Advertisement

ಸಾವಿರಾರು ಕಾರ್ಯಕರ್ತರ ಜಮಾವಣೆ; ಪೊಲೀಸರ ಸರ್ಪಗಾವಲು !

08:35 AM Sep 08, 2017 | Harsha Rao |

ಮಹಾನಗರ: ಸದಾ ಜನ-ಜಂಗುಳಿಯಿಂದ ಗಿಜಿಗುಡು ತ್ತಿದ್ದ ನಗರದ ಜ್ಯೋತಿ ವೃತ್ತ ಗುರುವಾರ ಬಿಜೆಪಿ ಯುವ ಮೋರ್ಚಾದವರ ಮಂಗಳೂರು ಚಲೋ ರ್ಯಾಲಿ ಪರಿಣಾಮ ಅಕ್ಷರಶಃ ರಾಜಕೀಯ ವೇದಿಕೆಯಾಗಿ ಮಾರ್ಪಟ್ಟಿತು.
ಜ್ಯೋತಿ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ಬಲ್ಮಠ ರಸ್ತೆಯು ಸಾಮಾನ್ಯವಾಗಿ ಕಚೇರಿ ವೇಳೆ ಅಂದರೆ ಬೆಳಗ್ಗೆ 8 ರಿಂದಲೇ ವಾಹನ ಹಾಗೂ ಜನದಟ್ಟನೆಯಿಂದ ಕೂಡಿರುತ್ತದೆ. ಹೀಗಿರುವಾಗ, ಇಲ್ಲಿಗೆ ಬೇರೆ ಕಡೆಗಳಿಂದ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಬಿಜೆಪಿಯ ಮಂಗಳೂರು ಚಲೋ ಹಿನ್ನಲೆಯಲ್ಲಿ ಪೊಲೀಸರು ಸಂಪೂರ್ಣ ಬಂದ್‌ ಮಾಡಿದ್ದರು. 

Advertisement

ಜ್ಯೋತಿ ವೃತ್ತದಲ್ಲಿ ಬೆಳಗ್ಗೆ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಪ್ರತಿಭಟನಾ ಸಭೆಯನ್ನೂ ನಡೆಸುತ್ತಾರೆ ಎನ್ನುವ ಬಗ್ಗೆ ಯಾರಿಗೂ ಸೂಚನೆ ಇರಲಿಲ್ಲ. ಸಾರ್ವಜನಿಕರು ತಮ್ಮ ದೈನಂದಿನ ಕೆಲಸ ಕಾರ್ಯ ಹಾಗೂ ಕಚೇರಿಗಳಿಗೆ ಹೋಗುವವರು ಇಲ್ಲಿಗೆ ಬಂದು ಪರದಾಡಿದರು. 

ಏಕೆಂದರೆ, ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಂಗಡಿ- ಮುಂಗಟ್ಟು ಹಾಗೂ ಆಸ್ಪತ್ರೆ-ಕ್ಲಿನಿಕ್‌ಗಳು ಇವೆ. ಅಷ್ಟೇಅಲ್ಲ; ಪಂಪ್‌ವೆಲ್‌ ಕಡೆಯಿಂದ ಹಂಪನಕಟ್ಟೆ ಹಾಗೂ ಕೆ.ಎಸ್‌. ರಾವ್‌ ರಸ್ತೆ, ಬಂಟ್ಸ್‌ ಹಾಸ್ಟೆಲ್‌ ಅಥವಾ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಕಡೆಗೆ ಹಾದು ಹೋಗುವವರು ಜ್ಯೋತಿ ವೃತ್ತದ ಮೂಲಕವೇ ಹೋಗು ತ್ತಾರೆ. ಜ್ಯೋತಿ ವೃತ್ತ ಮಾತ್ರವಲ್ಲ; ಸುತ್ತ-ಮುತ್ತಲಿನ ಇತರೆ ಪ್ರಮುಖ ರಸ್ತೆಗಳನ್ನೂ ಬಂದ್‌ ಮಾಡಿದ್ದ ಕಾರಣ ಸಾರ್ವಜನಿಕರು ತೀವ್ರ ಸಂಕಷ್ಟಕ್ಕೀಡಾದರು. ಈ ಮಧ್ಯೆ ಇಲ್ಲಿಯ ಆಸು-ಪಾಸಿನ ಅಂಗಡಿ-ಮುಂಗಟ್ಟುಗಳು ಮುಚ್ಚಿದ್ದವು.

