Advertisement

ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗಿ;  ಅಶೋಕ್‌ ಕುಮಾರ್‌ ರೈ ಮತಯಾಚನೆ

03:41 PM May 09, 2023 | Team Udayavani |

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಅಶೋಕ್‌ ಕುಮಾರ್‌ ರೈ ಕೋಡಿಂಬಾಡಿ ಅವರು ಸೋಮವಾರ ಸಹಸ್ರಾರು ಸಂಖ್ಯೆಯ ಕಾರ್ಯಕರ್ತರ ಜತೆಗೂಡಿ ಬೃಹತ್‌ ಮೆರವಣಿಗೆಯ ಮೂಲಕ ಪುತ್ತೂರು ನಗರದಲ್ಲಿ ಮತಯಾಚನೆ ಮಾಡಿದರು.

Advertisement

ಬೊಳುವಾರಿನಿಂದ ದರ್ಬೆ ತನಕ ಅದ್ದೂರಿ ಮೆರವಣಿಗೆ ಸಾಗಿತು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಸಾವಿರಾರು ಕಾರ್ಯಕರ್ತರು ಸ್ವಾಗತ ಕೋರಿದರು. ಸಾವಿರಾರು ಕಾರ್ಯಕರ್ತರು ಪಕ್ಷದ ಧ್ವಜ ಹಿಡಿದು ಜಯಘೋಷ ಮೊಳಗಿಸುತ್ತಾ ಹೆಜ್ಜೆ ಹಾಕಿದರು. ವಿವಿಧ ಕಲಾ ಪ್ರಕಾರ ತಂಡಗಳು, ಚೆಂಡೆ ಬಳಗ, ನಾಸಿಕ್‌ ಬ್ಯಾಂಡ್‌ನ‌ ಸದ್ದು ಮೊಳಗಿತು. ಮೆರವಣಿಗೆಯಲ್ಲಿ ಕಾಂಗ್ರೆಸ್‌ ಸರಕಾರದ ಸಾಧನೆಗಳ ಕುರಿತು ಘೋಷಣೆ ಕೂಗಲಾಯಿತು. ಅಶೋಕ್‌ ಕುಮಾರ್‌ ರೈ ಅವರು ಟ್ರಸ್ಟ್‌ ಮೂಲಕ ಬಡವರ ಪರ ಮಾಡಿದ ಸೇವಾ ಕಾರ್ಯಗಳ ಬಗ್ಗೆ ಕಾರ್ಯಕರ್ತರು ಗುಣಗಾನ ಮಾಡಿದರು. ಇದೇ ಸಂದರ್ಭದಲ್ಲಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.

ಕೆಪಿಸಿಸಿ ವಕ್ತಾರ ನಿಕೇತ್‌ರಾಜ್‌ ಮೌರ್ಯ ಮಾತನಾಡಿ, ಅಶೋಕ್‌ ರೈ ಅವರಂತಹ ಜನಪರ ಕಾಳಜಿಯುಳ್ಳ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಪುತ್ತೂರ‌ನ್ನು ನವ ಪುತ್ತೂರಾಗಿ ಪರಿವರ್ತಿಸಲು ಸಾಧ್ಯವಿದೆ. ಈಗಾಗಲೇ ಅಭೂತಪೂರ್ವ ಸಂಖ್ಯೆಯಲ್ಲಿ ಮತದಾರರು ಕಾಂಗ್ರೆಸ್‌ ಅನ್ನು ಬೆಂಬಲಿಸಿದ್ದು ತನ್ಮೂಲಕ ಪುತ್ತೂರಿನಲ್ಲಿ ಕಾಂಗ್ರೆಸ್‌ ಗೆಲುವು ನಿಶ್ಚಿತ ಎಂದರು.

