ಬೆಳಗಾವಿ: ಸರ್ಕಾರದ ಆದೇಶದಂತೆ ಹಿಡಕಲ್ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುವ ಪ್ರಕ್ರಿಯೆ ಮುಂದುವರಿದಿದ್ದು, ಮಂಗಳವಾರ ಧೂಪದಾಳ ವೇರ್‌ದಲ್ಲಿ ಸಂಗ್ರಹವಾಗಿದ್ದ ನೀರಿನಲ್ಲಿ ಒಂದು ಸಾವಿರ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಹರಿ ಬಿಡಲಾಯಿತು.
ಸೋಮವಾರ ಬೆಳಗ್ಗೆ ಹಿಡಕಲ್ ಜಲಾಶಯದಿಂದ ಬಿಡುಗಡೆಯಾಗಿದ್ದ ಮೂರು ಸಾವಿರ ಕ್ಯೂಸೆಕ್ ನೀರು ಮಧ್ಯಾಹ್ನದ ಹೊತ್ತಿಗೆ ಧೂಪದಾಳ ವೇರ್ ತಲುಪಿತ್ತು. ಧೂಪದಾಳ ವೇರ್‌ನಿಂದ ಬಿಡುಗಡೆಯಾದ ನೀರು ಘಟಪ್ರಭಾ ಎಡದಂಡೆ ಕಾಲುವೆ ಮೂಲಕ 50 ಕಿಮೀ ದೂರ ಕ್ರಮಿಸಿ ಬುಧವಾರ ಬೆಳಗ್ಗೆಯೊಳಗೆ ಮುಗಳಖೋಡ ಚೌಕಿ ತಲುಪಲಿದೆ. ಅಲ್ಲಿಂದ ನೇರವಾಗಿ ಅಥಣಿ ತಾಲೂಕಿನ ಶೇಗುಣಸಿವರೆಗೆ ಹರಿಯಲಿದೆ ಎಂದು ನೀರಾವರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಎಡದಂಡೆ ಕಾಲುವೆಯಲ್ಲಿ ಹರಿಯುವ ನೀರನ್ನು ರೈತರು ಪಂಪ್‌ಗ್ಳ ಮೂಲಕ ಹೊಲಗಳಿಗೆ ಹಾಯಿಸಿಕೊಳ್ಳುವುದನ್ನು ತಡೆಯಲು ಹೆಸ್ಕಾಂ ಹಾಗೂ ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮ ಕೈಕೊಂಡಿವೆ. ತೀವ್ರ ನೀರಿನ ಬವಣೆ ಎದುರಿಸುತ್ತಿರುವ ಗೋಕಾಕ, ಹುಕ್ಕೇರಿ, ರಾಯಬಾಗ ತಾಲೂಕುಗಳ ರೈತರ ತೀವ್ರ ವಿರೋಧದ ನಡುವೆಯೂ ಹಿಡಕಲ್ನಿಂದ ನೀರು ಬಿಡುಗಡೆ ಮಾಡಲಾಗುತ್ತಿದೆ. ಬುಧವಾರ ಮತ್ತೆ ಒಂದು ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಆಗಲಿದೆ ಎಂದು ತಿಳಿಸಿದ್ದಾರೆ.
ಘಟಪ್ರಭಾ ವರದಿ:
ಮಂಗಳವಾರ ಬೆಳಗ್ಗೆ 9.15ರ ಸುಮಾರಿಗೆ ಧೂಪದಾಳ ಜಲಾಶಯದಿಂದ ಒಂದು ಸಾವಿರ ಕ್ಯೂಸೆಕ್ ನೀರನ್ನು ಘಟಪ್ರಭಾ ಎಡದಂಡೆ ಕಾಲುವೆ ಮೂಲಕ ಕೃಷ್ಣಾ ನದಿಗೆ ಹರಿಬಿಡಲಾಯಿತು. ಇದಕ್ಕೂ ಮುನ್ನಾ ದಿನ ಸೋಮವಾರದಂದು ಹಿಡಕಲ್ ಜಲಾಶಯದಿಂದ ಮೂರು ಸಾವಿರ ಮತ್ತು ಮಂಗಳವಾರ ಒಂದು ಸಾವಿರ ಕ್ಯೂಸೆಕ್ ನೀರು ಬಿಡಲಾಗಿದ್ದು, ಹರಿದು ಬಂದ ನೀರನ್ನು ಧುಪದಾಳ ಜಲಾಶಯದಲ್ಲಿ ಶೇಖರಿಸಲಾಗುತ್ತಿದೆ. ಇಲ್ಲಿಯವರೆಗೆ ಜಲಾಶಯದಲ್ಲಿ 300 ಎಂಸಿಎಫ್‌ಟಿ ನೀರು ಸಂಗ್ರಹವಾಗಿದೆಯೆಂದು ಕರ್ನಾಟಕ ನೀರಾವರಿ ನಿಗಮದ ಕಾರ್ಯನಿರ್ವಾಹಕ ಅಭಿಯಂತ ಯಶವಂತಕುಮಾರ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. ಪ್ರತಿ ದಿನ ಒಂದು ಸಾವಿರ ಕ್ಯೂಸೆಕ್ ನೀರನ್ನು ಘಟಪ್ರಭಾ ಎಡದಂಡೆ ಕಾಲುವೆಗೆ ಕುಡಿಯುವ ನೀರಿಗಾಗಿ ಬಿಡುಗಡೆ ಮಾಡಲಾಗುತ್ತದೆಂದು ತಿಳಿಸಿದರು. ಕಾಲುವೆ ಮೂಲಕ ಇಂದು ಸುಮಾರು 24 ಕಿಮೀನಷ್ಟು ದೂರದವರೆಗೆ ನೀರು ಹರಿದು ಹೋಗಿದೆ ಎಂದು ತಿಳಿಸಿದರು. ಕಾಲುವೆ ಮೂಲಕ ಕೃಷ್ಣಾ ನದಿ ಸೇರಲು ನೀರು 94 ಕಿಮೀ ಕ್ರಮಿಸಬೇಕು.ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಗೋಕಾಕ ಮತ್ತು ಕೆಳ ಭಾಗದ ಊರುಗಳಿಗೆ ಕುಡಿಯಲು ನೀರಿನ ಅಭಾವ ಹೆಚ್ಚಾಗಿದ್ದ ಕಾರಣ 24 ರಿಂದ ಧೂಪದಾಳ ಜಲಾಶಯದಿಂದ ಘಟಪ್ರಭಾ ನದಿಗೆ ನೀರು ಬಿಡಲಾಗುವುದೆಂದು ಹೇಳಿದರು.