Advertisement

ನಿಗೂಢ ಮನೆಯಲ್ಲಿ ಮೂವರು ಮಹಿಳೆಯರು

10:08 AM Aug 10, 2017 | |

ಮಾನಸಿಕ ಅಸ್ವಸ್ಥೆಯನ್ನು ಕೋಣೆಯೊಳಗೆ ಕಟ್ಟಿ ಹಾಕಿ ಕಾವಲು ಕಾಯುತ್ತಿದ್ದ ತಾಯಿ, ಸೋದರಿ
ಬೆಂಗಳೂರು: ಅದು ನಂದಗೋಕುಲದಂತಿದ್ದ ಮನೆ. ದಂಪತಿ, ಅವರಿಗೆ ಮೂವರು ಹೆಣ್ಣು ಮಕ್ಕಳು. ಮನೆಯ ನೊಗ ಹೊತ್ತಿದ್ದ ವ್ಯಕ್ತಿ ಸರ್ಕಾರಿ ಉದ್ಯೋಗಿ. ಹೀಗಿರುವಾಗಲೇ ಮೂವರು ಮಕ್ಕಳ ಪೈಕಿ ಒಬ್ಟಾಕೆ ತೀರಿ ಹೋದಳು. ಅದರ ಕೊರಗಲ್ಲೇ ಮನೆಯ
ಯಜಮಾನನೂ ಇಹಲೋಕ ತೊರೆದ. ತಾಯಿ ಮತ್ತು ಇಬ್ಬರು ಹೆಣ್ಣು ಮಕ್ಕಳಷ್ಟೇ ಉಳಿದುಕೊಂಡ ಆ ಸಂಸಾರ ದಿಕ್ಕಾಪಾಲಾಯಿತು. ಜೀವಿಸಲು ಹಣವಿಲ್ಲದೆ ಬಿಕ್ಷೆ ಬೇಡುವ ಸ್ಥಿತಿಗೆ ಬಂತು. ಇದರ ನಡುವೆ ಒಬ್ಬ ಹೆಣ್ಣು ಮಗಳು ಮಾನಸಿಕ ಅಸ್ವಸ್ಥಗಳಾದಳು. ಅವಳನ್ನು
ಹೊರಗೆ ಬಿಟ್ಟರೆ ತೊಂದರೆ, ಹೊರಗೆ ಹೋಗದೇ ಹೋದರೆ ಸಮಸ್ಯೆ ಹೀಗಾಗಿ. ಆ ಹುಡುಗಿಯನ್ನು ಮನೆಯಲ್ಲೇ ಕೂಡಿಟ್ಟರು. ಆಕೆಗೆ ಚಿತ್ರ ಹಿಂಸೆ ಕೊಟ್ಟರು. ತಾವಿದ್ದ ಸ್ಥಳವನ್ನು ನರಕಸದೃಶ ಮಾಡಿಕೊಂಡರು. ಯಾರೂ ಹತ್ತಿರ ಬಾರದಿರಲೆಂದು ದೆವ್ವ ಭೂತದ ಕತೆ ಕಟ್ಟಿದರು. ಕೇಳಲು ಹೋದವರ ಮೇಲೆ ಮಲ ಮೂತ್ರ ಸುರಿದರು. ಇಂಥ ಮನೆಯಲ್ಲಿ ಅಜ್ಞಾತವಾಗಿ, ಸಮಾ ಜದ ಸಂಪರ್ಕವನ್ನೇ ಕಳೆದುಕೊಂಡು ಬದುಕು ತ್ತಿದ್ದ ಮೂವರನ್ನು ಸಾರ್ವಜನಿಕರ ನೆರವಿನೊಂದಿಗೆ ಪೊಲೀಸರು ಹೊರ ಜಗತ್ತಿಗೆ ಎಳೆ ತಂದಿದ್ದಾರೆ.
