ಮಂಗಳೂರು: ಕಮರ್ಶಿಯಲ್ ವೀಸಾದಲ್ಲಿ ಕುವೈಟ್‌ಗೆ ತೆರಳಿದ್ದ ಮೂವರು ಭಾರತೀಯರು “ತಮ್ಮದಲ್ಲದ’ ತಪ್ಪಿಗಾಗಿ ಕುವೈಟ್ ಪೊಲೀಸರಿಂದ ಬಂಧಿತರಾಗಿ ಇದೀಗ ಅಲ್ಲಿನ ಜೈಲು ಸೇರುವಂತಾಗಿದೆ.
ಮುಂಬಯಿಯ ಅಂಕಿತ್ ಶಿವಪ್ಪನಾೖಕ್ (29), ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಕೃಷ್ಣಮೂರ್ತಿ ಶಂಕರ ನಾೖಕ್ (26) ಮತ್ತು ಆಂಧ್ರಪ್ರದೇಶದ ಪ್ರಸ್ತುತ ಬೆಂಗಳೂರಿನಲ್ಲಿ ವಾಸ್ತವ್ಯವಿರುವ ನಿತೀಶ್ ಗಣೇಶ್ ಮನಿಕೇರಿ (29) ಅವರು ಕುವೈಟ್‌ನಲ್ಲಿ ಬಂಧಿತರಾದವರು.
ಘಟನೆಯ ವಿವರ: ಕುವೈಟ್‌ನ ಬ್ಯಾಂಕ್‌ನಲ್ಲಿ ಉದ್ಯೋಗದಲ್ಲಿರುವ ಬೆಂಗಳೂರಿನ ಆನಂದ್ ತಮ್ಮ ಅಂಗವಿಕಲ ಪುತ್ರನನ್ನು ಕುವೈಟ್‌ಗೆ ಕರೆಸಿಕೊಂಡಿದ್ದು, ಆತನನ್ನು ನೋಡಿಕೊಳ್ಳಲು ಕೃಷ್ಣಮೂರ್ತಿ ಶಂಕರ ನಾೖಕ್ ಅವರು ಜತೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಕೃಷ್ಣಮೂರ್ತಿ ಜತೆಗೆ ಅವರ ಇಬ್ಬರು ಸ್ನೇಹಿತರಾದ ಅಂಕಿತ್ ಶಿವಪ್ಪ ನಾೖಕ್ ಮತ್ತು ನಿತೀಶ್ ಗಣೇಶ್ ಮನಿಕೇರಿ ಕೂಡ ತಿರುಗಾಟಕ್ಕಾಗಿ ತೆರಳಿದ್ದರು.
ಕುವೈಟ್‌ನಲ್ಲಿರುವ ವೀಸಾ ಏಜಂಟ್ ಮೊಹ್ª ಹಸನ್ ಎಂಬಾತ ಈ ನಾಲ್ವರಿಗೆ ಕಮರ್ಶಿಯಲ್ ವೀಸಾ ಮಾಡಿಸಿಕೊಟ್ಟಿದ್ದ. ಈ ವೀಸಾದ ಮೂಲಕ ಕಳೆದ ವಾರ ಈ ನಾಲ್ವರು ಕುವೈಟಿಗೆ ತೆರಳಿದ್ದರು. ಕುವೈಟ್‌ನಲ್ಲಿ ತಿರುಗಾಟ ನಡೆಸಿ ಗುರುವಾರ ದಿನ (ಜ. 9) ಅಲ್ಲಿಂದ ಭಾರತಕ್ಕೆ ಅವರು ವಾಪಸಾಗುವ ವೇಳೆ ಕುವೈಟ್ ವಿಮಾನ ನಿಲ್ದಾಣದಲ್ಲಿ ಪೊಲೀಸರು ಅವರನ್ನು ತಡೆದರು. ಆದರೆ ಆನಂದ್ ಅವರ ಪುತ್ರನನ್ನು ಬಳಿಕ ಬಿಡುಗಡೆ ಮಾಡಿದರು.
