯುವಕರ ಮೃತ್ಯು; ಅದು ಅಪಘಾತವಲ್ಲ,ಹತ್ಯೆ !!

02:30 PM Feb 15, 2023 | Team Udayavani |

ದಾವಣಗೆರೆ: ದಾವಣಗೆರೆ ತಾಲೂಕಿನ ಆನಗೋಡು ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ಶುಕ್ರವಾರ (ಫೆ.11) ತಡರಾತ್ರಿ ಅಪಘಾತದಲ್ಲಿ ದಾವಣಗೆರೆ ಹೊರ ವಲಯದ ಶ್ರೀರಾಮನಗರದ ಮೂವರು ಯುವಕರು ಮೃತಪಟ್ಟಿದ್ದಾರೆ ಎಂಬ ಘಟನೆಯ ಹಿಂದಿನ ರಹಸ್ಯ ಭೇದಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು ಕೊಲೆ ಮಾಡಿ ಪರಾರಿಯಾಗಿದ್ದ ಲಾರಿ ಚಾಲಕ ಹಾಗೂ ದಾವಣಗೆರೆಯ ಮೂವರು ದರೋಡೆಕೋರರನ್ನು ಬಂಧಿಸಿದ್ದಾರೆ.

Advertisement

ಉತ್ತರ ಪ್ರದೇಶ ಮೂಲದ ಲಾರಿ ಚಾಲಕ ಭೋಲೆ ಯಾದವ್ ಹಂತಕ. ದಾವಣಗೆರೆ ಗ್ರಾಮಾಂತರ, ಡಿಸಿಐಬಿ ಪೊಲೀಸರು ಚೆನ್ನೈಯಲ್ಲಿ ಲಾರಿ ಸಮೇತ ಚಾಲಕ ಹಾಗೂ ದರೋಡೆ ಮಾಡಿದ್ದ ಗಣೇಶ್, ರಾಹುಲ್, ನಾಗರಾಜ್ ಎಂಬ ಮೂವರನ್ನು ಬಂಧಿಸಿದ್ದಾರೆ.

ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಆನಗೋಡು ಗ್ರಾಮದ ಸಮೀಪದ ಎನ್.ಎಚ್-೪೮ ರಲ್ಲಿ ಫೆ. ೧೧ ರ ಬೆಳಗಿನ ಜಾವ ದಾವಣಗೆರೆ ನಗರದ ಶ್ರೀರಾಮನಗರ ವಾಸಿಗಳಾದ ಪರಶುರಾಮ, ಶಿವ ಕುಮಾರ್, ಸಂದೇಶ್ ಎಂಬುವರ ಶವ ಪತ್ತೆಯಾಗಿದ್ದವು. ಮೇಲ್ನೋಟಕ್ಕೆ ಅಪಘಾತ ಎಂಬಂತೆ ಕಂಡು ಬಂದರೂ ಪೊಲೀಸರಿಗೆ ಇಡೀ ಅಪಘಾತದ ಬಗ್ಗೆಯೇ ಸಂಶಯ ಬಂದಿತ್ತು.

ಸಿಸಿ ಟಿವಿ, ಕ್ಯಾಮೆರಾ ಪರಿಶೀಲನೆ ನಡೆಸಿದಾಗ ಅಪಘಾತದ ಯಾವ ಸುಳಿವೂ ಸಿಕ್ಕಿರಲಿಲ್ಲ. ಹಾಗಾಗಿಯೇ ಪೊಲೀಸರು ಲಾರಿ ಚಾಲಕನನ್ನ ಬೆನ್ನತ್ತಿ, ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಪಘಾತ ಅಲ್ಲ ಕೊಲೆ. ದರೋಡೆ ಮಾಡಿ, ಬೈಕ್‌ ನಲ್ಲಿ ಪರಾರಿಯಾಗುತ್ತಿದ್ದವರ ಮೇಲೆ ಚಾಲಕ ಲಾರಿ ಹತ್ತಿಸಿದ್ದರಿಂದ ಮೂವರು ಸಾವನ್ನಪ್ಪಿದ್ದರು ಎಂಬುದು ಪತ್ತೆಯಾಗಿದೆ.

ಕೊಲೆ ಹಿನ್ನೆಲೆ
ಮೃತ ಪರಶುರಾಮ, ಶಿವಕುಮಾರ್, ಸಂದೇಶ್ ಅವರೊಟ್ಟಿಗೆ ಗಣೇಶ್, ರಾಹುಲ್ ಮತ್ತು ನಾಗರಾಜ್ ಎಂಬುವರು ಎರಡು ಬೈಕ್‌ ನಲ್ಲಿ ತೆರಳಿ ಆನಗೋಡು ಗ್ರಾಮದ ಬಳಿ ರಸ್ತೆ ಪಕ್ಕದಲ್ಲಿ ಲಾರಿ ಚಾಲಕನನ್ನು ಹೆದರಿಸಿ, ಹಲ್ಲೆ ಮಾಡಿ 8 ಸಾವಿರ ನಗದು, ಮೊಬೈಲ್ ಹಾಗು ಇತರೆ ವಸ್ತುಗಳನ್ನು ಕಿತ್ತುಕೊಂಡಿದ್ದರು.

Advertisement

ದರೋಡೆ ಮಾಡಿಕೊಂಡು ಹೋದ ಬೈಕ್‌ ಗಳ ಮೇಲೆ ಚಾಲಕ ಲಾರಿ ಹತ್ತಿಸಿದ್ದರ ಪರಿಣಾಮ ಒಂದು ಬೈಕ್‌ ನಲ್ಲಿ ಹೋಗುತ್ತಿದ್ದ ಪರಶುರಾಮ, ಶಿವಕುಮಾರ ಮತ್ತು ಸಂದೇಶ್ ಸ್ಥಳದಲ್ಲೇ ಮೃತಪಟ್ಟಿದ್ದರು. ಇನ್ನೊಂದು ಬೈಕ್‌ ನಲ್ಲಿದ್ದ ನಾಗರಾಜ, ಗಣೇಶ ಮತ್ತು ರಾಹುಲ್ ಗಾಯಗೊಂಡಿದ್ದರು.

ದಾವಣಗೆರೆ ತಾಲೂಕಿನ ಕಾಟೀಹಳ್ಳಿಯಲ್ಲಿ ಜಾತ್ರೆಯಲ್ಲಿ ಭಾಗವಹಿಸಿ ಶ್ರೀರಾಮನಗರಕ್ಕೆ ವಾಪಸ್ ಬರುವಾಗ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಹೇಳಲಾಗಿತ್ತು. ಇಡೀ ಅಪಘಾತ ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು.

ಡಿಸಿಐಬಿ, ಗ್ರಾಮಾಂತರ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿ ಲಾರಿ ಚಾಲಕ ಭೋಲೆ ಯಾದವ್‌ನನ್ನ ಬಂಧಿಸಿ ವಿಚಾರಣೆ ನಡೆಸಿದಾಗ ಅಪಘಾತ ಅಲ್ಲ ಕೊಲೆ ಹಾಗೂ ದರೋಡೆ ನಡೆಸಿದ್ದು ಬೆಳಕಿಗೆ ಬಂದಿದೆ.ಎಲ್ಲ ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next