Advertisement

ಚಿಂತನೆ: ಕೊನೆಯ ಪಯಣದ ಸಿದ್ಧತೆಗೆ ಶೌರಿ ಪಾಠ!

12:28 AM Oct 28, 2020 | mahesh |

ನಾವು ಪ್ರವಾಸಕ್ಕೆ ಹೋಗುವುದಕ್ಕೆ, ಕಚೇರಿಗೆ ಹೋಗುವುದಕ್ಕೆ, ಸ್ನೇಹಿತರನ್ನು ಕಾಣಲು ಹೋಗುವುದಕ್ಕೆ ಸಾಕಷ್ಟು ಸಿದ್ಧತೆ ಮಾಡಿಕೊಳ್ಳುತ್ತೇವೆ. ಆದರೆ ಖಾಯಂ ಆಗಿ ಈ ವಿಶ್ವವನ್ನು ತೊರೆದು ಹೋಗುವುದಕ್ಕೆ ಯಾವ ಸಿದ್ಧತೆಯನ್ನೂ ಮಾಡಿಕೊಳ್ಳುವುದಿಲ್ಲ.

Advertisement

ಖ್ಯಾತ ಪತ್ರಕರ್ತ, ಲೇಖಕ, ಮಾಜಿ ಕೇಂದ್ರ ಸಚಿವ ಅರುಣ್‌ ಶೌರಿ ಅವರ ಈಚೆಗೆ ಬಿಡುಗಡೆಯಾದ “ಪ್ರಿಪೇರಿಂಗ್‌ ಫಾರ್‌ ಡೆತ್‌’- ಸಾವಿಗೆ ಸಿದ್ಧತೆ ಎಂಬ ಕೃತಿ ಕೊರೊನಾ ಕಾಲಘಟ್ಟದ ಆತಂಕದ ಸಮಯದಲ್ಲಿ ಬಹಳ ಚರ್ಚೆಗೆ ಕಾರಣವಾಗಿದೆ.  ನಾವು ಪ್ರವಾಸಕ್ಕೆ ಹೋಗುವುದಕ್ಕೆ, ಕಚೇರಿಗೆ ಹೋಗುವುದಕ್ಕೆ, ಸ್ನೇಹಿತರನ್ನು ಕಾಣಲು ಹೋಗುವುದಕ್ಕೆ ಸಾಕಷ್ಟು ಸಿದ್ಧತೆ ಮಾಡಿಕೊಳ್ಳುತ್ತೇವೆ. ಮಕ್ಕಳ ಶಿಕ್ಷಣ, ಮದುವೆಗಾಗಿ 2-3 ವರ್ಷ ತಯಾರಿ ಮಾಡಿ ಕೊಳ್ಳುತ್ತೇವೆ. ಆದರೆ ಖಾಯಂ ಆಗಿ ಈ ವಿಶ್ವವನ್ನು ತೊರೆದು ಹೋಗುವುದಕ್ಕೆ ಯಾವ ಸಿದ್ಧತೆಯನ್ನೂ ಮಾಡಿಕೊಳ್ಳುವುದಿಲ್ಲ. ಸಾವು ಶತಸಿದ್ಧವಾದರೂ ಬಹಳಷ್ಟು ಜನ ತಾವು ಚಿರಂಜೀವಿಗಳೆಂದು ಭಾವಿಸಿರುತ್ತಾರೆ. ಸಾವಿನ ಬಗ್ಗೆ ಮಾತು ಬಂದರೆ ಚರ್ಚೆ ಮುಂದುವರಿಸದೇ ಬೇರೆ ಕಡೆಗೆ ಗಮನ ಹೊರಳಿಸುತ್ತಾರೆ. ಆದರೆ ಕೊನೆಗೆ ಸಾವು ತನ್ನ ತಣ್ಣನೆಯ ಹಸ್ತ ಇಟ್ಟು ಬಿಡುತ್ತದೆ. ಸಾವು ಭೂಮಿಯ ಮೇಲಿನ ಅತ್ಯಂತ ಡೆಮೊಕ್ರೆಟಿಕ್‌ ಸೆಕ್ಯೂಲರ್‌ ಮತ್ತು ಸೋಶಿಯಲಿಸ್ಟಿಕ್‌ ಸಂಗತಿ ಎಂಬುದನ್ನು ಮರೆತು ಬಿಡುತ್ತೇವೆ.

