Advertisement

ನಿವೃತ್ತ ಯೋಧನ ಪುತ್ರನ ಕೊಂದ ಮೂವರ ಬಂಧನ

12:21 PM Apr 15, 2018 | Team Udayavani |

ಬೆಂಗಳೂರು: ಒಲಾ ಕ್ಯಾಬ್‌ ಕಳವು ಮಾಡುವ ಉದ್ದೇಶದಿಂದ ನಿವೃತ್ತ ಯೋಧರ ಪುತ್ರನನ್ನು ಕೊಂದ ಅಸ್ಸಾಂ ಮೂಲದ ಸಹೋದರರು ಸೇರಿ ಮೂವರು ಆರೋಪಿಗಳು ಪೂರ್ವ ವಿಭಾಗದ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Advertisement

ಅಸ್ಸಾಂ ಮೂಲದ ದೀಮನ್‌ ಶಂಕರ್‌ ದಾಸ್‌ (26), ಈತನ ಅಣ್ಣ ಅರೂಪ್‌ ಶಂಕರ್‌ ದಾಸ್‌ (36), ಒಡಿಶಾ ಮೂಲದ ಭರತ್‌ ಪ್ರಧಾನ್‌ (22) ಬಂಧಿತರು. ಆರೋಪಿಗಳು ಮಾ.18ರಂದು ರಿನ್‌ಸನ್‌ (22) ಎಂಬ ಓಲಾ ಕ್ಯಾಬ್‌ ಚಾಲಕನನ್ನು ಹೊಸೂರು ಸಿಪ್‌ಕಾಟ್‌ ಠಾಣೆ ವ್ಯಾಪ್ತಿಯಲ್ಲಿ ಹತ್ಯೆಗೈದು ಕಾರು ಕಳವು ಮಾಡಿ ಪರಾರಿಯಾಗಿದ್ದರು.

ಮೊಬೈಲ್‌ ನೆಟವರ್ಕ್‌ನ ಐಎಂಇಐ ಸಹಾಯದಿಂದ ಆರೋಪಿಗಳನ್ನು ಪತ್ತೆ ಹಚ್ಚಿದ್ದು, ಬಂಧಿತರಿಂದ 11 ಲಕ್ಷ ರೂ. ಮೌಲ್ಯದ ರೆನೋ ಕಾರು, 40 ಸಾವಿರ ಮೌಲ್ಯದ ಐಫೋನ್‌, 7 ಸಾವಿರ ಬೆಲೆಯ ಲೆನೊವಾ ಮೊಬೈಲ್‌ ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಟಿ.ಸುನಿಲ್‌ ಕುಮಾರ್‌ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮೂವರೂ ಆರೋಪಿಗಳು ಹೆಬ್ಬಗೋಡಿ ಠಾಣೆ ವ್ಯಾಪ್ತಿಯ ಕಾಚನಾಯಕನಹಳ್ಳಿಯಲ್ಲಿ ವಾಸವಿದ್ದು, ಕಟ್ಟಡ ಗುತ್ತಿಗೆದಾರರಿಗೆ ಕೂಲಿ ಕಾರ್ಮಿಕರನ್ನು ಒದಗಿಸುವ ಕೆಲಸ ಮಾಡುತ್ತಿದ್ದರು. ಸುಲಭವಾಗಿ ಹಣ ಸಂಪಾದಿಸುವ ಉದ್ದೇಶದಿಂದ ಆಗಾಗ ಮೆಜೆಸ್ಟಿಕ್‌ ಹಾಗೂ ಇತರೆ ಪ್ರಮುಖ ಸ್ಥಳಗಲ್ಲಿ ನಿಲ್ಲುತ್ತಿದ್ದ ಕ್ಯಾಬ್‌ ಚಾಲಕರನ್ನು ಬಾಡಿಗೆಗೆ ಕರೆದು, ನಿರ್ಜನ ಪ್ರದೇಶದಲ್ಲಿ ಕ್ಯಾಬ್‌ ನಿಲ್ಲಿಸಿ ದರೋಡೆಮಾಡುತ್ತಿದ್ದರು.

ಆದರೆ, ಇದುವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ. ನಿವೃತ್ತ ಯೋಧರ ಪುತ್ರ ರಿನ್‌ಸನ್‌, ಪದವಿ ಮುಗಿಸಿ, ಸ್ನೇಹಿತ ಸಿಜನ್‌ ಎಂಬಾತನೊಂದಿಗೆ ಸೇರಿ ಒಂದು ವರ್ಷದ ಹಿಂದೆ ಕಾರು ಖರೀದಿಸಿ ಓಲಾಗೆ ಅಟ್ಯಾಚ್‌ ಮಾಡಿಕೊಂಡಿದ್ದ. ಆರೋಪಿಗಳು ಮಾ.18ರಂದು ತಡರಾತ್ರಿ 12 ಗಂಟೆ ಸುಮಾರಿಗೆ ಬಿ.ಕೆ ಸಂದ್ರದ ಕೆಎಚ್‌ಬಿ ವೀರಣ್ಣಪಾಳ್ಯ ರೈಲ್ವೆ ಗೇಟ್‌ ಬಳಿ ಮೂವರು ಬಾಡಿಗೆಗೆ ಬರುವಂತೆ ಕ್ಯಾಬ್‌ ಚಾಲಕರನ್ನು ಕೇಳಿದ್ದಾರೆ.

