ಬಾಗಲಕೋಟೆ: ಕೋವಿಡ್ 19 ವೈರಸ್ ವಿರುದ್ಧ ಹೋರಾಟದ ಕರ್ತವ್ಯ ನಿರ್ವಹಿಸುತ್ತಿರುವಾಗಲೇ ಸೋಂಕು ತಗುಲಿರುವುದು ದೃಢಪಟ್ಟಿದ್ದ ಮೂವರು ಪೊಲೀಸ್ ಸಿಬ್ಬಂದಿ ಸಂಪೂರ್ಣ ಗುಣಮುಖರಾಗಿದ್ದು, ಅದರಲ್ಲಿ ಇಬ್ಬರು ಪೇದೆಗಳು ಸಹಿತ ನಾಲ್ವರನ್ನು ಮಂಗಳವಾರ ಬಿಡುಗಡೆಗೊಳಿಸಲಾಯಿತು.
ಮೂವರು ಗುಣಮುಖ-ಇಬ್ಬರ ಬಿಡುಗಡೆ: ಮುಧೋಳದ ಮದರಸಾ ಬಳಿ ಏ. 15ರಂದು ಕರ್ತವ್ಯ ನಿರ್ವಹಣೆ ವೇಳೆ ಸೋಂಕು ತಗುಲಿದ್ದ 39 ವರ್ಷದ ಪೇದೆ ಪಿ-263, ಈ ಪೇದೆಯ ಸಂಪರ್ಕದಿಂದ ಸೋಂಕು ಖಚಿತವಾಗಿದ್ದ ಮುಧೋಳದ 43 ವರ್ಷದ ಮತ್ತೂರ್ವ ಪೇದೆ ಪಿ-379 ಕೋವಿಡ್ 19 ಮುಕ್ತರಾಗಿದ್ದು, ಬೆಳಗಾವಿ ವಲಯದ ಐಜಿಪಿ ರಾಘವೇಂದ್ರ ಸುಹಾಸ್, ಎಸ್ಪಿ ಲೋಕೇಶ ಜಗಲಾಸರ, ಡಿಸಿ ಕ್ಯಾಪ್ಟನ್ ಡಾ|ರಾಜೇಂದ್ರ, ಜಿಲ್ಲಾ ಶಸ್ತ್ರ ಚಿಕಿತ್ಸ ಡಾ|ಪ್ರಕಾಶ ಬಿರಾದಾರ, ಕೋವಿಡ್-19 ಆಸ್ಪತ್ರೆಯ ತಜ್ಞ ವೈದ್ಯ ಡಾ|ಬಸವರಾಜ ಜವಳಿ ಹಾಗೂ ಇಡೀ ಆಸ್ಪತ್ರೆಯ ಸಿಬ್ಬಂದಿ ಪೊಲೀಸ್ ಪೇದೆಗಳಿಗೆ ಚಪ್ಪಾಳೆ ತಟ್ಟಿ ಸ್ವಾಗತಿಸಿದರು.
ಎಟಿಎಂ ಸೆಕ್ಯೂರಿಟಿ ಗಾರ್ಡ್-ಕಾರ್ಖಾನೆ ಉದ್ಯೋಗಿ: ಬಾಗಲಕೋಟೆ ನಗರದ 52 ವರ್ಷದ ಕಾರ್ಖಾನೆ ಉದ್ಯೋಗಿ ಪಿ-262, ಜಮಖಂಡಿಯ ಬ್ಯಾಂಕ್ ಎಟಿಎಂನ ಸೆಕ್ಯೂರಿಟಿ ಗಾರ್ಡ್ 32 ವರ್ಷದ ಪಿ-373 ಕೂಡ ಗುಣಮುಖರಾಗಿದ್ದು, ಅವರನ್ನೂ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಯಿತು. ಅಲ್ಲದೇ ಮುಧೋಳದ ಇನ್ನೋರ್ವ 43 ವರ್ಷದ ಪೊಲೀಸ್ ಪೇದೆ ಪಿ-380 ಕೂಡ ಗುಣಮುಖರಾಗಿದ್ದು, ಅವರ 14 ವರ್ಷದ ಪುತ್ರ ಪಿ-468ಗೆ ಏ. 24ರಂದು ಸೋಂಕು ಖಚಿತವಾಗಿತ್ತು. ಮಗನೊಂದಿಗೆ ಇದ್ದು, ಆತ ಬಿಡುಗಡೆ ಆಗುವ ವೇಳೆಯೇ ತಾನೂ ಆಸ್ಪತ್ರೆಯಿಂದ ಬಿಡುಗಡೆಗೊಳ್ಳುವುದಾಗಿ ಪೇದೆ ಪಿ-380 ಹೇಳಿದ್ದರಿಂದ ಸದ್ಯ ಅವರು ಮಗನೊಂದಿಗೆ ಆಸ್ಪತ್ರೆಯಲ್ಲೇ ಕ್ವಾರಂಟೈನಲ್ಲಿದ್ದಾರೆ ಎಂದು ಎಸ್ಪಿ ಲೋಕೇಶ ತಿಳಿಸಿದರು.
