Advertisement

ಜಲ ಸಂರಕ್ಷಣೆಗೆ ಮೂರು ಮನವಿ

01:43 AM Jul 01, 2019 | Sriram |

ನವದೆಹಲಿ: ‘ಸ್ಪರ್ಶ ಮಾತ್ರದಿಂದಲೇ ಬದುಕನ್ನು ಬದಲಿಸಬಲ್ಲ ಪಾರಸ್‌ ಮಣಿಯಂಥ ಶಕ್ತಿಯನ್ನು ನೀರು ಹೊಂದಿದ್ದು, ಅದನ್ನು ಸಂರಕ್ಷಿಸಬೇಕಾದ್ದು ನಮ್ಮ ಆದ್ಯ ಕರ್ತವ್ಯ’ ಎಂದು ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಜಲ ಸಂರಕ್ಷಣೆಗಾಗಿ ಸಾರ್ವಜನಿಕರಲ್ಲಿ ಮೂರು ಮನವಿಗಳನ್ನು ಮಾಡಿದ್ದಾರೆ.

Advertisement

ಎರಡನೇ ಬಾರಿ ಪ್ರಧಾನಿಯಾದ ನಂತರ ತಮ್ಮ ಜನಪ್ರಿಯ ಮಾಸಿಕ ರೇಡಿಯೋ ಕಾರ್ಯಕ್ರಮವಾದ ‘ಮನ್‌ ಕೀ ಬಾತ್‌’ ಅನ್ನು ಪುನರಾರಂಭಿಸಿರುವ ಅವರು, ಭಾನುವಾರ 2ನೇ ಸರಣಿಯ ಮೊದಲ ಕಂತಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಗುರವಾಗಿ ಪರಿಗಣಿಸದಿರಿ: 1975ರಲ್ಲಿ ದೇಶದಲ್ಲಿ ಜಾರಿಯಾಗಿದ್ದ ತುರ್ತು ಪರಿಸ್ಥಿತಿಗೆ ಇದೇ ಜೂ. 24ಕ್ಕೆ 44 ವರ್ಷಗಳು ಸಂದ ಹಿನ್ನೆಲೆಯಲ್ಲಿ ಪ್ರಧಾನಿ, ಆ ವಿಚಾರವನ್ನೂ ಉಲ್ಲೇಖೀಸಿ, ತುರ್ತು ಪರಿಸ್ಥಿತಿಗೆ ಕಾರಣರಾದವರು ಪ್ರಜಾಪ್ರಭುತ್ವವನ್ನು ಹಗುರವಾಗಿ ಪರಿಗಣಿಸಬಾರದು ಎಂದು ಎಚ್ಚರಿಸಿದರು. ”ಹಾಗೆಯೇ, ನಮ್ಮಲ್ಲಿರುವ ಅನೇಕ ಸೌಕರ್ಯಗಳ ಮಹತ್ವ ಅವು ನಮ್ಮ ಜತೆಗಿರುವವರೆಗೆ ನಮಗೆ ತಿಳಿಯುವುದಿಲ್ಲ. ಯಾರಾದರೂ ಅವನ್ನು ಅಪಹರಿಸಿದಾಗ ಅಥವಾ ಕಿತ್ತುಕೊಂಡಾಗ ಮಾತ್ರ ಅವುಗಳ ಮಹತ್ವ ನಮಗೆ ತಿಳಿಯುತ್ತದೆ” ಎಂದ ಅವರು, ”ತುರ್ತು ಪರಿಸ್ಥಿತಿ ವೇಳೆಯಲ್ಲೂ ಜನರಿಗೆ ತಮಗೆ ಹತ್ತಿರವಾದ ಕೆಲವು ವಿಚಾರ, ಸ್ವಾತಂತ್ರ್ಯಗಳನ್ನು ಯಾರೋ ಅಪಹರಿಸಿದರು ಎಂಬ ಭಾವನೆ ನೆಲೆಸಿತು. ಹಾಗಾಗಿಯೇ 1977ರ ಮಹಾಚುನಾವಣೆಯಲ್ಲಿ ಅವರು ಪ್ರಜಾಪ್ರಭುತ್ವದ ಉಳಿವಿಗಾಗಿಯೇ ಮತ ಹಾಕಿದರು. ದೇಶದ ಇತಿಹಾಸದಲ್ಲಿ ಅದೊಂದು ಮಹತ್ವದ ಚುನಾವಣೆ” ಎಂದು ಮೋದಿ ಅಭಿಪ್ರಾಯಿಸಿದರು.

