Advertisement

Salman Khan; ಬಾಲಿವುಡ್ ನಟನಿಗೆ ಬೆದರಿಕೆ ಹಾಕಿದ್ದ ಗೀತ ರಚನೆಕಾರ ರಾಯಚೂರಿನಲ್ಲಿ ಬಂಧನ

11:01 AM Nov 13, 2024 | Team Udayavani |

ಮುಂಬಯಿ: ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಹೆಸರಿನಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಬೆದರಿಕೆ ಸಂದೇಶಗಳನ್ನು ಕಳುಹಿಸಿ 5 ಕೋಟಿ ರೂ.ಗೆ ಬೇಡಿಕೆಯಿಟ್ಟ ಆರೋಪದ ಮೇಲೆ ಉದಯೋನ್ಮುಖ ಗೀತರಚನೆಕಾರನನ್ನು ರಾಯಚೂರಿನ ಮಾನ್ವಿಯಲ್ಲಿ ಮುಂಬೈ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

ಬಂಧಿತ ಸೊಹೇಲ್ ಪಾಷಾ ಎಂಬಾತನಾಗಿದ್ದು, ಈತ ತಾನು ಬರೆದ ಹಾಡೊಂದು ಪ್ರಸಿದ್ಧಿಯಾಗಬೇಕೆಂದು ಬಯಸಿ ಈ ತಂತ್ರ ಬಳಸಿಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

ನವೆಂಬರ್ 7 ರಂದು ಮುಂಬೈ ಟ್ರಾಫಿಕ್ ಪೊಲೀಸರ ವಾಟ್ಸಾಪ್ ಸಹಾಯವಾಣಿಗೆ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯ ಎಂದು ಸಂದೇಶಗಳನ್ನು ಕಳುಹಿಸಿದ್ದು, ಸಲ್ಮಾನ್ ಖಾನ್ 5 ಕೋಟಿ ರೂ. ಪಾವತಿಸದಿದ್ದರೆ ಅವರನ್ನು ಹತ್ಯೆ ಗೈಯಲಾಗುವುದು ಎಂದು ಬೆದರಿಕೆ ಹಾಕಲಾಗಿತ್ತು.ಮಾತ್ರವಲ್ಲದೆ “ಮೈ ಸಿಕಂದರ್ ಹೂ” ಹಾಡಿನ ಬರಹಗಾರನನ್ನು ಸಹ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಲಾಗಿತ್ತು.

ಅಮಾಯಕನ ಫೋನ್ ಬಳಕೆ
ಮುಂಬೈ ಪೊಲೀಸರ ಅಪರಾಧ ವಿಭಾಗವು ರಾಯಚೂರಿನಿಂದ ಸಂದೇಶಗಳು ಬಂದ ಮೊಬೈಲ್ ಸಂಖ್ಯೆಯನ್ನು ಪತ್ತೆಹಚ್ಚಿ ಕಾರ್ಯಾಚರಣೆ ನಡೆಸಿದ್ದಾರೆ. ತಂಡ ರಾಯಚೂರಿಗೆ ಬಂದು ನಂಬರ್ ಹೊಂದಿರುವ ವೆಂಕಟೇಶ್ ನಾರಾಯಣ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ ನಾರಾಯಣ್ ಅವರ ಮೊಬೈಲ್ ಫೋನ್‌ಗೆ ಇಂಟರ್ನೆಟ್ ಸೌಲಭ್ಯ ಇರಲಿಲ್ಲ.ಫೋನ್‌ಗೆ ವಾಟ್ಸಾಪ್ ಇನ್‌ಸ್ಟಾಲೇಶನ್ ಒಟಿಪಿ ಬಂದಿರುವುದನ್ನು ಪೊಲೀಸರು ಪತ್ತೆ ಮಾಡಿದರು. ನವೆಂಬರ್ 3 ರಂದು ಮಾರುಕಟ್ಟೆಯೊಂದರಲ್ಲಿ ಅಪರಿಚಿತರು ತಮ್ಮ ಬಳಿಗೆ ಬಂದು ಕರೆ ಮಾಡಲು  ಫೋನ್ ನೀಡಬಹುದೇ ಎಂದು ಕೇಳಿದ್ದರು ಎಂದು ನಾರಾಯಣ್ ಪೊಲೀಸರಿಗೆ ತಿಳಿಸಿದ್ದಾರೆ. ಒಟಿಪಿ ಪಡೆಯಲು ನಾರಾಯಣ್ ಅವರ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ವ್ಯಕ್ತಿ ತನ್ನ ಸ್ವಂತ ಮೊಬೈಲ್‌ನಲ್ಲಿ ವಾಟ್ಸಾಪ್ ಬಳಸಿಕೊಂಡಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ನಂತರ ಕಾರ್ಯಾಚರಣೆ ಮುಂದುವರಿಸಿ ಮಾನ್ವಿಯಲ್ಲಿ ಅಪರಾಧ ವಿಭಾಗದ ತಂಡ ಸೊಹೇಲ್ ಪಾಷಾನನ್ನು ಬಂಧಿಸಿ ಮುಂಬಯಿಯ ವರ್ಲಿ ಪೊಲೀಸರಿಗೆ ಒಪ್ಪಿಸಿದ್ದಾರೆ.

Advertisement

ಸಲ್ಮಾನ್ ಖಾನ್‌ ಗೆ ಬೆದರಿಕೆ ಹಾಕಿ ಕರ್ನಾಟಕದಲ್ಲಿ ಬಂಧನಕ್ಕೆ ಒಳಗಾದ ಎರಡನೇ ಆರೋಪಿ ಈತನಾಗಿದ್ದು , ಈ ಹಿಂದೆ ಪ್ರತ್ಯೇಕವಾಗಿ ಬೆದರಿಕೆ ಹಾಕಿದ್ದ ರಾಜಸ್ಥಾನ ಮೂಲದ ಭಿಕಾರಾಂ ಜಲಾರಾಂ ಎಂಬಾತನ ಹಾವೇರಿಯಲ್ಲಿ ಮುಂಬೈ ಪೊಲೀಸರು ಬಂಧನ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next