ಹಾವೇರಿ: ಜಿಲ್ಲೆಯಲ್ಲಿ ಒಂದು ಕಡೆ ಕೋವಿಡ್ 19 ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ.
ಇನ್ನೊಂದೆಡೆ ಸೋಂಕಿತರ ಸಾವಿನ ಸಂಖ್ಯೆಯಲ್ಲೂ ಏರಿಕೆಯಾಗುತ್ತಿದೆ.
ಮಂಗಳವಾರದಂದು ಮೂವರು ಸೋಂಕಿತರು ಮೃತಪಟ್ಟಿದ್ದು ಜಿಲ್ಲೆಯಲ್ಲಿ ಈವರೆಗೆ ಕೋವಿಡ್ 19 ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 15ಕ್ಕೆ ಏರಿದೆ.
ರಾಣಿಬೆನ್ನೂರು ತಾಲೂಕಿನ 48ವರ್ಷದ ಮಹಿಳೆ ಪಿ-52660, ಬ್ಯಾಡಗಿ ತಾಲೂಕಿನ 70ವರ್ಷದ ವೃದ್ಧೆ ಪಿ-68352 ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟರೆ, ಹಾನಗಲ್ಲ ತಾಲೂಕಿನ 70ವರ್ಷದ ವೃದ್ಧ ಪಿ-68640 ತಮ್ಮ ಮನೆಯಲ್ಲಿಯೇ ಮೃತಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಮಂಗಳವಾರ ಹೊಸದಾಗಿ 39 ಜನರಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿದೆ. ರಾಣಿಬೆನ್ನೂರು ಹಾಗೂ ಹಾನಗಲ್ಲ ತಾಲೂಕುಗಳಲ್ಲಿ ತಲಾ 14, ಶಿಗ್ಗಾವಿ ತಾಲೂಕಿನಲ್ಲಿ ಆರು, ಹಾವೇರಿ ತಾಲೂಕಿನಲ್ಲಿ ಮೂರು, ಬ್ಯಾಡಗಿ ಹಾಗೂ ಹಿರೇಕೆರೂರಿನಲ್ಲಿ ತಲಾ ಒಂದೊಂದು ಕೋವಿಡ್ 19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಜಿಲ್ಲೆಯಲ್ಲಿ ಈವರೆಗೆ 534 ಕೋವಿಡ್ 19 ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು ಇವರಲ್ಲಿ 347 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 15 ಜನರು ಮೃತಪಟ್ಟಿದ್ದಾರೆ. 172 ಪ್ರಕರಣಗಳು ಸಕ್ರಿಯವಾಗಿವೆ. ಆರು ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.