Advertisement

ಮೂರು ತಿಂಗಳ ಬಳಿಕ ಅಂತೂ ಬಂತು ಉಚಿತ ಸೈಕಲ್‌

11:07 PM Sep 18, 2019 | mahesh |

ಸುಳ್ಯ: ಈ ಸಾಲಿನ ಶೈಕ್ಷಣಿಕ ವರ್ಷ ಆರಂಭಗೊಂಡು ಮೂರು ತಿಂಗಳ ಬಳಿಕ ತಾಲೂಕಿನ 1,294 ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್‌ ವಿತರಣೆಗೆ ಸಿದ್ಧವಾಗಿವೆ. ತಾಲೂಕಿಗೆ ಪೂರೈಕೆಯಾಗಿರುವ ಬೈಸಿಕಲ್‌ಗ‌ಳನ್ನು ಅರಂಬೂರು ಸನಿಹದ ಇಡ್ಯಡ್ಕ ಸ.ಹಿ.ಪ್ರಾ. ಶಾಲಾ ಆವರಣದಲ್ಲಿ ದಾಸ್ತಾನು ಇರಿಸಲಾಗಿದೆ. ಕೆಲವು ದಿನಗಳಲ್ಲಿ ಇದನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಇಲಾಖೆ ಮಾಹಿತಿ ನೀಡಿದೆ.

Advertisement

ಉಚಿತ ಬೈಸಿಕಲ್‌
2019-20ನೇ ಸಾಲಿನಲ್ಲಿ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್‌ ವಿತರಿಸಲು ಅನುಮತಿ ನೀಡಿ ಸರಕಾರ ಆದೇಶ ಹೊರಡಿಸಿತ್ತು. ಶಾಲೆಗಳಿಗೆ ಸರಬರಾಜು ಮಾಡಬೇಕಾದ ಬೈಸಿಕಲ್‌ಗ‌ಳ ಸಂಖ್ಯೆ ಸರಬರಾಜುದಾರರಿಗೆ ನೀಡಲಾಗಿತ್ತು. ವಿತರಣೆ ಮಾಡಿದ ಅನಂತರ ಸಂಪೂರ್ಣ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಭರ್ತಿ ಮಾಡಬೇಕಿದೆ. ಹೊಸ ಬೈಸಿಕಲ್‌ಗ‌ಳನ್ನು ವಿತರಣೆ ಮಾಡುವ ಮೊದಲು ಈ ಹಿಂದಿನ ವರ್ಷಗಳಲ್ಲಿ ಉಳಿಕೆಯಾಗಿರುವ ಬೈಸಿಕಲ್‌ ಇದ್ದಲ್ಲಿ ಗುಣಮಟ್ಟ ತಪಾಸಣೆ ಮಾಡಿ ವಿತರಿಸುವಂತೆ ರಾಜ್ಯ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿ ನಿರ್ದೇಶನ ನೀಡಿದೆ.

ತಾಲೂಕಿನ 16 ಸರಕಾರಿ ಮತ್ತು 7 ಅನುದಾನಿತ ಪ್ರೌಢಶಾಲೆಗಳ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕ ಮತ್ತು ಬಾಲಕಿಯರು ಸೇರಿ ಒಟ್ಟು 1,294 ಮಂದಿ ಇದರ ಪ್ರಯೋಜನ ಪಡೆದುಕೊಳ್ಳಲಿದ್ದಾರೆ. ಕಳೆದ ವರ್ಷ ಉಡುಪಿ ಜಿಲ್ಲೆಯಲ್ಲಿ 8,572 ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 13,715 ಬೈಸಿಕಲ್‌ಗ‌ಳು ಪೂರೈಕೆಯಾಗಿವೆ. ಸುಳ್ಯ ತಾಲೂಕಿನಲ್ಲಿ 828 ಸೈಕಲ್‌ ವಿತರಣೆ ಮಾಡಲಾಗಿತ್ತು.

ದುರಸ್ತಿಗೆ ಕಿಟ್‌
ಬೈಸಿಕಲ್‌ಗ‌ಳನ್ನು ಮಕ್ಕಳಿಗೆ ವಿತರಿಸಿದ ಅನಂತರ ಸಣ್ಣಪುಟ್ಟ ದುರಸ್ತಿ ಕೆಲಸಗಳನ್ನು ನಿರ್ವಹಿಸಲು ಪ್ರತಿ ಶಾಲೆಗೆ ಒಂದು ಟೂಲ್‌ ಕಿಟ್‌ಅನ್ನು ಒದಗಿಸಲು ಗುತ್ತಿಗೆ ಸಂಸ್ಥೆಗೆ ತಿಳಿಸಲಾಗಿದೆ.