Advertisement

ಆ್ಯಪ್‌ ಮೂಲಕ ಕಾಯ್ದಿರಿಸಿದರೆ ಮಾತ್ರ ಬರುವುದಾಗಿ ಚಾಲಕರು ಹೇಳಿದ್ದರು. ಈ ವೇಳೆ ಅಲ್ಲೇ ಇದ್ದ ರಿನ್‌ಸನ್‌ ಬಳಿ ಹೋದ ರೋಪಿಗಳು, ಹೊಸೂರಿಗೆ ಬಾಡಿಗೆ ಬಂದರೆ 1,500 ರೂ. ಕೊಡುವುದಾಗಿ ಆಮಿಷವೊಡ್ಡಿ ಒಪ್ಪಿಸಿದ್ದರು. ಬಳಿಕ ನಾಗಾವಾರದ ರಿಂಗ್‌ ರಸ್ತೆ ಮೂಲಕ ಕೆ.ಆರ್‌.ಪುರ, ಸಿಲ್ಕ್ಬೋರ್ಡ್‌, ಎಲೆಕ್ಟ್ರಾನಿಕ್‌ ಸಿಟಿ ಟೋಲ್‌,

ಅತ್ತಿಬೆಲೆ ಟೋಲ್‌ ಮೂಲಕ ಹೊಸೂರಿಗೆ ಸಂಚರಿಸಿ ಅಲ್ಲಿಂದ ಸಿಪ್‌ಕಾಟ್‌ ಇಂಡಸ್ಟ್ರೀಯಲ್‌ನ ನಿರ್ಜನ ಪ್ರದೇಶದಲ್ಲಿ ಮೂತ್ರ ವಿಸರ್ಜನೆಗೆ ಕಾರು ನಿಲ್ಲಿಸುವಂತೆ ಆರೋಪಿಗಳು ಕೇಳಿದ್ದಾರೆ. ಆದರೆ ರಿನ್‌ಸನ್‌ ಕಾರು ನಿಲ್ಲಿಸಿಲ್ಲ. ನಂತರ ತಡರಾತ್ರಿ 3ರ ಸುಮಾರಿಗೆ ಬೇಡರಪಳ್ಳಿ ಗ್ರಾಮದ ಸರ್ಕಾರಿ ಶಾಲೆ ಬಳಿ ತಮ್ಮ ಮನೆ ಇದೆ ಎಂದು ಹೇಳಿ ಕಾರನ್ನು ನಿಲ್ಲಿಸಲು ಸೂಚಿಸಿದ್ದಾರೆ.

ಕುತ್ತಿಗೆ ಬಿಗಿದು ಕೊಲೆ: ಕಾರು ನಿಲ್ಲಿಸುತ್ತಿದ್ದಂತೆ ದೀಮನ್‌ ಶಂಕರ್‌, ರಿನ್‌ಸನ್‌ನ ಕುತ್ತಿಗೆ ಮತ್ತು ಬಾಯನ್ನು ಬಿಗಿಯಾಗಿ ಹಿಡಿದಿದ್ದಾನೆ. ಭರತ್‌ ಸೂð ಡ್ರೈವರ್‌ ಮತ್ತು ಚಾಕುವಿನಿಂದ ಆತನ ಕತ್ತು, ಹೊಟ್ಟೆ, ಎದೆ ಭಾಗಕ್ಕೆ ಇರಿದಿದ್ದಾನೆ. ಅರೂಪ್‌ ದಾಸ್‌ ತನ್ನ ಬ್ಯಾಗ್‌ನಲ್ಲಿದ್ದ ಟವೆಲ್‌ನಿಂದ ಚಾಲಕನ ಕತ್ತು ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದ.