ಎರಡೂವರೆ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು
ಜ್ಯೋತಿ ವೃತ್ತದ ಬಳಿ ಬಿಜೆಪಿ ಪ್ರಮುಖ ನಾಯಕರ ಜತೆಗೆ ಒಂದಿಷ್ಟು ಕಾರ್ಯಕರ್ತರು ಸೇರಿ ಜಿಲ್ಲಾಧಿಕಾರಿ ಕಚೇರಿ ಅಥವಾ ನೆಹರೂ ಮೈದಾನದತ್ತ ತೆರಳಬಹುದು ಎಂದು ಪೊಲೀಸರು ಊಹಿಸಿದ್ದರು. ಅದಕ್ಕೆ ತಕ್ಕಂತೆ ಪೊಲೀಸರನ್ನೂ ನಿಯೋಜಿಸಲಾಗಿತ್ತು. ಆದರೆ, ಅಲ್ಲಿ ಬೆಳಗ್ಗೆ ಸುಮಾರು 8 ರಿಂದಲೇ ಕಾರ್ಯಕರ್ತರು ಆಗಮಿಸತೊಡಗಿದರು. ಹತ್ತು ಗಂಟೆಯಾಗುವಷ್ಟರಲ್ಲಿ ಬರೋಬರಿ ಎರಡೂವರೆ ಸಾವಿರದಷ್ಟು ಕಾರ್ಯಕರ್ತರು ಸೇರಿದ್ದರು. 

ಇನ್ನೊಂದೆಡೆ, ಬಿಜೆಪಿಯ ಮುಖಂಡರಾದ ಆರ್‌. ಅಶೋಕ್‌, ಶೋಭಾ ಕರಂದ್ಲಾಜೆ, ಅರವಿಂದ ಲಿಂಬಾವಳಿ, ಸಿ.ಟಿ. ರವಿ, ಕೆ.ಎಸ್‌. ಈಶ್ವರಪ್ಪ, ಜಗದೀಶ್‌ ಶೆಟ್ಟರ್‌ ಸೇರಿದಂತೆ ಹಲವರು ಒಬ್ಬೊಬ್ಬರಾಗಿ ಆಗಮಿಸ ತೊಡಗಿದ್ದರು. ಸುಮಾರು 11 ಗಂಟೆಯ ಹೊತ್ತಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಆಗಮಿಸುವಾಗ ಇಡೀ ವೃತ್ತಪೂರ್ತಿ ಕಾರ್ಯಕರ್ತರು ತುಂಬಿಕೊಂಡಿದ್ದರು.

Advertisement

ತೆರೆದ ವಾಹನದಲ್ಲಿ ಭಾಷಣ
ಈ ವೃತ್ತದಲ್ಲೇ ನಾಯಕರಿಗೆ ಭಾಷಣ ಮಾಡಲು ತಾತ್ಕಾಲಿಕ ವೇದಿಕೆಯಾಗಿ ತೆರೆದ ವಾಹನವೊಂದು ಸಿದ್ಧವಾಗಿತ್ತು. ನಾಯಕರೆಲ್ಲ ಈ ವಾಹನವೇರಿ ಪ್ರತಿಭಟನಾ ಭಾಷಣಕ್ಕೆ ಸಿದ್ಧರಾಗುತ್ತಿದ್ದರು. ನಾಯಕರ ಆಗಮನವಾಗುತ್ತಿದ್ದಂತೆ ಕಾರ್ಯಕರ್ತರು ಕಾಂಗ್ರೆಸ್‌ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಬಿಜೆಪಿಗೆ ಜೈಕಾರ ಹಾಕುತ್ತಿದ್ದರು. ಬೈಕ್‌ ರ್ಯಾಲಿ ನಡೆಸಲೆಂದು ಬಂದಿದ್ದವರಿಗೆ ಪೊಲೀಸರು ಈ ಅವಕಾಶ ನೀಡಿರಲಿಲ್ಲ. ಅಲ್ಲೇ ಪ್ರತಿಭಟನಾ ಸಭೆಯನ್ನು ನಡೆಸಿ, ಯಡಿಯೂರಪ್ಪನವರಿಂದ ಸಂಸದ ನಳಿನ್‌ ಕುಮಾರ್‌ ಕಟೀಲು ತನಕ ಎಲ್ಲರೂ ಮಾತನಾಡಿದರು. 

