ಬೆಳಗಾವಿ: ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಭಯೋತ್ಪಾದಕ ಸಂಘಟನೆಯ ನಂಟು ಇರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಮಹಾರಾಷ್ಟ್ರದ ನಾಗಪುರ ಪೊಲೀಸರು ಇಬ್ಬರು ಕೈದಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಹಿಂಡಲಗಾ ಕಾರಾಗೃಹಕ್ಕೆ ಶನಿವಾರ ಭೇಟಿ ನೀಡಿದ ನಾಗಪುರ ಪೊಲೀಸರು ಪುತ್ತೂರು ಮೂಲದ ಜಯೇಶ್ ಪೂಜಾರಿ ಹಾಗೂ ಈತನ ಪಕ್ಕದ ಸೆಲ್‌ನಲ್ಲಿದ್ದ ಲಷ್ಕರ್-ಎ- ತಯ್ಯಬಾ ಮತ್ತು ಪಿಎಫ್‌ಐ ಜತೆ ನಂಟು ಹೊಂದಿದ್ದಾನೆ ಎನ್ನಲಾದ ಕೈದಿ ಅಪ್ಸರ್ ಪಾಷಾನನ್ನು ವಶಕ್ಕೆ ಪಡೆದು ನಾಗಪುರಕ್ಕೆ ಕರೆದುಕೊಂಡು ಹೋಗಿದ್ದಾರೆ.
ಕೈದಿ ಜಯೇಶ್ ಪೂಜಾರಿ ಸಂಪರ್ಕದಲ್ಲಿರುವ ಅಪ್ಸರ್ ಪಾಷಾಗೆ ಭಯೋತ್ಪಾದಕ ಸಂಘಟನೆಯೊಂದಿಗೆ ನಂಟಿದೆ. 2005ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಮೇಲೆ ನಡೆದ ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ಅಪ್ಸರ್ ಪಾಷಾ ಇದ್ದ ಎನ್ನಲಾಗುತ್ತಿದ್ದು, ಜಯೇಶ್ ಪೂಜಾರಿ ಸಚಿವ ಗಡ್ಕರಿಗೆ ಕರೆ ಮಾಡಲು ಅಪ್ಸರ್ ಪಾಷಾನ ಸಹಾಯ ಪಡೆದುಕೊಂಡಿದ್ದ. ಇದೇ ಆಧಾರದ ಮೇಲೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಎನ್‌ಐಎ ತಂಡ ಸೂಕ್ತ ತನಿಖೆ ನಡೆಸುತ್ತಿದೆ. ಇದರಲ್ಲಿ ಭಯೋತ್ಪಾದಕ ಸಂಘಟನೆ ಕೈವಾಡ ಇದೆಯೇ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ.
ಜು.12ರಂದು ಮಹಾರಾಷ್ಟ್ರದ ನಾಗಪುರ ಪೊಲೀಸರು ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಇದರ ಬೆನ್ನಲ್ಲೇ ಈಗ ಶನಿವಾರ ಅಪ್ಸರ್ ಪಾಷಾನನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿ ಪಡೆದಿದ್ದಾರೆ. ಜತೆಗೆ ಅಲ್ಲಿದ್ದ ಕೆಲವು ಕೈದಿಗಳೊಂದಿಗೂ ಸಮಾಲೋಚನೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ಮೂಲದ ಜಯೇಶ್ ಪೂಜಾರಿ ಜೈಲಿನಲ್ಲಿಯೇ ಇದ್ದುಕೊಂಡು ಮಹಾರಾಷ್ಟ್ರದ ನಾಗಪುರದಲ್ಲಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಕಚೇರಿಗೆ ಜ.14ರಂದು ಕರೆ ಮಾಡಿ 10 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದ. ಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಅನಂತರ ಮೇ 14ರಂದು ಎರಡನೇ ಬಾರಿ ಜಯೇಶ್ ಕಾಂತಾ ಅಲಿಯಾಸ್ ಜಯೇಶ್ ಪೂಜಾರಿ ಎಂಬಾತನ ಹೆಸರಿನಲ್ಲಿ ನಿತಿನ್ ಗಡ್ಕರಿ ಜನಸಂಪರ್ಕ ಕಚೇರಿಯ ಲ್ಯಾಂಡ್‌ಲೈನ್‌ಗೆ ಕರೆ ಮಾಡಿ 10 ಕೋಟಿ ರೂ. ಬೇಡಿಕೆ ಇಡಲಾಗಿತ್ತು.