ಭಾವುಕರಾದ ಪೇದೆಗಳು ಕೋವಿಡ್-19 ಮುಕ್ತರಾಗಿ ಜಿಲ್ಲಾ ಆಸ್ಪತ್ರೆಯಿಂದ ಹೊರ ಬರುವ ವೇಳೆ ಚಿಕಿತ್ಸೆ ನೀಡಿದ ವೈದ್ಯರು, ನರ್ಸ್‌ಗಳು, ದಾದಿಯರು, ಐಜಿಪಿ, ಎಸ್ಪಿ, ಡಿಸಿ ಸಹಿತ ಹಲವು ಹಿರಿಯ ಅಧಿಕಾರಿಗಳು ಕೈಯಲ್ಲಿ ಹೂವಿನ ಗುಚ್ಛ ಹಿಡಿದು, ಚಪ್ಪಾಳೆ ತಟ್ಟುತ್ತ ಸ್ವಾಗತಿದರು. ಖಾಕಿ ಬಟ್ಟೆಯಲ್ಲೇ ಆಸ್ಪತ್ರೆಯಿಂದ ಹೊರ ಬಂದ ಇಬ್ಬರು ಪೇದೆಗಳೂ ಭಾವುಕರಾಗಿ ಎಲ್ಲರಿಗೂ ಕೈಮುಗಿದರು.
ಏ.15ರಂದು ನನಗೆ ಸೋಂಕಿದೆ ಎಂದು ಹೇಳಿದಾಗ ಗಾಬರಿಯಾಗಿತ್ತು. ಆದರೆ, ಈ ರೋಗಕ್ಕೆ ಭಯ ಬೀಳಬಾರದು. ವೈದ್ಯರ, ಹಿರಿಯ ಅಧಿಕಾರಿಗಳ ಕಾಳಜಿಯಿಂದ ಉತ್ತಮ ಚಿಕಿತ್ಸೆಯೊಂದಿಗೆ ನಾವು ಗುಣಮುಖರಾಗಿ ಹೊರಬಂದಿದ್ದೇವೆ. ಇದೇನು ಭಯಾನಕ ರೋಗವಲ್ಲ. ಭಯ ಬಿಟ್ಟರೆ, ರೋಗದಿಂದ ಹೊರಬರಲು ಸಾಧ್ಯ. ಎಲ್ಲರೂ ಕೋವಿಡ್ 19 ರೋಗದ ವಿರುದ್ಧ ಎದೆಗುಂದದೇ ಹೋರಾಡೋಣ. –
39 ವರ್ಷದ ಪಿ-263 ಪೊಲೀಸ್ ಪೇದೆ, ಮುಧೋಳ
ನಾವೀಗ ಕೋವಿಡ್ 19 ಮುಕ್ತರಾಗಿದ್ದೇವೆ. ಲಾಕಡೌನ್‌ಕ್ಕಿಂತ ಮುಂಚೆಯೇ ನಾನು ಇಡೀ ಕುಟುಂಬವನ್ನು ವಿಜಯಪುರಕ್ಕೆ ಕಳುಹಿಸಿದ್ದೆ. ಮುಧೋಳದಲ್ಲಿ ಒಬ್ಬನೇ ಇದ್ದೆ. ಕೆಲಸ ನಿರ್ವಹಿಸುವಾಗ ಈ ಸೋಂಕು ಬಂದಿತ್ತು. ಈಗ ಗುಣಮುಖರಾಗಿದ್ದೇವೆ. ಸೈನಿಕರಂತೆ ನಾವೆಲ್ಲ ಕೊರೊನಾ ವಿರುದ್ಧ ಕೆಲಸ ಮಾಡುತ್ತೇವೆ.
-43 ವರ್ಷದ ಪಿ-380 ಪೊಲೀಸ್ ಪೇದೆ, ಮುಧೋಳ
ರಾಜ್ಯದಲ್ಲೇ ಮೊದಲ ಬಾರಿಗೆ ಮುಧೋಳದ ಪೊಲೀಸ್ ಸಿಬ್ಬಂದಿಗೆ ಈ ಸೋಂಕು ತಗುಲಿತ್ತು. ಅವರು ಆಸ್ಪತ್ರೆಗೆ ಹೋಗುವಾಗ ಆತಂಕದಿಂದ ಸ್ವಲ್ಪ ಭಾವುಕರಾಗಿದ್ದರು. ಗುಣಮುಖರಾಗಿ ಹೊರಬಂದಿದ್ದು, ಗಮಗೆ ಖುಷಿ ತಂದಿದೆ. ಲಾಕ್‌ಡೌನ್ ಈಗ ಸ್ವಲ್ಪ ಸಡಿಲಿಕೆ ಆಗಿದೆ. ಪ್ರತಿಯೊಬ್ಬರೂ ಸಾಮಾಜಿಕ ಅಂತರದೊಂದಿಗೆ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು.
– ರಾಘವೇಂದ್ರ ಸುಹಾಸ್, ಐಜಿಪಿ, ಬೆಳಗಾವಿ