Advertisement

ಕಾಶ್ಮೀರ ಮೂಲದ ಮೂವರ ಸೆರೆ

06:18 AM Feb 18, 2019 | |

ಬೆಂಗಳೂರು: ಪುಲ್ವಾಮದಲ್ಲಿ ನಡೆದ ಸೇನಾಪಡೆಗಳ ಮೇಲಿನ ದಾಳಿಯನ್ನು ಸಮರ್ಥಿಸಿಕೊಂಡು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಆಕ್ಷೇಪಾರ್ಹ ಹೇಳಿಕೆಗಳನ್ನು ಪೋಸ್ಟ್‌ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು-ಕಾಶ್ಮೀರ‌ ಮೂಲದ ಮೂವರು ವಿದ್ಯಾರ್ಥಿಗಳು ಸೂರ್ಯನಗರ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Advertisement

ಜಮ್ಮು-ಕಾಶ್ಮೀರದ ವಾಕರ್‌ ಅಹಮದ್‌ ಅಲಿಯಾಸ್‌ ಹಾರೀಸ್‌ (19), ಗೌಹಾರ್‌ (21), ಜಾಕೀರ್‌ ಮಕ್‌ಬುಲ್‌ (23) ಬಂಧಿತರು. ಆರೋಪಿಗಳು ಭಾರತೀಯ ಸೇನೆ ಹಾಗೂ ಭಾರತದ ವಿರುದ್ಧ ಅವಹೇಳನಕಾರಿ ಸಂದೇಶಗಳನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದರು. ಅಲ್ಲದೆ, ಇದನ್ನು ಪ್ರಶ್ನಿಸಿದ ಪಶ್ಚಿಮ ಬಂಗಾಳ ಮೂಲದ ವಿದ್ಯಾರ್ಥಿ ಕೌಶಿಕ್‌ ದಬ್‌ನಾಥ್‌ ಮೇಲೆ ಹಲ್ಲೆ ಕೂಡ ನಡೆಸಿದ್ದರು ಎಂದು ಪೊಲೀಸರು ಹೇಳಿದರು.

ಮೂವರು ಆರೋಪಿಗಳು ಹಾಗೂ ಕೌಶಿಕ್‌ ದಬ್‌ನಾಥ್‌ ಆನೇಕಲ್‌ ತಾಲೂಕಿನ ಸ್ಪೂರ್ತಿ ಕಾಲೇಜಿನಲ್ಲಿ ನರ್ಸಿಂಗ್‌ ವಿದ್ಯಾರ್ಥಿಗಳಾಗಿದ್ದಾರೆ. ಫೆ.14ರಂದು ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಆತ್ಮಾಹುತಿ ದಾಳಿಗೆ ಸಂಬಂಧಿಸಿದಂತೆ ಕೌಶಿಕ್‌ ದಬ್‌ನಾಥ್‌ ಎಂಬುವರು ಹುತಾತ್ಮ ಸಿಆರ್‌ಪಿಎಫ್ ಯೋಧರು ಮತ್ತು ಭಾರತೀಯ ಸೇನೆ ಪರವಾಗಿ ಫೇಸ್‌ಬುಕ್‌ನಲ್ಲಿ ಫೋಟೋಗಳನ್ನು ಹಾಕಿದ್ದು, ಉಗ್ರರ ಕೃತ್ಯವನ್ನು ಖಂಡಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಮೂವರು ಆರೋಪಿಗಳು, ಭಾರತೀಯ ಸೇನೆ, ಸೇನಾ ಸಿಬ್ಬಂದಿ ಹಾಗೂ ರಾಷ್ಟ್ರದ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ಪೋಸ್ಟ್‌ ಮಾಡಿದ್ದರು. ಇದನ್ನು ಪ್ರಶ್ನಿಸಿದ ಕೌಶಿಕ್‌ ದಬ್‌ನಾಥ್‌ನನ್ನು  ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದ ಆರೋಪಿಗಳು ಹಲ್ಲೆ ಕೂಡ ನಡೆಸಿದ್ದರು. ಈ ಸಂಬಂಧ ಸ್ಪೂರ್ತಿ ಕಾಲೇಜಿನ ಪ್ರಾಂಶುಪಾಲರಾದ ಡಿ. ಬಾಬು ಅವರು ಸೂರ್ಯನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಸಿಸಿಬಿಯಿಂದ ಆರೋಪಿ ಬಂಧನ: ಮತ್ತೂಂದು ಪ್ರಕರಣದಲ್ಲಿ ಭಾರತೀಯ ಸೇನಾ ಪಡೆಗಳ ಮೇಲಿನ ದಾಳಿಯನ್ನು ಸಮರ್ಥಿಸಿಕೊಂಡಿದಲ್ಲದೆ, ಎರಡು ಗುಂಪಿನ ನಡುವೆ ಸಾಮರಸ್ಯ ಕದಡಲು ಯತ್ನಿಸಿದ ಆರೋಪದ ಬೆಂಗಳೂರು ನಗರ ಸೈಬರ್‌ ಕ್ರೈಂ ಪೊಲೀಸರು ಕಮ್ಮನಹಳ್ಳಿ ನಿವಾಸಿ ಫೈಜ್‌ ರಶೀದ್‌(20) ಎಂಬಾತನನ್ನು ಬಂಧಿಸಿದ್ದಾರೆ.