ಜನಾಂದೋಲನಕ್ಕೆ ಕರೆ
ದೇಶದ ಹಲವಾರು ಕಡೆ ಇತ್ತೀಚಿನ ವರ್ಷಗಳಲ್ಲಿ ಕಾಣಿಸಿಕೊಂಡಿರುವ ಜಲಕ್ಷಾಮ ಕಳವಳಕಾರಿ. ಸ್ವಚ್ಛ ಭಾರತದ ಪರಿಕಲ್ಪನೆ ಹೇಗೆ ಜನಾಂದೋಲನವಾಯಿತೋ ಅದೇ ಮಾದರಿಯಲ್ಲಿ ಜಲಸಂರಕ್ಷಣೆಗಾಗಿಯೂ ನಾವು ಸಾಮೂಹಿಕ ಅಭಿಯಾನ ಕೈಗೊಳ್ಳಬೇಕು. ಪ್ರತಿಯೊಂದು ಹನಿ ನೀರನ್ನು ಉಳಿಸಲು ಜಲ ಸಾಕ್ಷರತೆ ಕೈಗೊಳ್ಳಬೇಕು. ಇದಕ್ಕಾಗಿ ಸಮಾಜದ ಎಲ್ಲಾ ಸ್ತರಗಳ ನಾಗರಿಕರೂ ಕೈ ಜೋಡಿಸಬೇಕು. ನಮ್ಮ ದೇಶದಲ್ಲಿ ಸಾಂಪ್ರದಾಯಿಕವಾಗಿ ಅನುಸರಿಸುತ್ತಿರುವ ಜಲಸಂರಕ್ಷಣೆ ವಿಧಾನಗಳು ಹಲವು ಇವೆ. ಅವುಗಳನ್ನು ಇತರರಿಗೂ ತಿಳಿಸುವ ಕೆಲಸ ಮಾಡಬೇಕು. ಸಮಾಜದ ಗಣ್ಯರು ಜಲಸಂರಕ್ಷಣೆಗಾಗಿ ಇರುವ ವಿನೂತನ ಮಾದರಿಗಳ ಬಗ್ಗೆ ಜನಜಾಗೃತಿ ನಡೆಸಬೇಕು. ನೀರಿನ ಸಂರಕ್ಷಣೆಗಾಗಿ ಶ್ರಮಿಸುತ್ತಿರುವ ವ್ಯಕ್ತಿಗಳು, ಸಾಮಾಜಿಕ ಕಾರ್ಯಕರ್ತರು ಅಥವಾ ಸರ್ಕಾರೇತರ ಸಂಘ-ಸಂಸ್ಥೆಗಳ ಬಗ್ಗೆ ನಿಮಗೆ ತಿಳಿದಿದ್ದರೆ ಅಂಥವರ ಬಗ್ಗೆ ಸಮಾಜದಲ್ಲಿ ಮಾಹಿತಿಗಳನ್ನು ಹಂಚಿಕೊಳ್ಳಿ. ನೀರನ್ನು ಸಂರಕ್ಷಿಸಲು ನಮ್ಮ ದೇಶದ ಒಂದೊಂದು ಪ್ರಾಂತ್ಯದಲ್ಲಿ ಒಂದೊಂದು ರೀತಿಯ ವಿಧಾನವನ್ನು ಅನುಸರಿಸಲಾಗುತ್ತದೆ. ಅಂಥ ಯಾವುದಾದರೂ ಒಂದು ಮಾದರಿಯನ್ನು ಅಳವಡಿಸಿಕೊಂಡರೆ ಸಾಕು. ಆ ಎಲ್ಲಾ ಮಾದರಿಯ ಒಟ್ಟಾರೆ ಉದ್ದೇಶ ಹನಿ ಹನಿ ನೀರನ್ನು ಸಂರಕ್ಷಿಸುವುದು ಎಂದಾಗಿದ್ದರೆ ಸಾಕು.

ಕೊನೆಯ ಮನ್‌ ಕೀ ಬಾತ್‌ ಕಾರ್ಯಕ್ರಮದಲ್ಲಿ ಮತ್ತೆ ಭೇಟಿಯಾಗೋಣ ಅಂದಿದ್ದೆ. ಹಾಗೆ ನಾನು ಹೇಳಲು, ನನ್ನ ಮೇಲೆ ನನಗಿದ್ದ ನಂಬಿಕೆ ಕಾರಣವಲ್ಲ. ಸಾರ್ವಜನಿಕರು ನನ್ನ ಮೇಲಿಟ್ಟಿದ್ದ ವಿಶ್ವಾಸವೇ ಕಾರಣ.
-ನರೇಂದ್ರ ಮೋದಿ, ಪ್ರಧಾನಿ
Advertisement

Udayavani is now on Telegram. Click here to join our channel and stay updated with the latest news.

Next