ಹಾಂಕಾಂಗ್: ಬಹ್ರೈನ್ ಬ್ಯಾಕ್‌ನಲ್ಲಿ ನಿರ್ಮಾಣ ಕೆಲಸಗಾರನಾಗಿದ್ದ ಸೈಫುಲ್ ಇಸ್ಲಾಂ ಕಳೆದ ನಾಲ್ಕು ವರ್ಷಗಳಿಗಿಂತ ಹೆಚ್ಚು ಸಮಯದಿಂದ ತನ್ನ ಸಂಪಾದನೆಯ ಅರ್ಧಾಂಶವನ್ನು ಬಾಂಗ್ಲಾದೇಶದಲ್ಲಿನ ತನ್ನ ವೃದ್ಧ ತಂದೆ-ತಾಯಿಯರಿಗೆ ಕಳುಹಿಸುತ್ತಿದ್ದ. ಕೋವಿಡ್-19ರ ಅಟ್ಟಹಾಸದಿಂದಾಗಿ ಈ ವಾರದ ಆದಿಯಲ್ಲಿ 25ರ ಹರೆಯದ ಇಸ್ಲಾಂ ತನ್ನ ಕೆಲಸ ಕಳಕೊಂಡಾಗ ಹೆತ್ತವರಿಗೆ ಕಳುಹಿಸುತ್ತಿದ್ದ ಹಣವೂ ಹಠಾತ್ ನಿಂತುಹೋಯಿತು.
“ಈಗ ನಾನು ಮನೆಗೆ ಹಣ ಕಳುಹಿಸಲಾಗುತ್ತಿಲ್ಲ. ನನ್ನ ಕುಟುಂಬ ಸಂಕಷ್ಟದಲ್ಲಿದೆ ಮತ್ತು ಆಹಾರ ಖರೀದಿಸಲು ಹಾಗೂ ವೈದ್ಯಕೀಯ ಚಿಕಿತ್ಸೆಗೆ ನನ್ನ ವೃದ್ಧ ಹೆತ್ತವರಲ್ಲಿ ಹಣವಿಲ್ಲ’ ಎಂದು ಆತ ಸಿಎನ್‌ಎನ್‌ನೊಂದಿಗೆ ಹೇಳಿದ.
ಇದು ಇಸ್ಲಾಂ ಒಬ್ಬನ ಕತೆಯಲ್ಲ. ಕೋವಿಡ್‌ನಿಂದಾಗಿ ಜಗತ್ತಿನಾದ್ಯಂತ ಅರ್ಥವ್ಯವಸ್ಥೆಗಳು ಕುಸಿದಿವೆ ಮತ್ತು ಲಾಕ್‌ಡೌನ್‌ನಿಂದಾಗಿ ನಿರ್ಮಾಣದಂಥ ಅನೇಕ ಉದ್ದಿಮೆಗಳು ಮುಚ್ಚಿವೆ. ಇದರಿಂದಾಗಿ ವಲಸೆ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ ಮತ್ತು ಹಣಕ್ಕಾಗಿ ಅವರನ್ನು ಅವಲಂಬಿಸಿದ್ದ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ.
ಕೋವಿಡ್‌ನಿಂದಾಗಿ 2020ರಲ್ಲಿ ಜಾಗತಿಕ ಹಣ ರವಾನೆ (ಮನಿಯಾರ್ಡರ್ ಎಕಾನಮಿ) ಶೇ. 20ರಷ್ಟು ಕುಸಿಯಲಿದೆ ಮತ್ತು ಜಗತ್ತಿನ ಕಡುಬಡವರಿಗೆ ಮಹತ್ವದ ಆದಾಯ ಮೂಲದಲ್ಲಿ 10,000 ಕೋಟಿ ಡಾಲರ್‌ಗಳ ಕಡಿತವಾಗಲಿದೆ. 2009ರಲ್ಲಿ ಜಾಗತಿಕ ಆರ್ಥಿಕ ಕುಸಿತ ಸಂಭವಿಸಿದ ವೇಳೆ ಜಾಗತಿಕ ರವಾನೆಯಲ್ಲಾಗಿದ್ದ ಕುಸಿತ ಕೇವಲ ಶೇ. 5ರಷ್ಟಿತ್ತು ಎಂದು ವಿಶ್ವ ಬ್ಯಾಂಕ್ ಹೇಳಿದೆ.
ಈ ಬಾರಿ ರವಾನೆಯಲ್ಲಿ ನಾವು ನಿರೀಕ್ಷಿಸಿರುವ ಇಳಿಕೆ ಇತಿಹಾಸದಲ್ಲಿ ಅಭೂತಪೂರ್ವವಾದುದು ಎಂದು ವಲಸೆ ಕುರಿತ ಅರ್ಥಶಾಸ್ತ್ರಜ್ಞ ದಿಲೀಪ್ ರಥ್ ಹೇಳುತ್ತಾರೆ. ಸುಮಾರು 80 ಕೋಟಿ ಜನರು, ಅಂದರೆ ಭೂಮಿಯಲ್ಲಿರುವ ಪ್ರತಿ 9ರಲ್ಲಿ ಒಬ್ಬ ವ್ಯಕ್ತಿ ಜೀವನೋಪಾಯಕ್ಕೆ ಹಣ ರವಾನೆಯನ್ನು ಅವಲಂಬಿಸಿದ್ದಾನೆಂದು ವಿಶ್ವ ಸಂಸ್ಥೆ ಹೇಳುತ್ತದೆ.
ರವಾನೆಯಲ್ಲಿನ ಕುಸಿತ ಅಭಿವೃದ್ಧಿಶೀಲ ರಾಷ್ಟ್ರಗಳ ಬೆಳವಣಿಗೆ ಮೇಲೆ ಕೂಡ ನಾಟಕೀಯ ಪರಿಣಾಮ ಬೀರಲಿದೆ. ಹೈಟಿ, ದಕ್ಷಿಣ ಸುಡಾನ್ ಮತ್ತು ಟೊಂಗಾದಂಥ ಚಿಕಣಿ ಅರ್ಥವ್ಯವಸ್ಥೆಗಳ ಜಿಡಿಪಿಯ ಮೂರನೆ ಒಂದು ಭಾಗಕ್ಕಿಂತ ಹೆಚ್ಚು ಮೊತ್ತ ರವಾನೆಯಿಂದ ಬರುತ್ತದೆ. ವಲಸಿಗರು ಕಳುಹಿಸುವ ಹಣ ಇಂಥ ರಾಷ್ಟ್ರಗಳಿಗೆ ಪ್ರಮುಖ ಆರ್ಥಿಕ ಜೀವನಾಡಿಯಾಗಿದೆ. ಬಡ ಹಾಗೂ ಸಣ್ಣ ರಾಷ್ಟ್ರಗಳು ಈ ಬಿಕ್ಕಟ್ಟಿನಿಂದ ಕುಸಿಯುವ ಅಪಾಯ ಹೆಚ್ಚು ಎಂದು ರಥ್ ಹೇಳುತ್ತಾರೆ. ವಿಶ್ವಾದ್ಯಂತ ಸುಮಾರು 27 ಕೋಟಿ ವಲಸಿಗರಿದ್ದಾರೆ.