ಬೆಂಗಳೂರು: ತಮ್ಮ ವೈದ್ಯರು ಬರೆದಿರುವ ಔಷಧಿಯನ್ನು ತಮ್ಮ ಮೆಡಿಕಲ್ ಸ್ಟೋರ್‌ನಲ್ಲೇ ಖರೀದಿಸಬೇಕು ಎಂದು ಡಿಸಿಪಿಗೆ ಬೆದರಿಕೆ ಹಾಕಿದ ಖಾಸಗಿ ಆಸ್ಪತ್ರೆಯ ಮೆಡಿಕಲ್ ಸ್ಟೋರ್ ಸಿಬ್ಬಂದಿ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿಸಿಪಿ ಪರವಾಗಿ ವಿವಿಐಪಿ ಭದ್ರತೆ ವಿಭಾಗದ ಆರ್‌ಎಸ್‌ಐ ಭೈರಯ್ಯ ಅವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಲಾಗಿದೆ.
ಸೆ. 6 ರಂದು ಆಸ್ಪತ್ರೆ ಒಳರೋಗಿಯಾಗಿ ವಿವಿಐಪಿ ಭದ್ರತೆ ಡಿಸಿಪಿ ಮಂಜುನಾಥ್ ದಾಖಲಾಗಿದ್ದರು. ಈ ವೇಳೆ ಅಲ್ಲಿನ ವೈದ್ಯರು ಸಲಹಾ ಚೀಟಿ (ಪ್ರಿಸ್ಕ್ರಿಪ್ಷನ್)ಯಲ್ಲಿ 3 ರೀತಿಯ ಮಾತ್ರೆಗಳನ್ನು ಬಿಡಿ ಬಿಡಿಯಾಗಿ ತೆಗೆದುಕೊಳ್ಳುವಂತೆ ಬರೆದಿದ್ದರು. ಅದನ್ನು ಆಸ್ಪತ್ರೆ ಮೆಡಿಕಲ್ ಸ್ಟೋರ್‌ನಲ್ಲಿ ಡಿಸಿಪಿ ಅವರು ಕೇಳಿದ್ದು, ಈ ವೇಳೆ ಪೂರ್ತಿ ಮಾತ್ರೆಯ ಶೀಟ್ ಕೊಳ್ಳಲು ಅಲ್ಲಿನ ಸಿಬ್ಬಂದಿ ನಾಗರಾಜ್ ತಿಳಿಸಿದ್ದ. ಆಗ ಪೂರ್ತಿ ಶೀಟ್ ಕೊಳ್ಳಲು ಡಿಸಿಪಿ ನಿರಾಕರಿಸಿದಾಗ ನಮ್ಮ ವೈದ್ಯರು ಬರೆದಿರುವ ಮಾತ್ರೆ ಬೇರೆಡೆ ಸಿಗುವುದಿಲ್ಲ. ನೀವು ಇಲ್ಲೇ ಬಂದು ಖರೀದಿಸಬೇಕಾಗುತ್ತದೆ ಎಂದು ಹೆದರಿಸಿ, ನಾನು ಕೊಟ್ಟಷ್ಟು ಮಾತ್ರೆಗಳನ್ನು ತೆಗೆದುಕೊಂಡು ಹೋಗಬೇಕೆಂದಿದ್ದಾನೆ. ಅಲ್ಲದೇ ಇದು ನಮ್ಮ ಆಸ್ಪತ್ರೆಯ ರೂಲ್ಸ್ ಎಂದು ಧಮ್ಕಿ ಹಾಕಿದ್ದ.
ವೈದ್ಯರು ಸೂಚಿಸಿದ ಸಂಖ್ಯೆಯ ಮಾತ್ರೆಗಳನ್ನು ನೀಡದೇ ಪೂರ್ತಿ ಶೀಟ್ ಮಾತ್ರೆಗಳನ್ನು ತೆಗೆದುಕೊಂಡು ಹೋಗ ಬೇಕೆಂದು ಲಾಭ ಗಳಿಸುವ ಉದ್ದೇಶ ದಿಂದ ರೋಗಿಗಳಿಗೆ ಮೋಸ ಮಾಡಿರುವ ಮೆಡಿಕಲ್ ಸಿಬ್ಬಂದಿ ನಾಗರಾಜ್ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖೀಸಲಾಗಿದ್ದು, ದೂರಿನನ್ವಯ ಮೆಡಿಕಲ್ ಸಿಬ್ಬಂದಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗಿದೆ. ಈತ ಈ ಹಿಂದೆಯೂ ಹಲವು ಪೊಲೀಸ್ ಸಿಬ್ಬಂದಿಗೆ ಪೂರ್ತಿ ಶೀಟ್‌ನ ಮಾತ್ರೆಗಳನ್ನು ತೆಗೆದುಕೊಂಡು ಹೋಗಬೇಕೆಂದು ಸೂಚಿಸಿ ಮೋಸ ಮಾಡಿದ್ದಾನೆ ಎಂದು ಹೇಳಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು.