Advertisement

ಕರಾವಳಿಯಲ್ಲಿ 3 ಸೈನಿಕ ತರಬೇತಿ ಶಾಲೆ

08:22 AM Jun 24, 2022 | Team Udayavani |

ಕಾರವಾರ: ಸರಕಾರ ಸೈನಿಕ ತರಬೇತಿ ಶಾಲೆಗಳನ್ನು ತೆರೆಯಲು ಅತ್ಯಂತ ಉತ್ಸಾಹ ತೋರಿದ್ದು, ಹಿಂದುಳಿದ ವರ್ಗಗಳ ಮತ್ತು ಪರಿಶಿಷ್ಟ ಜಾತಿ ಯುವಕರನ್ನು ಸೈನ್ಯಕ್ಕೆ ಸೇರಿಸಲು ಸಿದ್ಧತೆ ನಡೆಸಿದೆ. ಈ ನಿಟ್ಟಿನಲ್ಲಿ ಕರಾವಳಿಯಲ್ಲಿ ಮೂರು ಸೈನಿಕ ತರಬೇತಿ ಶಾಲೆಗಳು ಕಾರ್ಯಾರಂಭ ಮಾಡಲಿವೆ.

Advertisement

ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀನಿವಾಸ ಪೂಜಾರಿ ಅವರು ಸಲ್ಲಿಸಿದ ಪ್ರಸ್ತಾವನೆಗೆ ಅನುಮೋದನೆ ನೀಡಿರುವ ಸರಕಾರ, ದಕ್ಷಿಣ ಕನ್ನಡದಲ್ಲಿ ರಾಣಿ ಅಬ್ಬಕ್ಕ ಸೈನಿಕ ಶಾಲೆ, ಉಡುಪಿಯಲ್ಲಿ ಕೋಟಿ ಚೆನ್ನಯ್ಯ ಅವಳಿ ವೀರಪುರುಷ ಸೈನಿಕರ ಶಾಲೆ ಹಾಗೂ ಉತ್ತರಕನ್ನಡದಲ್ಲಿ ಹೆಂಜಾ ನಾಯ್ಕ ಸೈನಿಕ ಶಾಲೆ ತೆರೆಯಲು ಮುಂದಾಗಿದ್ದು, ಈ ಬಗ್ಗೆ  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧೀನ ಕಾರ್ಯದರ್ಶಿ ವಿ.ಅಕ್ಕಮಹಾದೇವಿ ಆದೇಶ ಹೊರಡಿಸಿದ್ದಾರೆ.

ಈ ಸೈನಿಕ ಶಾಲೆಗಳಲ್ಲಿ ಸೇನಾ ಆಯ್ಕೆ ಪೂರ್ವ ತರಬೇತಿ, ಸಿದ್ಧತೆ, ವೃತ್ತಿ ಮಾರ್ಗದರ್ಶನ ಹಾಗೂ ತರಬೇತಿಯನ್ನು ಉಚಿತ ಊಟ-ವಸತಿಯೊಂದಿಗೆ ನೀಡಲು ಸರಕಾರ ನಿರ್ಧರಿಸಿದೆ. ಈ ಶಾಲೆಗಳಿಗೆ ಒಂದು ವರ್ಷಕ್ಕೆ ತಗಲುವ ವೆಚ್ಚ 67.50 ಲಕ್ಷ ರೂ.ಗಳನ್ನು ಸರಕಾರ ಮಂಜೂರು ಮಾಡಿದೆ.  ಸೇನೆ ಸೇರಬಯಸುವ ಯುವಕರು ಈ ಶಾಲೆಗಳಲ್ಲಿ ತರಬೇತಿ ಪಡೆಯಬಹುದು.

