ಮಡಿಕೇರಿ: ಸುಂಟಿಕೊಪ್ಪ ಠಾಣಾ ವ್ಯಾಪ್ತಿಯ ಗುಂಡುಕುಟ್ಟಿ ಎಸ್ಟೇಟ್‌ನಲ್ಲಿ ಮೇ 2ರಂದು ನಡೆದಿದ್ದ 5.18 ಲ.ರೂ.ದರೋಡೆ ಪ್ರಕರಣವನ್ನು ಭೇದಿಸಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಪಿರಿಯಾಪಟ್ಟಣದ ಬೆಣಗಾಲು ಗ್ರಾಮದ ನಿವಾಸಿ ಟಿ.ವಿ. ಹರೀಶ್ (57), ಸುಂಟಿಕೊಪ್ಪ ನಿವಾಸಿ ಕುಮಾ ರೇಶ್ (42) ಹಾಗೂ ಪ್ರಕರಣದ ಸಂಚುಕೋರ, ಮಾದಾಪುರ ಸಮೀಪದ ಇಗ್ಗೊàಡ್ಲು ನಿವಾಸಿ ಜಗ್ಗರಂಡ ಕಾವೇರಪ್ಪ ಬಂಧಿತರು. ಈ ಪೈಕಿ ಮೊದಲ ಮತ್ತು ಎರಡನೇ ಆರೋಪಿಗಳು ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಮತ್ತಷ್ಟು ವಿಚಾರಣೆಗಾಗಿ ಪೊಲೀಸರು ಕಸ್ಟಡಿಗೆ ಪಡೆದುಕೊಂಡಿದ್ದಾರೆ.
ಬಂಧಿತರಿಂದ ಸುಮಾರು 5 ಲ.ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್‌ಪಿ ಡಾ| ಸುಮನ್ ಡಿ.ಪನ್ನೇಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹರದೂರು ಸಮೀಪದ ಗುಂಡುಕುಟ್ಟಿ ಎಸ್ಟೇಟ್ ಮಾಲಕ ಕರ್ನಲ್ ಕುಮಾರ್ ಅವರು ಕಾರ್ಮಿಕರಿಗೆ ವೇತನ ನೀಡಲು ಎಸ್ಟೇಟ್ ರೈಟರ್ ವಿಜಯ್ ಕುಮಾರ್ ಎಂಬವರಿಗೆ ತಿಳಿಸಿದ್ದರು. ವಿಜಯ್ ಕುಮಾರ್ ಸುಂಟಿಕೊಪ್ಪದ ಬ್ಯಾಂಕಿನಿಂದ 5.18 ಲ.ರೂ. ಡ್ರಾ ಮಾಡಿಕೊಂಡು ಬರುತ್ತಿದ್ದರು. ಈ ಸಂದರ್ಭ ಎಸ್ಟೇಟ್ ಗೇಟ್ ಬಳಿ ಬೈಕಿನಲ್ಲಿ ಬಂದಿದ್ದ ಇಬ್ಬರು ವ್ಯಕ್ತಿಗಳು ವಿಜಯ್ ಕುಮಾರ್ ಮೇಲೆ ಹಲ್ಲೆ ನಡೆಸಿ, ಹಣ ಕಸಿದು ಪರಾರಿಯಾಗಿದ್ದರು. ಈ ಕುರಿತು ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಗಾಗಿ ಸೋಮವಾರಪೇಟೆ ಡಿವೈಎಸ್‌ಪಿ ಶೈಲೇಂದ್ರ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಜಿಲ್ಲಾ ಅಪರಾಧ ಪತ್ತೆ ದಳ, ಸುಂಟಿಕೊಪ್ಪ ಪೊಲೀಸರು, ಕುಶಾಲನಗರ ಸಿಐ ಮಹೇಶ್ ಮತ್ತು ಕ್ರೈಂ ಸಿಬಂದಿ ಪ್ರಕರಣದ ಬೆನ್ನು ಹತ್ತಿದ್ದರು. ತನಿಖಾ ತಂಡವು ಗುಂಡುಕುಟ್ಟಿ ಎಸ್ಟೇಟ್‌ನಲ್ಲಿ ರೈಟರ್ ಕೆಲಸ ಮಾಡಿ ನಿವೃತ್ತನಾಗಿದ್ದ ಕಾವೇರಪ್ಪನನ್ನು ವಶಕ್ಕೆ ಪಡೆದು ವಿಚಾರಿಸಿದ್ದರು. ಆತ ತನಿಖೆಯ ಹಾದಿ ತಪ್ಪಿಸಿದ್ದ.
ಬಳಿಕ ತಾಂತ್ರಿಕ ಸಾಕ್ಷಿಗಳನ್ನು ಸಂಗ್ರಹಿಸಿದ ಪೊಲೀಸರು ಕಾವೇರಪ್ಪನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡ. ಆತ ನೀಡಿಜ ಮಾಹಿತಿಯಂತೆ ಇತರರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾದರು.