ಇಂಫಾಲ: ಇದೇ ಮೊದಲ ಬಾರಿಗೆ ಮಣಿಪುರದಲ್ಲಿ ಉಗ್ರರು ಡ್ರೋನ್ ಮೂಲಕ ಬಾಂಬ್ ದಾಳಿ ನಡೆಸಿದ ಘಟನೆ ವರದಿಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ.
ಗಲಭೆಪೀಡಿತ ಮಣಿಪುರದ ಕೋತ್ರುಕ್ ಮತ್ತು ಸೆನಜಮ್ ಚಿರಾಂಗ್‌ನಲ್ಲಿ ಸೋಮವಾರ ರಾತ್ರಿ ಉಗ್ರರು ಪ್ರತ್ಯೇಕ ಡ್ರೋನ್ ಬಾಂಬ್‌ಗಳನ್ನು ಸ್ಫೋಟಿಸಿದ್ದಾರೆ. ಈ ವೇಳೆ ಮಹಿಳೆ ಸೇರಿ ಇಬ್ಬರು ಮೃತಪಟ್ಟಿದ್ದು 12ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಈ ಬಾಂಬ್ ದಾಳಿಯನ್ನು ಖಂಡಿಸಿರುವ ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್, ನಾಗರಿಕರ ಮೇಲಿನ ಬಾಂಬ್ ದಾಳಿಯನ್ನು ಉಗ್ರ ಕೃತ್ಯ ಎಂದು ಬಣ್ಣಿ ಸಿದ್ದಾರೆ. ಅಲ್ಲದೆ ಈ ಕುರಿತು ತನಿಖೆ ನಡೆಸಲು 5 ಸದಸ್ಯರ ಸಮಿತಿಯನ್ನು ಮಣಿಪುರ ಸರಕಾರ ರಚಿಸಿದೆ. ಇವು ಮಣಿಪುರದಲ್ಲಿ ಡ್ರೋನ್ ಮೂಲಕ ಬಾಂಬ್ ದಾಳಿ ನಡೆಸಿದ ಮೊದಲ ಘಟನೆಗಳಾಗಿವೆ.
ಈ ಮಧ್ಯೆ ಮಣಿಪುರದಲ್ಲಿ ಡ್ರೋನ್ ಮೂಲಕ ದಾಳಿ ನಡೆಯುವ ಸಾಧ್ಯತೆ ಬಗ್ಗೆ ಮುಖ್ಯಮಂತ್ರಿಗಳ ಕಾರ್ಯಾಲಯವು ಪೊಲೀಸ್ ಇಲಾಖೆಗೆ 2 ಪತ್ರಗಳನ್ನು ಬರೆದಿತ್ತು ಎಂಬ ಮಾಹಿತಿಯೂ ಬಹಿರಂಗವಾಗಿದೆ.
ಮೈತೇಯಿ ಹೆಚ್ಚಿರುವ ಕಡೆ ದಾಳಿ
ಮೈತೇಯಿ ಸಮುದಾಯದವರು ಹೆಚ್ಚಿರುವ ಪಶ್ಚಿಮ ಮಣಿಪುರ ಜಿಲ್ಲೆಯಲ್ಲಿ ಡ್ರೋನ್ ಮೂಲಕ ಬಾಂಬ್ ದಾಳಿ ನಡೆಸಲಾಗಿದೆ. ಅಲ್ಲದೆ ಇದು ಕುಕಿ ಸಮುದಾಯದವರು ಹೆಚ್ಚಿರುವ ಕಾಂಗ್‌ಪೋಕಪಿ ಜಿಲ್ಲೆಯ ಗಡಿಗೆ ಹೊಂದಿಕೊಂಡಿದೆ. ಹೀಗಾಗಿ ಕುಕಿ ಉಗ್ರರೇ ಈ ಕೃತ್ಯ ಎಸಗಿರಬಹುದು ಎಂಬ ಶಂಕೆಯಿದೆ.