ಬೆಂಗಳೂರು: ಅಕ್ರಮ ಕಾಮಗಾರಿ ನಡೆಸಿದ ಆರೋಪದಡಿ ಲೋಕಾಯುಕ್ತ ಮತ್ತು ಸಂಬಂಧಿಸಿದ ಸಚಿವರಿಗೆ ದೂರು ನೀಡಿದ ಪ್ರಥಮ ದರ್ಜೆ ಗುತ್ತಿಗೆದಾರನಿಗೆ ಜೀವ ಬೆದ ರಿಕೆ ಹಾಕಿಸಿದ ಆರೋಪದಡಿ ಕೆಆರ್‌ಐಡಿಎಲ್ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ 7 ಅಧಿಕಾರಿಗಳ ವಿರುದ್ಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುದ್ದಿನಪಾಳ್ಯದ ವಿಶ್ವೇಶ್ವರಯ್ಯ ಬಡಾವಣೆಯ ನಿವಾಸಿ ಪ್ರಥಮ ದರ್ಜೆ ಗುತ್ತಿಗೆದಾರ ಬಿ.ಕೆ. ಮೋಹನ್‌ಕುಮಾರ್, ಅಪರಿಚಿತ ವ್ಯಕ್ತಿಯಿಂದ ಸರ್ಕಾರಿ ಅಧಿಕಾರಿಗಳು ಜೀವ ಬೆದರಿಕೆ ಹಾಕಿಸಿದ್ದಾರೆಂದು ಆರೋಪಿಸಿ ನಗರದ 5ನೇ ಎಸಿಎಂಎಂ ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಬೇಕೆಂದು ನ್ಯಾಯಾಲಯ ಆದೇಶಿಸಿತ್ತು.
ಈ ಸಂಬಂಧ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (ಕೆಆರ್‌ಐಡಿಎಲ್)ನ ಕಾರ್ಯಪಾಲಕ ಎಂಜಿನಿಯರ್ ಪ್ರವೀಣ್ ಶ್ರೀಹರಿ, ಸಹಾಯಕ ಎಂಜಿನಿಯರ್‌ಗಳಾದ ವಿ.ಶ್ರೀಧರ್, ಲಕ್ಷ್ಮೀ ಪಾಟೀಲ್, ಗ್ರಾಮೀಣಾಭಿವೃದ್ಧಿ ಇಲಾಖೆ ನಿರ್ದೇಶಕ ಶ್ರೀನಿವಾಸ್ ಎಚ್.ಮಾರಂಗಪ್ಪ, ನಿವೃತ್ತ ಅಧಿಕಾರಿ ಕೆ.ಎಚ್.ನಾಗರಾಜ್, ಆರ್‌ಡಿಪಿಆರ್ ಜಂಟಿ ಕಾರ್ಯದರ್ಶಿ ಸಿದ್ದೇಶ್ ಪೊಟಲಕಟ್ಟಿ, ಸೂಪರಿಟೆಂಡಿಂಗ್ ಎಂಜಿನಿ ಯರ್ ಮುಕ್ಕಣ್ಣ ನಾಯಕ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿದೆ ಎಂದು ಪೊಲೀಸರು ಹೇಳಿದರು.
ಅಕ್ರಮ ಕಾಮಗಾರಿ ನಡೆಸಿದ ಆರೋಪದಡಿ ದೂರುದಾರ ಮೋಹನ್ ಕುಮಾರ್ ಕಳೆದ ವರ್ಷ ಲೋಕಾಯುಕ್ತ ಮತ್ತು ಸಂಬಂಧಿಸಿದ ಸಚಿವರಿಗೆ ಆರೋಪಿತ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದರು. ಈ ಬೆನ್ನಲ್ಲೇ 2023 ಡಿ.7ರಂದು ಸಂಜೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ಸರ್ಕಾರಿ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಮತ್ತು ಸಚವರಿಗೆ ನೀಡಿದ ದೂರು ಹಿಂಪಡೆಯುವಂತೆ ಬೆದರಿಕೆ ಹಾಕಿದ್ದಾನೆ. ಹೀಗಾಗಿ ಈ ಅಪರಿಚಿತ ವ್ಯಕ್ತಿಯ ಹಿಂದೆ ಆರೋಪಿತ ಅಧಿಕಾರಿಗಳ ಕೈವಾಡ ಇದೆ ಎಂದು ಆರೋಪಿಸಿ ಮೋಹನ್ ಕುಮಾರ್ ಕೋರ್ಟ್‌ಗೆ ಖಾಸಗಿ ದೂರು ಸಲ್ಲಿಸಿದ್ದರು. ಈ ದೂರು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್,ಆರೋಪಿತ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಸೂಚಿಸಿದೆ. ಹೀಗಾಗಿ ಎಫ್ಐಆರ್ ದಾಖಲಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.