ಈ ಲೋಕವನ್ನು ಶಾಶ್ವತವಾಗಿ ಬಿಟ್ಟು ಹೋಗುವ ಮೊದಲು ಪ್ರತಿಯೊಬ್ಬರೂ ಕನಿಷ್ಠ ಸಿದ್ಧತೆ ಮಾಡಿಟ್ಟುಕೊಳ್ಳುವುದು ಅವಶ್ಯ ಎನ್ನುವ ಸಂಗತಿಯನ್ನು ಶೌರಿ ತುಂಬ ಪರಿಣಾಮಕಾರಿ ಯಾಗಿ ಕೃತಿಯಲ್ಲಿ ದಾಖಲಿಸಿದ್ದಾರೆ. ಅವರು ಸಾವಿನ ಸಾಮೀಪ್ಯದ ಬಗ್ಗೆ ಮಾತನಾಡಿದಂತೆ ಭಯದಿಂದ ನಡಗುವ ಅನುಭವವಾಗುತ್ತದೆ.

ಬದುಕಿನ ಕ್ಷಣಿಕತೆ ಮತ್ತು ನಶ್ವರತೆಯ ಗಮ್ಯವನ್ನು ಅರಿತುಕೊಳ್ಳುವುದು ಅವಶ್ಯವಿದೆ. ಸಾವು ಹೇಗೆ ಬರುತ್ತದೆ? ಕೂದಲು-ವಯಸ್ಸಾದಂತೆ ಬೆಳ್ಳಗೆ ಯಾಕೆ ಆಗುತ್ತವೆ? ಮುಖದ ಮೇಲೆ ವೃದ್ಧಾಪ್ಯದ ಗೆರೆಗಳು ಏಕೆ ಕಾಣಿಸಿಕೊಳ್ಳುತ್ತವೆ? ಇವುಗಳನ್ನು ಪೂರ್ಣ ಗೆಲ್ಲುವುದು ಸಾಧ್ಯವಾಗಿಲ್ಲ. ಆದರೆ ಒಳ್ಳೆಯ ವಿಧಾನದಿಂದ ಕ್ರಿಯಾಶೀಲ ತೆಯಿಂದ ವೃದ್ಧಾಪ್ಯವನ್ನು, ಸಾವನ್ನು ಕೆಲಕಾಲ ಮುಂದೂಡಬಹುದು ಎಂಬ ಸಂಗತಿ ಸ್ಪಷ್ಟವಾಗಿದೆ.

ನನ್ನ ಸ್ನೇಹಿತರೊಬ್ಬರು ಹೇಳಿದ ಸಂಗತಿ ಇಲ್ಲಿ ದಾಖಲಿಸಲು ಅರ್ಹವಾಗಿದೆ. ಅವರ ತಾಯಿ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಸಾಯುವ ಕ್ಷಣ ಹತ್ತಿರ ಬಂದದ್ದು ಎಲ್ಲರಿಗೂ ಖಚಿತವಾಗಿತ್ತು. ಮಕ್ಕಳೆಲ್ಲರೂ ಆ ನಿರೀಕ್ಷೆಯ ಲ್ಲಿಯೇ ಇದ್ದರು. “ನಾನು ಸಾಯುವುದು ಇನ್ನೂ 3-4 ತಾಸು ತಡವಾಗಬಹುದು, ನೀವೆಲ್ಲ ಊಟಮಾಡಿಬಿಡಿ’ ಎಂದು ಆ ವೃದ್ಧತಾಯಿ ಸಣ್ಣ ಧ್ವನಿಯಲ್ಲಿ ಹೇಳಿದರು. ಅಮ್ಮನ ಮಾತು ಕೇಳಿ ಮಕ್ಕಳೆಲ್ಲ ಚಕಿತರಾಗಿ ಒಬ್ಬರ ಮುಖ ಒಬ್ಬರು ನೋಡಿಕೊಳ್ಳತೊಡಗಿದ್ದರು. ಮಕ್ಕಳಿಗೆ ಊಟ ಮಾಡುವುದಕ್ಕೆ ಮನಸ್ಸಾಗಲಿಲ್ಲ. ಆದರೆ ಆ ತಾಯಿಯ ಕರುಳ ಪ್ರೀತಿಯ ತೀವ್ರತೆಯನ್ನು ಈ ಸಂಗತಿ ದಾಖಲಿಸುತ್ತದೆ.