ಆದರೆ ಅಂಕಿತ್ ಶಿವಪ್ಪ ನಾೖಕ್, ಕೃಷ್ಣಮೂರ್ತಿ ಶಂಕರ ನಾೖಕ್ ಮತ್ತು ನಿತೀಶ್ ಗಣೇಶ್ ಮನಿಕೇರಿ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಇದಕ್ಕೆ ಕಾರಣ ಏನೆಂದು ತಿಳಿದು ಬಂದಿಲ್ಲ. ಅವರಿಗೆ ಕಮರ್ಶಿಯಲ್ ವೀಸಾ ಮಾಡಿಸಿ ಕೊಟ್ಟಿದ್ದ ಏಜಂಟ್ ಮೊಹ್ª ಹಸನ್ ಮೇಲೆ ಈಗ ಸಂಶಯ ಬಂದಿದೆ. ಶುಕ್ರವಾರ ಅಲ್ಲಿ ರಜಾ ದಿನ ಆಗಿದ್ದು, ಇನ್ನೊಂದು ಕಡೆ ಒಮಾನ್ ದೇಶದ ದೊರೆ ಸಾವನ್ನಪ್ಪಿದ ಕಾರಣ 3 ದಿನ ಶೋಕಾಚರಣೆ ಪ್ರಯುಕ್ತ ಸರಕಾರಿ ರಜೆ ನೀಡಲಾಗಿದೆ. ಹಾಗಾಗಿ ಇನ್ನು ಮಂಗಳವಾರದ ತನಕ ಈ ಮೂವರು ಭಾರತೀಯರು ಕುವೈಟ್ ಜೈಲಿನಲ್ಲಿ ದಿನ ಕಳೆಯುವುದು ಅನಿವಾರ್ಯವಾಗಿದೆ. ಈ ಮೂವರ ಬಿಡುಗಡೆಗೆ ಕುವೈಟ್‌ನಲ್ಲಿರುವ ಮಂಗಳೂರಿನ ಎಂ. ಮೋಹನ್‌ದಾಸ್ ಕಾಮತ್ ಮತ್ತು ಅನಿಲ್ ಪ್ರಭು ಕಳಸ ಶ್ರಮಿಸುತ್ತಿದ್ದಾರೆ.
“ಈಗಾಗಲೇ ನಾವು ಈ ಬಗ್ಗೆ ಕುವೈಟ್‌ನಲ್ಲಿರುವ ಭಾರತದ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದೇವೆ. ಆದರೆ 3 ದಿನಗಳ ಶೋಕಾಚರಣೆ ಪ್ರಯುಕ್ತ ಸರಕಾರಿ ರಜೆ ಇರುವ ಕಾರಣ ಕುವೈಟ್ ಸರಕಾರದ ಪರವಾಗಿ ಯಾವನೇ ಅಧಿಕಾರಿಯನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಮಂಗಳವಾರದ ತನಕ ಕಾಯಲೇ ಬೇಕಾಗಿದೆ’ ಎಂದು ಎಂ. ಮೋಹನ್‌ದಾಸ್ ಕಾಮತ್ ಉದಯವಾಣಿಗೆ ತಿಳಿಸಿದ್ದಾರೆ.
ಮರಳುವಾಗ ಬಂಧಿಸಿದ್ದೇಕೆ?
ಈ ಮೂವರು ಕಮರ್ಶಿಯಲ್ ವೀಸಾದಲ್ಲಿ ಕುವೈಟ್‌ಗೆ ತೆರಳಿದ್ದು, ಅವರ ಮೇಲೆ ಯಾವುದೇ ದೂರು ಅಥವಾ ಆರೋಪಗಳಿದ್ದರೆ ಕುವೈಟ್ ಪ್ರವೇಶಿಸುವಾಗಲೇ ಅವರನ್ನು ಬಂಧಿಸಬೇಕಿತ್ತು. ಆದರೆ ಹಾಗೆ ಮಾಡದೆ ಅವರು ಹಿಂದಿರುಗುವ ವೇಳೆ ಬಂಧಿಸಲಾಗಿದೆ. ಇದಕ್ಕೆ ಕಾರಣಗಳನ್ನು ನೀಡಲಾಗಿಲ್ಲ. ಹಾಗಾಗಿ ತಮ್ಮದಲ್ಲದ ತಪ್ಪಿಗಾಗಿ ಅವರು ಜೈಲಿಗೆ ಸೇರಿದ್ದಾರೆ ಎಂದು ವಿಶ್ಲೇಷಿಸಲಾಗುತ್ತದೆ.