ಸಭೆ ಮುಕ್ತಾಯಗೊಂಡ ಬಳಿಕ ನಾಯಕರು, ಬೈಕ್‌ ರ್ಯಾಲಿ ಮೂಲಕ ನೆಹರು ಮೈದಾನ ಹಾಗೂ ಡಿಸಿ ಕಚೇರಿಯತ್ತ ಧಾವಿಸಲು ಮುಂದಾದರು. ಅಷ್ಟೊತ್ತಿಗೆ ಪೊಲೀಸರು, ಪ್ರಮುಖ ನಾಯಕರನ್ನು ಬಂಧಿಸಿ ಬಸ್‌ನಲ್ಲಿ ನೆಹರೂ ಮೈದಾನಕ್ಕೆ ಕರೆದೊಯ್ದರು. ಇದನ್ನು ಪ್ರತಿಭಟಿಸಿ ಕೆಲವರು ಬ್ಯಾರಿಕೇಡ್‌ ಗಳ ಮೇಲೆ ಹತ್ತಿ ಮುನ್ನುಗ್ಗಲು ಯತ್ನಿಸಿದಾಗ, ಪೊಲೀಸರು ಲಾಠಿ ಬೀಸಿ ಚದುರಿಸಿದರು. 

ಕಾರ್ಯಕರ್ತರು ನಿರೀಕ್ಷೆಗೂ ಮೀರಿ ಜಮಾಯಿಸಿದ್ದ ಕಾರಣ ಸಭೆ ಮುಗಿಯುವವರೆಗೂ ಬಿಗುವಿನ ವಾತಾವರಣವಿತ್ತು. ಆದರೆ, ಪೊಲೀಸರು ಅಲ್ಲಲ್ಲಿ ತಡೆಯದಿದ್ದರೆ ಇನ್ನಷ್ಟು ಮಂದಿ ಕಾರ್ಯಕರ್ತರ ಜಮಾವಣೆಯಾಗುತ್ತಿತ್ತು. ಜ್ಯೋತಿ ವೃತ್ತವೊಂದರಲ್ಲೇ ಸುಮಾರು ಒಂದು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋ ಜಿಸಲಾಗಿತ್ತು.

ಪೊಲೀಸ್‌ ಆಯುಕ್ತ ಟಿ.ಆರ್‌. ಸುರೇಶ್‌, ಎಸ್‌ಪಿ ಸುಧೀರ್‌ ರೆಡ್ಡಿ, ಡಿಸಿಪಿ ಹನುಮಂತರಾಯ ಸೇರಿದಂತೆ ಉನ್ನತ ಮಟ್ಟದ ಪೊಲೀಸ್‌ ಅಧಿಕಾರಿಗಳು ಕೂಡ ಬೆಳಗ್ಗಿನಿಂದಲೇ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು. ಅಹಿತಕರ ಘಟನೆಗಳು ಏನಾದರೂ ನಡೆದರೆ, ತುರ್ತು ಚಿಕಿತ್ಸೆಗೆ ಬೇಕಾದ ಸಿದ್ಧತೆ ಕೈಗೊಳ್ಳಲಾಗಿತ್ತು. ಕೆಲವರು ಸಭೆಯನ್ನು ಹತ್ತಿರದಲ್ಲಿದ್ದ ಎತ್ತರದ ಕಟ್ಟಡದ ಮೇಲೆ ನಿಂತು ವೀಕ್ಷಿಸಿದರು.

ಬಿಸಿಲಿನ ತೀವ್ರತೆ ಜಾಸ್ತಿ¤ಯಿದ್ದ ಕಾರಣ ಸಾವಿರಾರು ಕಾರ್ಯ ಕರ್ತರಿಗೆ ನೀರು ಮತ್ತು ಮಜ್ಜಿಗೆಯನ್ನು ನೀಡಲಾಗಿತ್ತು.  ಸ್ಥಳದಲ್ಲೇ ಬಿದ್ದಿದ್ದ ಕಸ, ನೀರಿನ ಬಾಟಲಿಗಳನ್ನು ಕಾರ್ಯಕರ್ತರು ಸ್ವತ್ಛ ಮಾಡುತ್ತಿದ್ದ ದೃಶ್ಯವೂ ಗಮನಸೆಳೆಯಿತು.

Advertisement

Udayavani is now on Telegram. Click here to join our channel and stay updated with the latest news.

Next