ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚಿನ ನರ್ತನ ಶನಿವಾರವೂ ಮುಂದುವರಿದಿದ್ದು, ಬೆಂಕಿಯ ಕೆನ್ನಾಲಿಗೆಗೆ ಸಾವಿರಾರು ಎಕರೆ ಅರಣ್ಯ ಪ್ರದೇಶ ಭಸ್ಮವಾಗಿದೆ. ಬೆಂಕಿ ರಾಷ್ಟ್ರೀಯ ಹೆದ್ದಾರಿಗೆ ವ್ಯಾಪಿಸಿದ ಪರಿಣಾಮ 2 ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿ 67ನ್ನು ಬಂದ್ ಮಾಡಲಾಯಿತು. ಇದರಿಂದ ಮೈಸೂರಿನಿಂದ ಊಟಿಗೆ ತೆರಳುತ್ತಿದ್ದ ನೂರಾರು ವಾಹನಗಳನ್ನು ಮೇಲುಕಾಮನಹಳ್ಳಿ ಗೇಟ್ ಬಳಿ ಮೂರು ಗಂಟೆಗಳ ಕಾಲ ತಡೆ ಹಿಡಿಯಲಾಯಿತು. ಬೆಂಕಿಯ ಕೆನ್ನಾಲಿಗೆ ರಾಷ್ಟ್ರೀಯ ಹೆದ್ದಾರಿ 67ನ್ನು ದಾಟಿ ಮುಂದೆ ಸಾಗಿದ್ದು, ಹಿಮವದ್ ಗೋಪಾಲಸ್ವಾಮಿ ದೇವಾಲಯದವರೆಗೂ ವ್ಯಾಪಿಸಿದೆ.
ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಬೆಂಕಿ ಆರಿಸುವಲ್ಲಿ ನಿರತರಾಗಿದ್ದಾರೆ. ಸುಮಾರು 200ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಸೇರಿ 50 ಸ್ವಯಂ ಸೇವಕರ ತಂಡ ಬೆಂಕಿ ಆರಿಸುವಲ್ಲಿ ನಿರತವಾಗಿದೆ. ಬೆಂಕಿ ಹಿನ್ನೆಲೆಯಲ್ಲಿ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಬಂಡೀಪುರದಲ್ಲಿ ಭಾನುವಾರ ಬೆಳಗ್ಗೆ ಮತ್ತು ಸಂಜೆಯ ಸಫಾರಿಯನ್ನು ಸಂಪೂರ್ಣವಾಗಿ ರದ್ದು ಗೊಳಿಸಲಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ. ಕೊಡಗಿನ ಸೋಮವಾರಪೇಟೆ ಸಮೀಪದ ಎಡವನಾಡು ಬಳಿಯ ಅರಣ್ಯಕ್ಕೂ ಬೆಂಕಿ ಬಿದ್ದಿದ್ದು, 2 ಗಂಟೆಗಳ ಕಾಲದ ಸತತ ಪರಿಶ್ರಮದ ಬಳಿಕ ಬೆಂಕಿ
ನಂದಿಸಲಾಯಿತು.
ಬೆಳ್ತಂಗಡಿ ತಾಲೂಕಲ್ಲೂ ಬೆಂಕಿ: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ನಡ-ಇಂದಬೆಟ್ಟು ಪ್ರದೇಶದಲ್ಲಿ ಸಾಮಾಜಿಕ ಅರಣ್ಯ ಪ್ರದೇಶದ ಗುಡ್ಡಕ್ಕೆ ಶನಿವಾರ ಬೆಂಕಿ ಬಿದ್ದು, ಮರಗಿಡಗಳು ಸುಟ್ಟು ಹೋಗಿವೆ. ಕಣಿಯೂರು ಭಾಗದಲ್ಲೂ ತೋಟ ಸೇರಿ ಗುಡ್ಡದಲ್ಲಿ ಬೆಂಕಿ ಕಾಣಿಸಿಕೊಂಡು ಅಪಾರ ನಷ್ಟ
ಉಂಟಾಗಿದೆ.