ದೋಹಾ: “ತ್ರೀ ಲಯನ್ಸ್’ ಅಬ್ಬರಿಸಿದೆ. ಆಫ್ರಿಕನ್ ಚಾಂಪಿಯನ್ ಸೆನೆಗಲ್ ವಿರುದ್ಧ ಗೋಲುಗಳ ಸುರಿಮಳೆಗೈದ ಇಂಗ್ಲೆಂಡ್ ಫಿಫಾ ವಿಶ್ವಕಪ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಇಲ್ಲಿನ ಎದುರಾಳಿ ಹಾಲಿ ಚಾಂಪಿಯನ್ ಫ್ರಾನ್ಸ್ ಎಂಬುದು ವಿಶೇಷ.
ಇಂಗ್ಲೆಂಡ್ 3-0 ಗೋಲುಗಳ ಅಧಿಕಾರಯುತ ಗೆಲುವು ಸಾಧಿಸಿತು. 38ನೇ ನಿಮಿಷದಲ್ಲಿ ಜೋರ್ಡನ್ ಹೆಂಡ್ರಿಕ್ಸ್, 45 +3ನೇ ನಿಮಿಷದಲ್ಲಿ ಹ್ಯಾರಿ ಕೇನ್, 57ನೇ ನಿಮಿಷದಲ್ಲಿ ಬುಕಾಯೊ ಸಕಾ ಗೋಲು ಸಿಡಿಸಿ ಇಂಗ್ಲೆಂಡ್ ಜಯಭೇರಿ ಮೊಳಗಿಸಿದರು.
ಇದರೊಂದಿಗೆ ಫಿಫಾ ವಿಶ್ವಕಪ್ ಕೂಟವೊಂದರಲ್ಲಿ ಸರ್ವಾಧಿಕ 12 ಗೋಲು ಬಾರಿಸಿದ ತನ್ನ ದಾಖಲೆಯನ್ನು ಸರಿದೂಗಿಸಿತು. 2018ರ ಆವೃತ್ತಿಯಲ್ಲೂ ಇಂಗ್ಲೆಂಡ್ 12 ಗೋಲು ಬಾರಿಸಿತ್ತು. ಇದನ್ನು ಹಿಂದಿಕ್ಕುವ ಎಲ್ಲ ಅವಕಾಶ ಇಂಗ್ಲೆಂಡ್ ಮುಂದಿದೆ. ಹಾಗೆಯೇ ಪ್ರಸಕ್ತ ಕೂಟದಲ್ಲಿ ಅತ್ಯಧಿಕ ಗೋಲು ಸಿಡಿಸಿದ ಹಿರಿಮೆಯೂ ಇಂಗ್ಲೆಂಡ್‌ನದ್ದಾಗಿದೆ.
ಈ ಜಯದೊಂದಿಗೆ ಸೆನೆಗಲ್ ವಿರುದ್ಧ ಆಡಿದ 21 ಪಂದ್ಯಗಳಲ್ಲಿ ಇಂಗ್ಲೆಂಡ್ ಅಜೇಯವಾಗಿ ಉಳಿದು ಸಾರ್ವಕಾಲಿಕ ದಾಖಲೆ ಸ್ಥಾಪಿಸಿತು. ಇದರಲ್ಲಿ 8 ಗೆಲುವು (ಡ್ರಾ) ವಿಶ್ವಕಪ್‌ನಲ್ಲಿ ಎದುರಾಗಿದೆ.
Related Articles
ಸೆನೆಗಲ್ ನಿರ್ಗಮನದೊಂದಿಗೆ ಆಫ್ರಿಕಾದ ಕೇವಲ ಒಂದು ತಂಡವಷ್ಟೇ ಕೂಟದಲ್ಲಿ ಉಳಿದು ಕೊಂಡಂತಾಯಿತು. ಅದು ಮೊರೊಕ್ಕೊ. ಕ್ವಾರ್ಟರ್ ಫೈನಲ್‌ನಲ್ಲಿ ಈ ತಂಡದ ಹಣೆಬರಹ ನಿರ್ಧಾರ ವಾಗಲಿದೆ. ಮೊರೊಕ್ಕೊ ಎದುರಾಳಿ ಸ್ಪೇನ್.
ಮೊದಲಾ ರ್ಧದಲ್ಲಿ ಸೆನೆಗಲ್ ಆಟ ಉತ್ತಮವಾ ಗಿಯೇ ಇತ್ತು. ಅಭಿಮಾನಿ ಡ್ರಮ್ಮರ್ ಆಫ್ರಿಕನ್ ತಂಡವನ್ನು ಭರ್ಜರಿಯಾಗಿಯೇ ಹುರಿದುಂಬಿಸುತ್ತಿ ದ್ದರು. ಇಂಗ್ಲೆಂಡ್ ಆಟ ತುಸು ನಿಧಾನ ಗತಿಯಿಂದ ಕೂಡಿತ್ತು. ಅವರ ಅಭಿಮಾನಿಗಳೂ ಬಹಳ ತಣ್ಣಗೆ ಉಳಿದಿದ್ದರು. ಈ ಹಂತದಲ್ಲಿ ಸೆನೆಗಲ್ ಮುನ್ನಡೆಯೊಂದಕ್ಕೆ ಇಂಗ್ಲೆಂಡ್ ಕೀಪರ್ ಜೋರ್ಡನ್ ಪಿಕ್‌ಫೋರ್ಡ್ ಬಲವಾದ ತಡೆಯೊಡ್ಡಿದರು.
ಯಾವಾಗ 38ನೇ ನಿಮಿಷದಲ್ಲಿ ಜೋರ್ಡನ್ ಹೆಂಡ್ರಿಕ್ಸ್ ಗೋಲು ಬಾರಿಸಿದರೋ ಅಲ್ಲಿಗೆ ಸೆನೆಗಲ್ ಅಭಿಮಾನಿಗಳ ಅಬ್ಬರ ತಣ್ಣಗಾಯಿತು. ಇಂಗ್ಲೆಂಡ್ ಪಾಳೆಯದಲ್ಲಿ ಹೊಸ ಜೋಶ್ ಕಂಡುಬಂತು. ಒಂದೇ ನಿಮಿಷದಲ್ಲಿ ಹ್ಯಾರಿ ಕೇನ್ ಅವರಿಗೂ ಗೋಲು ಬಾರಿಸುವ ಅವಕಾಶ ಒಂದಿತ್ತು. ಇದರಲ್ಲಿ ಅವರು ಸಫಲರಾಗಲಿಲ್ಲ. ಆದರೆ ಸ್ಟಾಪೇಜ್ ಟೈಮ್‌ನಲ್ಲಿ ಈ ಅವಕಾಶವನ್ನು ವ್ಯರ್ಥಗೊಳಿಸಲಿಲ್ಲ. ಹೀಗೆ 2-0 ಮುನ್ನಡೆಯ ಖುಷಿಯೊಂದಿಗೆ ಇಂಗ್ಲೆಂಡ್ ವಿರಾಮಕ್ಕೆ ತೆರಳಿತು.
ವೇಲ್ಸ್ ಎದುರಿನ ಪಂದ್ಯದಿಂದ ಹೊರಗುಳಿದಿದ್ದ ಬುಕಾಯೊ ಸಕಾ ಇಂಗ್ಲೆಂಡ್ ಪರ 3ನೇ ಗೋಲ್ ಬಾರಿಸಿದರು. ಮುಂದಿನದು ಫ್ರಾನ್ಸ್ ಸವಾಲು. ಆದರೆ ಸ್ಟಾರ್ ಆಟಗಾರ ರಹೀಂ ಸ್ಟರ್ಲಿಂಗ್ ಗಾಯಾಳಾಗಿ ತವರಿಗೆ ವಾಪಸಾಗಿರುವುದು ಇಂಗ್ಲೆಂಡ್ ಮೇಲೆ ಯಾವ ಪರಿಣಾಮ ಬೀರಲಿದೆ ಎಂಬುದೊಂದು ಪ್ರಶ್ನೆ.