ಮಾನಸಿಕ ಅಸ್ವಸ್ಥಳಾಗಿದ್ದ ಯುವತಿಗೆ ರಕ್ಷಣೆ ನೀಡಿದ್ದಾರೆ. ಆ ಮನೆಯಲ್ಲಿ ಕಳೆದ ಹತ್ತು ವರ್ಷಗಳಿಂದ ವಿದ್ಯುತ್‌ ಇಲ್ಲ. ಕುಡಿಯಲು, ಬಳಸಲು ನೀರೂ ಇಲ್ಲ. ಅಷ್ಟೇ ಅಲ್ಲ ಗ್ಯಾಸ್‌ ಇಲ್ಲದೇ ಅಡುಗೆಯೇ ಮಾಡಿಲ್ಲ. ಶೌಚಾಲಯ ಸಂಪರ್ಕ ಕಡಿತಗೊಂಡ ಕಾರಣ ಮನೆಯೇ ಅಕ್ಷರಶಃ ಶೌಚಾಲಯದಂತಾಗಿದೆ. ಇಂತಹ ನರಕ ಕೂಪದಲ್ಲಿ ಮೂವರು ಮಹಿಳೆಯರು ಜೀವಿಸುತ್ತಿದ್ದರು. ಇದನ್ನು ಕಂಡ ಅಕ್ಕ-ಪಕ್ಕದ ನಿವಾಸಿಗಳು ಪೊಲೀಸರಿಗೆ ದೂರು ನೀಡಿದ್ದು, 24 ವರ್ಷದ ಸ್ಮಿತಾ ಎಂಬ ಮಾನಸಿಕ ಅಸ್ವಸ್ಥೆಯನ್ನು ರಕ್ಷಿಸಿದ್ದಾರೆ. ಆಕೆಯ ತಾಯಿ ರೋಜಿ ಹಾಗೂ ಸಹೋದರಿ ಸೆಲ್ವಿಯನ್ನು ವಿವೇಕನಗರ ಪೊಲೀಸರು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿ, ಚಿಕಿತ್ಸೆಗಾಗಿ ಮೂವರನ್ನು ನಿಮ್ಹಾನ್ಸ್‌ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೇರಳ ಮೂಲದ ಪೌಲ್‌ ಎಂಬುವವರು ಸರ್ಕಾರಿ ನೌಕರರಾಗಿದ್ದು, 30 ವರ್ಷಗಳ ಹಿಂದೆ ರೋಜಿಯನ್ನುವಿವಾಹವಾಗಿದ್ದರು. ಇವರಿಗೆ ಸ್ಮಿತಾ, ಸೆಂಥಿಯಾ ಹಾಗೂ ಸೆಲ್ವಿ ಎಂಬ ಮೂವರು ಹೆಣ್ಣು ಮಕ್ಕಳಿದ್ದರು. ಈ ಪೈಕಿ ಸೆಂಥಿಯಾ 13 ವರ್ಷಗಳ ಹಿಂದೆ ಮೃತಪಟ್ಟಿದ್ದು, ಇದರ ಕೊರಗಿನಲ್ಲೇ ಪೌಲ್‌ ಕೂಡ ಅಸುನೀಗಿದ್ದರು. ಇಲ್ಲಿಯವರೆಗೆ ನಂದಗೋಕುಲ 
ದಂತಿದ್ದ ಮನೆ ನಂತರ ದಿಕ್ಕು ತೋಚದ ನೌಕೆಯಾಗಿದೆ. ಇಡೀ ಸಂಸಾರದ ಹೊಣೆ ಹೊತ್ತಿದ್ದ ರೋಜಿ, ಆರಂಭದಲ್ಲಿ ಎಲ್ಲವನ್ನು ನಿಭಾಯಿಸಿಕೊಂಡು ಹೋದರು. ನಂತರ ಆರ್ಥಿಕ ಸಮಸ್ಯೆ ಉಲ್ಬಣಿಸಿದಾಗ ಹಿರಿಯ ಮಗಳು ಸೆಲ್ವಿ ಜತೆ ಸೇರಿಕೊಂಡು ಚರ್ಚ್‌ಗಳ
ಬಳಿ ಭಿಕ್ಷೆ ಬೇಡುತ್ತ ಜೀವನ ನಡೆಸಲು ಆರಂಭಿಸಿದರು. ಇನ್ನು ತಂದೆಯ ಸಾವಿನಿಂದ ಮಾನಸಿಕ ಆಘಾತಕ್ಕೊಳಗಾಗಿದ್ದ ಸ್ಮಿತಾಳನ್ನು ಎಲ್ಲಿಗೂ ಹೊರಗಡೆ ಕಳುಹಿಸುತ್ತಿರಲಿಲ್ಲ. ಊಟ, ನೀರು ಏನೇ ಹೊರಗಡೆಯಿಂದ ತರಬೇಕಾದರೂ ಸ್ಮಿತಾಳನ್ನು ಕೊಣೆಯೊಂದರಲ್ಲಿ ಕೂಡಿ ಹಾಕಿ ಹಗ್ಗದಿಂದ ಹಾಕಿ ಹೋಗುತ್ತಿದ್ದರು. ಹೀಗಾಗಿ ಕಳೆದ 10 ವರ್ಷಗಳಿಂದ ಆಕೆ ಚಿತ್ರಹಿಂಸೆ ಅನುಭವಿಸಿದ್ದಾಳೆ ಎಂದು ಸ್ಥಳೀಯರು ಆರೋಪಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸಾರ್ವಜನಿಕರ ಮೇಲೇ ಹಲ್ಲೆ: ಮನೆಯ ಪರಿಸ್ಥಿತಿ ಗಮನಿಸಿದ ಸ್ಥಳೀಯರು ಬುದ್ಧಿ ಹೇಳಲು ಹೋದಾಗ ರೋಜಿ, ಸೆಲ್ವಿ ಅವರ ಮೇಲೆಯೇ ಹಲ್ಲೆಗೆ ಮುಂದಾ ದರು. ಅಷ್ಟೇ ಅಲ್ಲ ಕೊಠಡಿ ಕಸವನ್ನು ಸಾರ್ವಜನಿಕರ ಮೇಲೆಯೇ ಎಸೆಯುತ್ತಿದ್ದರು. ಕೆಲವೊಮ್ಮೆ ಬಕೆಟ್‌ನಲ್ಲಿ ತುಂಬಿಟ್ಟಿದ್ದ ಮಲ ಮೂತ್ರವನ್ನು ಎಸೆಯುತ್ತಿದ್ದರು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಬಗ್ಗೆ ಅಕ್ಕ-ಪಕ್ಕದ ನಿವಾಸಿಗಳು ಪೊಲೀಸರಿಗೆ ದೂರು ನೀಡಿದ್ದು, ಬಹಳಷ್ಟು ಬಾರಿ ಪೊಲೀಸರು ಕೂಡ ಬುದ್ಧಿ ಹೇಳಿದ್ದಾರೆ. ಆದರೆ, ಮೂವರು ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿದ್ದರಿಂದ ಹೆಚ್ಚಿನ ಕ್ರಮಕೈಗೊಳ್ಳುತ್ತಿರಲಿಲ್ಲ. ಆದರೆ, ಇತ್ತೀಚೆಗೆ ಇವರ ವರ್ತನೆ ಮೀತಿ ಮೀರಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರ ಸಹಾಯ ಪಡೆದು ಸ್ಮಿತಾಳನ್ನು ರಕ್ಷಿಸಿ ಮನೆಯಿಂದ ಹೊರ ಕರೆತಂದಿದ್ದೇವೆ ಎಂದು ಸ್ಥಳೀಯ ಮಂಜುನಾಥ ತಿಳಿಸಿದ್ದಾರೆ.

Advertisement

ಮಹಿಳಾ ಪೇದೆ ಮೇಲೆ ಹಲ್ಲೆ: ಹರಸಾಹಸ ಪಟ್ಟು ಮೂವರು ಮಹಿಳೆಯರನ್ನು ಠಾಣೆವರೆಗೆ ಕರೆತಂದ ಮಹಿಳಾ ಪೇದೆ ಮೇಲೆಯೇ ಸೆಲ್ವಿ ಹಲ್ಲೆ ನಡೆಸಿದ್ದಾರೆ. ಠಾಣೆ ಒಳಗೆ ಹೋಗಲು ರೋಜಿ ಮತ್ತು ಸೆಲ್ವಿ ನಿರಾಕರಿಸಿದರು. ಈ ವೇಳೆ ಮಹಿಳಾ ಪೇದೆಗಳು
ಬಲವಂತವಾಗಿ ಕರೆಯೊಯ್ಯಲು ಯತ್ನಿಸಿದಾಗ ಪೂಜಾ ಎಂಬ ಪೇದೆಗೆ ರೋಜಿ ಕಚ್ಚಿದ್ದಾರೆ. ಕಪಾಳಕ್ಕೂ ಹೊಡೆದಿದ್ದಾರೆ. ಇದರಿಂದ ಆಘಾತಗೊಂಡ ಪೂಜಾ ಕೆಳಗೆ ಬಿದ್ದರು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಯಿತು. ಇದೀಗ
ಆರೋಗ್ಯವಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೂಗು ಮುಚ್ಚಿಕೊಂಡು ಹೋದೆವು!
