ಬೆಂಗಳೂರು: ಡಿಸೆಂಬರ್ 8ರಿಂದ 10ರವರೆಗೆ ನಗರ ಅಶೋಕ ಹೋಟೆಲ್ ನಲ್ಲಿ ಫ್ಯೂಚರ್ ಡಿಸೈನ್ ಸಮಾವೇಶ ನಡೆಯಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದನ್ನು ಉದ್ಘಾಟಿಸಲಿದ್ದಾರೆ ಎಂದು ಐಟಿ-ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಈ ಬಗ್ಗೆ ಶನಿವಾರ ವಿವರ ಮಾಹಿತಿ ನೀಡಿರುವ ಅವರು, ಈಗಾಗಲೇ ನ.11ರಿಂದ ನಡೆಯುತ್ತಿರುವ ‘ಬೆಂಗಳೂರು ಡಿಸೈನ್ ಫೆಸ್ಟಿವಲ್’ನ ಹಿನ್ನೆಲೆಯಲ್ಲಿ ಈ ಮಹತ್ಚದ ಸಮಾವೇಶವನ್ನು ಏರ್ಪಡಿಸಲಾಗುತ್ತಿದೆ ಎಂದಿದ್ದಾರೆ.
ರಾಜ್ಯ ಸರಕಾರವು ಏರ್ಪಡಿಸಿರುವ ಸಮಾವೇಶಕ್ಕೆ ಅಂತರರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಸಮಿತಿ, ಭಾರತೀಯ ವಿನ್ಯಾಸಗಾರರ ಒಕ್ಕೂಟ, ಸಿಐಐ ಮತ್ತು ಜೈನ್ ಸ್ಕೂಲ್ ಆಫ್ ಆರ್ಕಿಟೆಕ್ಟ್ ಸಹಯೋಗ ನೀಡುತ್ತಿವೆ ಎಂದು ಅವರು ಹೇಳಿದರು.
ಇದರಲ್ಲಿ ಜಗತ್ತಿನಾದ್ಯಂತದ 300ಕ್ಕೂ ಹೆಚ್ಚು ಡಿಸೈನ್ ಪರಿಣತರು ಮಾತನಾಡಲಿದ್ದು, 3,000ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. ಇದರಲ್ಲಿ ವರ್ಲ್ಡ್ ಡಿಸೈನ್ ಆರ್ಗನೈಸೇಶನ್, ವರ್ಲ್ಡ್ ಡಿಸೈನ್ ಕೌನ್ಸಿಲ್, ಬೆಂಗಳೂರು ಡಿಸೈನ್ ಫೆಸ್ಟಿವಲ್ ಮತ್ತು ಬೆಂಗಳೂರು ಡಿಸೈನ್ ಸಪ್ತಾಹದ ಪ್ರತಿನಿಧಿಗಳು ಸಕ್ರಿಯವಾಗಿ ತೊಡಗಿಸಿ ಕೊಳ್ಳಲಿದ್ದಾರೆ ಎಂದು ಅವರು ಹೇಳಿದ್ದಾರೆ.
Related Articles
ತಂತ್ರಜ್ಞಾನ ಮತ್ತು ವಿನ್ಯಾಸ ಎರಡೂ ಒಂದಕ್ಕೊಂದು ಅವಿಭಾಜ್ಯ ಅಂಗವಾಗಿವೆ. ಇದರ ಮೂಲಕ ಬಿಗ್ ಡೇಟಾ ಮತ್ತಿತರ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಒಟ್ಟು ಮೂರು ಟ್ರ್ಯಾಕ್ ಗಳಲ್ಲಿ ಸಮಾವೇಶದ ಗೋಷ್ಠಿಗಳು ನಡೆಯಲಿವೆ. ಇದರಲ್ಲಿ ವಿನ್ಯಾಸದ ಆಯಾಮಗಳು, ಒಳಾಂಗಣ ವಿನ್ಯಾಸ, ವಾಸ್ತುಶಿಲ್ಪ, ಮೆಟಾವರ್ಸ್ ಮತ್ತು ಎವಿಜಿಸಿ ಮುಂತಾದವನ್ನು ಕುರಿತು ವಿಚಾರ ವಿನಿಮಯ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸಮಾವೇಶಕ್ಕೆ ವಿದ್ಯಾರ್ಥಿಗಳು ಮತ್ತು ಸಾಮಾನ್ಯರ ವಿಭಾಗಗಳಲ್ಲಿ ಟಿಕೆಟ್ ಆಧಾರಿತ ಪ್ರವೇಶಾವಕಾಶ ಇದೆ. ಇದರಲ್ಲಿ ಡಿಸೈನ್ ಪ್ರದರ್ಶನ ಮೇಳ ಕೂಡ ಇರಲಿದೆ. ಹೆಚ್ಚಿನ ಮಾಹಿತಿಗಾಗಿ https://bengalurudesign festival.org/ ಜಾಲತಾಣವನ್ನು ನೋಡಬಹುದು ಎಂದು ಸಚಿವರು ತಿಳಿಸಿದ್ದಾರೆ.