ಪಣಜಿ: ರಷ್ಯಾ ರಾಜಧಾನಿ ಮಾಸ್ಕೋದಿಂದ ಗೋವಾಕ್ಕೆ ಹೊರಟಿದ್ದ ಚಾರ್ಟರ್ಡ್ ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂಬ ಬೆದರಿಕೆಯ ಹಿನ್ನೆಲೆಯಲ್ಲಿ ವಿಮಾನ ದಿಕ್ಕು ಬದಲಾಯಿಸಿ ಉಜ್ಬೇಕಿಸ್ತಾನನತ್ತ ಪ್ರಯಾಣ ಬೆಳೆಸಿರುವ ಘಟನೆ ಶನಿವಾರ (ಜನವರಿ 21) ನಸುಕಿನ ವೇಳೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಅಮಲೇರುವ ಮಾತ್ರೆ ಸೇವಿಸಿ ನಿದ್ರೆ ಮಾಡದೇ ಇರಬೇಕು.. ಅಪಾಯಕಾರಿ ಟಿಕ್ ಟಾಕ್ ಚಾಲೇಂಜ್ ವೈರಲ್
240 ಪ್ರಯಾಣಿಕರನ್ನೊಳಗೊಂಡ ವಿಮಾನ ನಿಗದಿಯಂತೆ ಇಂದು ಮುಂಜಾನೆ 4.15ಕ್ಕೆ ದಕ್ಷಿಣ ಗೋವಾದ ದಾಬೋಲಿಂ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.
ಬಾಂಬ್ ಬೆದರಿಕೆಯ ನಿಟ್ಟಿನಲ್ಲಿ ಅಜೌರ್ ಏರ್ ನಿರ್ವಹಿಸುತ್ತಿದ್ದ ಎಝಡ್ ವಿ 2463 ವಿಮಾನವನ್ನು ಭಾರತದ ವೈಮಾನಿಕ ಗಡಿಯನ್ನು ದಾಟುವ ಮುನ್ನವೇ ದಿಕ್ಕು ಬದಲಿಸಿ ಉಜ್ಬೇಕಿಸ್ತಾನದತ್ತ ತೆರಳಿರುವುದಾಗಿ ವರದಿ ಹೇಳಿದೆ.
Related Articles
ವಿಮಾನದೊಳಗೆ ಬಾಂಬ್ ಇಡಲಾಗಿದೆ ಎಂದು ದಾಬೋಲಿಂ ವಿಮಾನ ನಿಲ್ದಾಣದ ನಿರ್ದೇಶಕರಿಗೆ 12.30ರ ಸುಮಾರಿಗೆ ಇ-ಮೇಲ್ ಮೂಲಕ ಬೆದರಿಕೆ ಒಡ್ಡಲಾಗಿತ್ತು. ನಂತರ ಗೋವಾಕ್ಕೆ ಆಗಮಿಸುತ್ತಿದ್ದ ವಿಮಾನವನ್ನು ಸುರಕ್ಷಿತತೆಯ ದೃಷ್ಟಿಯಿಂದ ಉಜ್ಬೇಕಿಸ್ತಾನದತ್ತ ತಿರುಗಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು ಎರಡು ವಾರಗಳ ಹಿಂದಷ್ಟೇ ಮಾಸ್ಕೋದಿಂದ ಗೋವಾಕ್ಕೆ ಪ್ರಯಾಣಿಸುತ್ತಿದ್ದ ಅಜೌರ್ ಏರ್ ಚಾರ್ಟರ್ ವಿಮಾನದೊಳಗೆ ಬಾಂಬ್ ಇಡಲಾಗಿದೆ ಎಂಬ ಬೆದರಿಕೆ ನಂತರ ವಿಮಾನವನ್ನು ಗುಜರಾತ್ ನ ಜಾಮ್ ನಗರ್ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಿಸಲಾಗಿತ್ತು ಎಂದು ವರದಿ ತಿಳಿಸಿದೆ.