ಬೈಸಿಕಲ್‌ ಮಾರಾಟದಂತಹ ದುರ್ಬಳಕೆ ತಡೆಯುವ ಸಲುವಾಗಿ ವಿತರಿಸುವ ಬೈಸಿಕಲ್‌ ಮೇಲೆ ಹೆಸರು, ಸಂಖ್ಯೆ ಅಥವಾ ಗುರುತನ್ನು ನಮೂದಿಸಲು ಶಾಲೆಗಳು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ವಿದ್ಯಾರ್ಥಿ ಶಾಲೆಗೆ ಹಾಜರಾಗಲು ಉಪಯೋಗಿಸದೇ ಇತರರು ದುರ್ಬಳಕೆ ಮಾಡದಂತೆ ನಿಗಾ ವಹಿಸುವಂತೆ ತಿಳಿಸಲಾಗಿದೆ. ಈಗಾಗಲೇ ಬೈಸಿಕಲ್‌ ಜೋಡಣೆ ಸಂದರ್ಭ ಗುಣಮಟ್ಟ ಪರಿಶೀಲನೆಗಾಗಿ ವಿಭಾಗ ಮಟ್ಟದಲ್ಲಿ 1 ಮತ್ತು ಜಿಲ್ಲಾಮಟ್ಟದಲ್ಲಿ ಎರಡು ತಂಡ ರಚಿಸಲಾಗಿದೆ.

Advertisement

ಬಸ್‌ ಪಾಸ್‌, ಹಾಸ್ಟೆಲ್‌ ಮಕ್ಕಳಿಗೆ ಬೈಸಿಕಲ್‌ ಇಲ್ಲ?
ಸುತ್ತೋಲೆ ಪ್ರಕಾರ ನಗರ ಪಾಲಿಕೆ ಸರಹದ್ದಿನಲ್ಲಿ ಬರುವ ಶಾಲಾ ಮಕ್ಕಳಿಗೆ ಮತ್ತು ಬಸ್‌ ಪಾಸ್‌ ಹೊಂದಿರುವವರಿಗೆ, ಹಾಸ್ಟೆಲ್‌ ಸೌಲಭ್ಯ ಹೊಂದಿರುವವರಿಗೆ ಬೈಸಿಕಲ್‌ ಇಲ್ಲ ಎಂದಿದೆ. ಅದೇ ಸುತ್ತೋಲೆಯಲ್ಲಿ ಇನ್ನೊಂದೆಡೆ ಗುಡ್ಡಗಾಡು ಪ್ರದೇಶಗಳಲ್ಲಿ ಬಸ್‌ಪಾಸ್‌ ಹೊಂದಿರುವ ಮಕ್ಕಳಿಗೆ ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ನಡೆಯುತ್ತಿರುವ ವಿದ್ಯಾರ್ಥಿ ನಿಲಯಗಳಲ್ಲಿ ಇರುವ ವಿದ್ಯಾರ್ಥಿಗಳಿಗೆ ಬೈಸಿಕಲ್‌ ನೀಡಲಾಗುವುದು ಎಂದಿದೆ. ಹೀಗಾಗಿ ನಿಯಮಕ್ಕೆ ಒಳಪಡದೆ ಇರುವ ಕೆಲ ಮಕ್ಕಳು ಈ ಸೌಲಭ್ಯದಿಂದ ವಂಚಿತರಾಗುವ ಸಾಧ್ಯತೆಯು ಇಲ್ಲದಿಲ್ಲ.

ವಿತರಣೆಗೆ ಕ್ರಮ
ತಾಲೂಕಿನ 21 ಪ್ರೌಢಶಾಲೆಗಳ 1,294 ವಿದ್ಯಾರ್ಥಿಗಳು ಬೈಸಿಕಲ್‌ ಪಡೆಯಲು ಅರ್ಹತೆ ಹೊಂದಿದ್ದು, ಈಗಾಗಲೇ ಬೈಸಿಕಲ್‌ ಬಂದಿದೆ. ಅದನ್ನು ಅರಂಬೂರು ಇಡ್ಯಡ್ಕ ಶಾಲೆಯಲ್ಲಿ ಇರಿಸಿದ್ದು, ಜೋಡಣೆ ಆಗಿ ಶಾಲೆಗಳಿಗೆ ಪೂರೈಸಲಾಗುತ್ತಿದೆ. ಶೀಘ್ರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು.
– ಮಹಾದೇವ , ಕ್ಷೇತ್ರ ಶಿಕ್ಷಣಾಧಿಕಾರಿ, ಸುಳ್ಯ

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next