ಮೃತಪಟ್ಟ ಕೂಡಲೇ ಆತನ ಎರಡು ಮೊಬೈಲ್‌, ಹಣ ಇತರೆ ದಾಖಲೆಗಳನ್ನು ಕಸಿದುಕೊಂಡು, ಪಕ್ಕದಲ್ಲಿದ್ದ ಚರಂಡಿಗೆ ಶವವನ್ನು ಎಸೆದು ಕಾರಿನೊಂದಿಗೆ ಪರಾರಿಯಾಗಿದ್ದರು. ಇತ್ತ ಮಗ ಮನೆಗೆ ಬಾರದಿದ್ದಾಗ ಆತಂಕಗೊಂಡ ತಂದೆ ಟಿ.ಎಲ್‌ ಸೋಮನ್‌, ಮಾ.20ರಂದು ಡಿ.ಜೆ.ಹಳ್ಳಿ ಠಾಣೆಗೆ ನಾಪತ್ತೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ರಿನ್‌ಸನ್‌ ಮೊಬೈಲ್‌ ನಂಬರ್‌ ಪರಿಶೀಲಿಸಿದಾಗ ಸ್ವಿಚ್‌ಆಫ್ ಆಗಿತ್ತು. ಕಾರಿನ ಜಿಪಿಎಸ್‌ ಪರಿಶೀಲಿಸಿದಾಗ ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ಪತ್ತೆಯಾಗಿತ್ತು.

ಆಗ ಅಕ್ಕ-ಪಕ್ಕದ ಸಿಸಿಟಿವಿ ಕ್ಯಾಮೆರಾದಲ್ಲಿ ಮಾ.18ರಂದು ತಡರಾತ್ರಿ 1.30ರಲ್ಲಿ ರಿನ್‌ಸನ್‌ ಕ್ಯಾಬ್‌ನಲ್ಲಿ ಸಂಚರಿಸುತ್ತಿರುವ ದೃಶ್ಯ ಸೆರೆಯಾಗಿತ್ತು. ಆದರೆ, ಹೊಸೂರು ಟೋಲ್‌ಗೇಟ್‌ನಿಂದ ಮುಂದೆ ಸಾಗಿದ ಕಾರು, ಆ ನಂತರದ ಟೋಲ್‌ಗೇಟ್‌ ಪ್ರವೇಶಿಸಿರಲಿಲ್ಲ. ಈ ಮಧ್ಯೆ ತಮಿಳುನಾಡಿನ ಸಿಪ್‌ಕಾಟ್‌ ಪೊಲೀಸರು ಡಿ.ಜೆ. ಹಳ್ಳಿ ಪೊಲೀಸರಿಗೆ ಅನಾಥ ಶವ ಪತ್ತೆಯಾಗಿರುವ ಬಗ್ಗೆ ಮಾಹಿತಿ ನೀಡಿದ್ದರು. ಬಳಿಕ ರಿನ್‌ಸನ್‌ ತಂದೆ ಮೃತದೇಹ ತಮ್ಮ ಮಗನದ್ದೇ ಎಂದು ದೃಢಪಡಿಸಿದ್ದರು.

ಐಫೋನ್‌ ಆನ್‌ ಆಗಿತ್ತು: ಕೊಲೆಯಾದ ಬಳಿಕವೂ ರಿನ್‌ಸನ್‌ನ ಐಫೋನ್‌ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಮೊಬೈಲ್‌ನ ಐಎಂಇಐ ನಂಬರ್‌ ಪರಿಶೀಲಿಸಿದಾಗ ಟವರ್‌ ಲೊಕೇಶನ್‌ ಕಾಚನಾಯಕನಹಳ್ಳಿಯಲ್ಲಿ ತೋರಿಸುತ್ತಿತ್ತು. ಕೂಡಲೇ ಪೊಲೀಸರು ಸ್ಥಳಕ್ಕೆ ತೆರಳಿ ಪ್ರಮುಖ ಆರೋಪಿ ದೀಮನ್‌ ಶಂಕರ್‌ ದಾಸ್‌ನನ್ನು ಬಂಧಿಸಿ, ಈತ ನೀಡಿದ ಮಾಹಿತಿ ಮೇರೆಗೆ ಇತರರನ್ನು ಬಂಧಿಸಿದ್ದಾರೆ.

ಸೆಕ್ಯೂರಿಟಿ ಗಾರ್ಡ್‌ ಅಪಹರಿಸಿದ್ದ ಹಂತಕರು: ಆರೋಪಿ ದೀಮನ್‌ ಶಂಕರ್‌ ಈ ಮೊದಲು ಯಶವಂತಪುರದ ಮ್ಯಾಕ್ಸ್‌ ಗ್ರಾಂಡಿಯರ್‌ ಹೋಟೆಲ್‌ನಲ್ಲಿ ಸೆಕ್ಯೂರಿಟಿ ಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದಾಗ ತನ್ನ ಸಹೋದರನೊಂದಿಗೆ ಸೇರಿಕೊಂಡು, ಮತ್ತೂಬ್ಬ ಸೆಕ್ಯೂರಿಟಿ ಗಾರ್ಡ್‌ ಜಂಟೂದಾಸ್‌ ಎಂಬಾತನನ್ನು ಅಪಹರಿಸಿ ಐದು ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ. ಆದರೆ, ಜಂಟೂದಾಸ್‌ ಕೆಲ ದಿನಗಳ ಬಳಿಕ ಆರೋಪಿಗಳಿಂದ ತಪ್ಪಿಸಿಕೊಂಡು ಬಂದಿದ್ದ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next