ಪ್ರತಿ ದಿನ ರಾತ್ರಿ ವೇಳೆ ಸ್ಮಿತಾ ಕಿರುಚಾಡುತ್ತಿದ್ದರು. ಈ ಬಗ್ಗೆ ಸ್ಥಳೀಯರು ವಿಚಾರಿಸಲು ಹೋದರೆ ಅವರ ಮೇಲೆ ರೋಜಿ ಮತ್ತು ಸೆಲ್ವಿ ಜಗಳಕ್ಕೆ ಬರುತ್ತಿದ್ದರು. ಇತ್ತೀಚಿಗೆ ಮನೆಯಿಂದ ಕಲ್ಲುಗಳನ್ನು ಎಸೆಯುವುದು, ಮನೆ ವಸ್ತುಗಳನ್ನು ಜನರ ಮೇಲೆ ಎಸೆಯುವುದು, ಕೊಳೆಚೆ ನೀರನ್ನು ಸುರಿಯುವುದು ಮತ್ತಿತರ ದುರ್ವರ್ತನೆ ತೋರುತ್ತಿದ್ದರು. ಮನೆಗಳ ಬಳಿ ಕುಂಕುಮಾ, ನಿಂಬೆಹಣ್ಣು ಎಸೆದು ಹೆದರಿಸುತ್ತಿದ್ದರು. ಅಲ್ಲದೇ ಮಕ್ಕಳು ಟೆರೆಸ್‌ನಲ್ಲಿ ಆಟವಾಡಲು ಹೋದರೆ ದೆವ್ವ ಭೂತ ಇದೆ ಎಂದು ಹೆದರಿಸುತ್ತಿದ್ದರು. ಅಕ್ಕಪಕ್ಕದಲ್ಲಿ ಯಾರೂ ವಾಸವಿರಬಾರದು ಎಂಬ ಉದ್ದೇಶದಿಂದ ನೆರೆಹೊರೆಯವರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ನೆರೆ ಮನೆಯ ಕುಮಾರ್‌ ಎಂಬುವವರು ದೂರಿದ್ದಾರೆ.

ನಿಂಬೆಹಣ್ಣು ಎಸೆದು ಹೆದರಿಸುತ್ತಿದ್ದರು!
ಪ್ರತಿದಿನ ರಾತ್ರಿ ಸ್ಮಿತಾ ಕಿರುಚುತ್ತಿದ್ದರು. ಈ ಬಗ್ಗೆ ಸ್ಥಳೀಯರು ವಿಚಾರಿಸಿದರೆ ರೋಜಿ ಮತ್ತು ಸೆಲ್ವಿ ಜಗಳಕ್ಕೆ ಬರುತ್ತಿದ್ದರು. ಇತ್ತೀಚಿಗೆ ಮನೆಯಿಂದ ಕಲ್ಲುಗಳನ್ನು ಎಸೆಯುವುದು, ವಸ್ತುಗಳನ್ನು ಜನರ ಮೇಲೆ ಎಸೆಯುವುದು, ಕೊಳೆಚೆ ನೀರು ಸುರಿಯುವುದು ಮತ್ತಿತರ ದುರ್ವರ್ತನೆ ತೋರುತ್ತಿದ್ದರು. ಮನೆಗಳ ಬಳಿ ಕುಂಕುಮ, ನಿಂಬೆಹಣ್ಣು ಎಸೆದು ಹೆದರಿಸುತ್ತಿದ್ದರು. ಅಕ್ಕಪಕ್ಕದಲ್ಲಿ ಯಾರೂ ವಾಸವಿರಬಾರದು ಎಂಬ ಉದ್ದೇಶದಿಂದ ನೆರೆಹೊರೆಯವರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ನೆರೆ ಮನೆಯ ಕುಮಾರ್‌ ಎಂಬುವವರು ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next