ಕರ್ನಾಟಕದಲ್ಲಿ ಬಿಜೆಪಿ ನೇತೃತ್ವದ 40 ಶೇ.ಕಮಿಷನ್‌ ಸರಕಾರ ತೊಲಗಬೇಕು. ರಾಜ್ಯದಲ್ಲಿ ಶಾಂತಿ, ಸೌಹಾರ್ದತೆ, ಸಾಮರಸ್ಯದ ವಾತಾವರಣ ನೆಲೆಸಲು ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸಬೇಕು. ಕಾಂಗ್ರೆಸ್‌ ಪಕ್ಷಕ್ಕೆ ಅಭಿವೃದ್ಧಿ ಒಂದೇ ಮಂತ್ರ. ಅದಕ್ಕೆ ಪೂರಕವಾಗಿ ಪಕ್ಷವು ಈಗಾಗಲೇ ಬಡವರಿಗೆ ಪೂರಕವಾದ ಪ್ರಣಾಳಿಕೆಯನ್ನು ರಚಿಸಿದ್ದು ಇದಕ್ಕೆ ಅಪಾರ ಬೆಂಬಲ ದೊರೆತಿದೆ. ರಾಜ್ಯದಲ್ಲಿ 140 ಸ್ಥಾನವನ್ನು ಪಡೆದು ಕಾಂಗ್ರೆಸ್‌ ಪಕ್ಷವು ಅಧಿಕಾರ ಪಡೆಯಲಿದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ, ಕೆಪಿಸಿಸಿ ಸದಸ್ಯ ಕಾವು ಹೇಮನಾಥ ಶೆಟ್ಟಿ, ಪುತ್ತೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ಉಪ್ಪಿನಂಗಡಿ-ವಿಟ್ಲ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಡಾ|ಕೆ.ವಿ.ರಾಜರಾಮ್‌, ನಗರ ಕಾಂಗ್ರೆಸ್‌ ಅಧ್ಯಕ್ಷ ಮಹಮ್ಮದ್‌ ಆಲಿ, ಪುತ್ತೂರು, ವಿಟ್ಲ ಬ್ಲಾಕ್‌ ಸಮಿತಿಯ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.

Advertisement

ನಿಮ್ಮ ಮನೆ ಮಗನಾಗಿ ಕೆಲಸ ಮಾಡುವೆ : ಅಶೋಕ್‌
ಅಭ್ಯರ್ಥಿ ಅಶೋಕ್‌ ಕುಮಾರ್‌ ರೈ ಮಾತನಾಡಿ, ಕ್ಷೇತ್ರದ ಯಾವುದೇ ವ್ಯಕ್ತಿಗೂ ನೋವಾಗದ ರೀತಿಯಲ್ಲಿ ಕೆಲಸ ಮಾಡುತ್ತೇನೆ. ಕ್ಷೇತ್ರದ ಪ್ರತಿ ಮನೆಯ ಮಗನಾಗಿ ಕಷ್ಟ ಸುಖಗಳಿಗೆ ಸ್ಪಂದಿಸುತ್ತೇನೆ.

ರಾಜಕೀಯ ಕ್ಷೇತ್ರಕ್ಕೆ ಕಾಲಿಡುವ ಮೊದಲೇ ಟ್ರಸ್ಟ್‌ ಮೂಲಕ ಜನಸೇವೆ ಮಾಡುತಿದ್ದು ಹೀಗಾಗಿ ಬಡವರ ಕಷ್ಟ ಕಾರ್ಪಣ್ಯಗಳನ್ನು ಅರಿತುಕೊಂಡೇ ರಾಜಕೀಯ ಕ್ಷೇತ್ರಕ್ಕೆ ಬಂದಿದ್ದೇನೆ. ಬಡವರಿಗೆ ಸರಕಾರದ ಮೂಲಕ ಸಿಗುವ ಸವಲತ್ತುಗಳನ್ನು ಪಡೆಯಲು ಸಾಧ್ಯವಾಗದ ಸ್ಥಿತಿ ಇನ್ನೂ ಇದೆ. ಹೀಗಾಗಿ ನೊಂದ ಸಮುದಾಯದ ಧ್ವನಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುತಿದ್ದು ನನ್ನನ್ನು ಗೆಲ್ಲಿಸುವ ಮೂಲಕ ಬಡವರ ಸೇವೆಗೆ ಅವಕಾಶ ಮಾಡಿಕೊಡಬೇಕು. ಮತಯಾಚನೆಯ ವೇಳೆ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಳ್ಳುವ ಮೂಲಕ ಬೆಂಬಲ ನೀಡಿದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

 

 

 

 

Advertisement

Udayavani is now on Telegram. Click here to join our channel and stay updated with the latest news.

Next