Advertisement

ಯಲಹಂಕ ಬಳಿಯ ಖಾಸಗಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಕಂಪ್ಯೂಟರ್‌ ಸೈನ್ಸ್‌ ವಿಭಾಗಕ್ಕೆ ನೊಂದಣಿ ಮಾಡಿಕೊಂಡಿದ್ದ ಆರೋಪಿ ಫೈಜ್‌ ರಶೀದ್‌, ಬಳಿಕ  ವ್ಯಾಸಂಗವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದ. ಮನೆಯಲ್ಲಿದ್ದುಕೊಂಡೇ ಕೆಲಸದ ಹುಡುಕಾಟದಲ್ಲಿದ್ದ. ಇ¤ತೀಚೆಗೆ ನಡೆದ ಪುಲ್ವಾಮ ದಾಳಿಯನ್ನು ಸಮರ್ಥಿಸಿಕೊಂಡು, ಭಾರತೀಯ ಸೇನೆಯ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದ.

ಅಲ್ಲದೆ, ಎರಡು ಗುಂಪಿನ ನಡುವೆ ಸಾಮರಸ್ಯ, ಸ್ವಾಸ್ಥ್ಯ ಕದಡುವಂತಹ ಹಾಗೂ ಭಾರತದ ಸಾರ್ವಭೌಮತ್ವವನ್ನು ಪ್ರಶ್ನಿಸುವಂತಹ ಪ್ರಚೋದನಾಕಾರಿ ಬರಹಗಳನ್ನು ಪ್ರಕಟಿಸಿದ್ದ. ಇದನ್ನು ಖಂಡಿಸಿದ ಕೆಲ ವ್ಯಕ್ತಿಗಳು ಆರೋಪಿಯ ಪೋಸ್ಟ್‌ಅನ್ನು ಬೆಂಗಳೂರು ನಗರ ಪೊಲೀಸರ ಸಾಮಾಜಿಕ ಜಾಲತಾಣ ಖಾತೆಗೆ ಟ್ಯಾಗ್‌ ಮಾಡಿ, ಕ್ರಮಕ್ಕೆ ಒತ್ತಾಯಿಸಿದ್ದರು.

ಆ ಹಿನ್ನೆಲೆಯಲ್ಲಿ ಆರೋಪಿ ತನ್ನ ಖಾತೆಯಲ್ಲಿದ್ದ ವಿವಾದಾತ್ಮಕ ಹೇಳಿಕೆಗಳನ್ನು, ತನ್ನ ಭಾವಚಿತ್ರವನ್ನು ತೆಗೆದು ಹಾಕಿ ಸಾಕ್ಷ್ಯ ನಾಶ ಕೂಡ ಮಾಡಿದ್ದಾನೆ. ಅಲ್ಲದೆ, ಕೃತ್ಯ ಎಸಗುವ ದುರುದ್ದೇಶದಿಂದಲೇ ಆರೋಪಿ ಮೊದಲೇ ಫೇಸ್‌ಬುಕ್‌ ಖಾತೆ ತೆರೆದಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಸೈಬರ್‌ ಕ್ರೈಂ ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next