Advertisement

ಇನ್ಸ್‌ಪೆಕ್ಟರ್‌ ಸೇರಿ ಮೂವರುಪೊಲೀಸ್‌ ಸಿಬಂದಿ ಅಮಾನತು

10:06 AM Aug 24, 2018 | Team Udayavani |

ಬೆಂಗಳೂರು: ಕರ್ತವ್ಯಲೋಪದ ಆರೋಪದ ಮೇಲೆ ಕೊಡಿಗೇಹಳ್ಳಿ ಇನ್ಸ್‌ಪೆಕ್ಟರ್‌ ಸೇರಿ ಮೂವರು ಸಿಬ್ಬಂದಿಯನ್ನು ಈಶಾನ್ಯ ವಲಯ ಡಿಸಿಪಿ ಕಲಾ ಕೃಷ್ಣಮೂರ್ತಿ ಅಮಾನತುಗೊಳಿಸಿದ್ದಾರೆ. ಕೊಡಿಗೇಹಳ್ಳಿ ಠಾಣಾಧಿಕಾರಿ ರಾಜಣ್ಣ, ಎಎಸ್‌ಐ ರಾಜಣ್ಣ ಮತ್ತು ಪೇದೆ ಜಯರಾಮ್‌ ರನ್ನು ಅಮಾನತು ಮಾಡಲಾಗಿದೆ.

Advertisement

ಆ.19ರಂದು ರಾತ್ರಿ 10 ಗಂಟೆ ಸುಮಾರಿಗೆ ಖಾಸಗಿ ಕಂಪನಿ ಉದ್ಯೋಗಿ, ಗೌರಿಬಿದನೂರಿನ ಚಂದ್ರಶೇಖರ್‌ ಎಂಬುವರು ಸ್ನೇಹಿತ ನಾರಾಯಣ ಸ್ವಾಮಿ ಜತೆ ಭದ್ರಪ್ಪ ಲೇಔಟ್‌ನಲ್ಲಿರುವ ಹೋಟೆಲ್‌ಗೆ ಹೋಗುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು, ಚಂದ್ರಶೇಖರ್‌ ಮತ್ತು ನಾರಾಯಣಸ್ವಾಮಿಯನ್ನು ಅಡ್ಡಗಟ್ಟಿ, ತಮ್ಮ ಬಳಿ ಇರುವ ವಸ್ತುಗಳನ್ನು ನೀಡುವಂತೆ ಚಾಕು ತೋರಿಸಿ ಬೆದರಿಸಿದ್ದರು. ಹೆದರಿದ ನಾರಾಯಣಸ್ವಾಮಿ ಕೂಡಲೇ ತಮ್ಮ ಬಳಿ ಇದ್ದ ಮೊಬೈಲ್‌ನ್ನು ದುಷ್ಕರ್ಮಿಗಳಿಗೆ ಕೊಟ್ಟಿದ್ದಾರೆ.

ಆದರೆ, ಚಂದ್ರಶೇಖರ್‌ ಮೊಬೈಲ್‌ ನೀಡಲು ನಿರಾಕರಿಸಿದಾಗ ದುಷ್ಕರ್ಮಿಗಳು ಚಾಕುವಿನಿಂದ ಚಂದ್ರಶೇಖರ್‌ ತೊಡೆಗೆ ಇರಿದು ಪರಾರಿಯಾಗಿದ್ದರು. ತೀವ್ರ ರಕ್ತಸ್ರಾವವಾಗಿ ಕುಸಿದ ಚಂದ್ರಶೇಖರ್‌ ನನ್ನು ತಕ್ಷಣವೇ ಸ್ನೇಹಿತ ನಾರಾಯಣಸ್ವಾಮಿ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಆಸ್ಪತ್ರೆಯ ಸಿಬ್ಬಂದಿ ಠಾಣಾಧಿಕಾರಿ ರಾಜಣ್ಣ ಅವರಿಗೆ ಮಾಹಿತಿ ನೀಡಿದ್ದಾರೆ. ಆದರೆ, ನಿರ್ಲಕ್ಷ್ಯ ಮಾಡಿದ ಇನ್ಸ್‌ಪೆಕ್ಟರ್‌ ರಾಜಣ್ಣ ಹಾಗೂ ಸಿಬ್ಬಂದಿ ಆಸ್ಪತ್ರೆಗೆ ಭೇಟಿ ನೀಡಿರರಿಲ್ಲ. ಎರಡು ದಿನಗಳ ಕಾಲ ಚಿಕಿತ್ಸೆ ಪಡೆದ ಚಂದ್ರಶೇಖರ್‌ ಮಂಗಳವಾರ ಚಿಕಿತ್ಸೆ ಫ‌ಲಿಸದೇ ಮೃತಪಟ್ಟಿದ್ದರು. ಅನಂತರ ರಾಜಣ್ಣ ಘಟನೆ ಸಂಬಂಧ ಎಫ್ಐಆರ್‌ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಮೊದಲೇ ಮಾಹಿತಿ ಇದ್ದರೂ ನಿರ್ಲಕ್ಷ್ಯ ವಹಿಸಿದ್ದರಿಂದ ಕರ್ತವ್ಯಲೋಪ ಆರೋಪದ ಮೇಲೆ ಮೂವರನ್ನು ಅಮಾನತು ಮಾಡಲಾಗಿದೆ ಎಂದು ಡಿಸಿಪಿ ಕಲಾ ಕೃಷ್ಣಮೂರ್ತಿ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next