ನೇವಿ ತರಬೇತಿ ಶಾಲೆ ಬೇಕಿತ್ತು :

ಈ ನಡುವೆ ಸೈನಿಕ ಶಾಲೆಯಲ್ಲಿ ನೇವಿಗೆ ಸಂಬಂಧಿಸಿದ ಹುದ್ದೆಗಳಿಗೆ ಪೂರ್ವ ತರಬೇತಿ ನೀಡುವ ಶಾಖೆ ತೆರೆಯಬೇಕು ಎಂಬ ಆಗ್ರಹವೂ ಕೇಳಿಬಂದಿದೆ. ಸೀಬರ್ಡ್‌ ನೌಕಾನೆಲೆ ಯೋಜನೆ ಬೃಹತ್ತಾಗಿ ಬೆಳೆದಿದೆ. ಯುದ್ಧ ನೌಕೆಗಳಲ್ಲಿ ಕೆಲಸ ನಿರ್ವಹಿಸುವ ತಾಂತ್ರಿಕ ಮತ್ತು ತಾಂತ್ರಿಕೇತರ ತರಬೇತಿಗಳನ್ನು, ಡಾರ್ಕ್‌ ಯಾರ್ಡ್‌ನಲ್ಲಿ ಕೆಲಸ ಮಾಡುವ ಪೂರ್ವ ತರಬೇತಿ ನೀಡುವಂತಾದರೆ ಈ ಸೈನಿಕ ಶಾಲೆಗಳ ತರಬೇತಿ ಉದ್ದೇಶ ಯಶಸ್ವಿಯಾಗಲಿದೆ.

Advertisement

ನೌಕಾಪಡೆಯಲ್ಲಿ ಹೆಚ್ಚು ಉದ್ಯೋಗದ ಸಾಧ್ಯತೆಗಳಿವೆ. ಮರೀನ್‌ ಡ್ರೈವರ್, ನೌಕಾ ಚಾಲನೆ, ಸೇಲರ್ ಮತ್ತು ಈಜು ತರಬೇತಿ, ಜಲ ಸಾಹಸ ಕ್ರೀಡೆಗಳನ್ನು ನೇವಿಗೆ ಪೂರಕವಾಗಿ ಕಲಿಸುವ ಸೈನಿಕ ಶಾಲೆಯೂ ಬೇಕಿದೆ. ಈ ನಿಟ್ಟಿನಲ್ಲಿ ಸರಕಾರ ನೌಕಾನೆಲೆಗೆ ಬೇಕಾದ ತರಬೇತಿ ಕೋರ್ಸ್‌ ಆರಂಭಿಸಬೇಕಿದೆ. ಸದ್ಯ ಇಂಥ ತರಬೇತಿ ಶಾಲೆಗಳಿರುವುದು ದೂರದ ಮುಂಬಯಿ, ಚೆನ್ನೈ ಹಾಗೂ ಕೇರಳದಲ್ಲಿ. ಹೀಗಾಗಿ ರಾಜ್ಯ ಸರಕಾರ ಈ ತರಬೇತಿ ಶಾಖೆ-ಕೋರ್ಸ್‌ಗಳನ್ನು ಇಲ್ಲಿನ ಪದವಿ ಹಾಗೂ ಎಂಜಿನಿಯರಿಂಗ್‌ ಕಾಲೇಜು ಕಟ್ಟಡಗಳನ್ನೇ ಬಳಸಿ ಆರಂಭಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಏನಿದರ ಉಪಯೋಗ? :

ಕರಾವಳಿ ಜಿಲ್ಲೆಗಳಿಂದ ಸೈನ್ಯಕ್ಕೆ ಸೇರಲು ಯುವಕರನ್ನು ಪ್ರೇರೇಪಿಸುವುದು ಮೊದಲ ಉದ್ದೇಶ.  ಕೇಂದ್ರ ಸರಕಾರದ ಹೊಸ ಯೋಜನೆ  “ಅಗ್ನಿಪಥ’ಕ್ಕೆ ಯುವ ಪಡೆಯನ್ನು ಪ್ರೇರೇಪಿಸುವುದು ಹಾಗೂ ಮೂರು ಜಿಲ್ಲೆಗಳ ಇತಿಹಾಸದಲ್ಲಿ ಹೆಸರು ಮಾಡಿದ ಅಬ್ಬಕ್ಕ, ಕೋಟಿ ಚೆನ್ನಯ್ಯ ಹಾಗೂ ಹೆಂಜಾ ನಾಯ್ಕರ ಹೆಸರು ಉಳಿಸುವುದು ಇತರ ಉದ್ದೇಶಗಳಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next