Advertisement

ತಾನು ಸಾಮ್ರಾಟ್‌, ದೊಡ್ಡ ಮನುಷ್ಯ, ಶ್ರೀಮಂತ, ಶೂರ, ಧೀರ, ಎಂಬ ಉಪಾಧಿಗಳನ್ನೆಲ್ಲ ಕಳಚಿಕೊಳ್ಳಬೇಕಾಗುತ್ತದೆ. ತಾನೂ ಒಬ್ಬ ಸಾಮಾನ್ಯ ಜೀವಿ, ಕೆಲವು ಕಾಲ ಇದ್ದು ಸುಮ್ಮನೆ ಹೊರಟು ಹೋಗುವವನು ಎಂಬುದನ್ನು ಅರಿತು ಕೊಳ್ಳಬೇ ಕಾಗುತ್ತದೆ. ಈ ತಿಳಿವಳಿಕೆ ಸಾವಿನೊಂದಿಗೆ ಸೆಣಸು ವಾಗ ಖಂಡಿತವಾಗಿಯೂ ನೆಮ್ಮದಿ ಕೊಡುತ್ತದೆ.

ಶೌರಿ ಹಾಗೂ ಅವರ ಕೆಲವು ಸಂಗಡಿಗರನ್ನು ಪಂಜಾಬ್‌ನ ಭಯೋತ್ಪಾದಕರು ಅಪಹರಿಸಿದ್ದರು. ಭಯೋತ್ಪಾದಕರು ಕೊಲ್ಲಲು ತಯಾರಿಸಿದ ಪಟ್ಟಿಯಲ್ಲಿ ಅವರ ಹೆಸರೂ ಇತ್ತು! ಆ ಕ್ಷಣ-ಕ್ಷಣದ ಚಿತ್ರವನ್ನು ಅವರು ಕಟ್ಟಿ ಕೊಟ್ಟಿದ್ದಾರೆ. ತಮ್ಮ ಪರಿಚಿತರನ್ನು ಭಯೋತ್ಪಾದಕರು ಕೊಂದಾಗ ತಮ್ಮ ಸರದಿಗಾಗಿ ಕಾಯುವ ಕಳವಳದ ಸಂಗತಿಗಳನ್ನೆಲ್ಲಾ ವಿವರವಾಗಿ ಹೇಳಿದ್ದಾರೆ.

ನೀವು ನೆಮ್ಮದಿಯಿಂದ ಸಾಯಬೇಕು ಎಂದು ಬಯಸಿದರೆ ಒಂದು ವಿಲ್‌ಬರೆಯಬೇಕು. ಅದರಲ್ಲಿ ನಮ್ಮನ್ನು ಆಸ್ಪತ್ರೆಯಲ್ಲಿ ಕೊನೆಯ ಹಂತದಲ್ಲಿ ಜೀವರಕ್ಷಕ ವ್ಯವಸ್ಥೆಯಲ್ಲಿ ಇರಿಸಬೇಕೋ ಬೇಡವೋ, ಯಾವಾಗ ಅದನ್ನು ಸ್ವಿಚ್‌ ಆಫ್ ಮಾಡಬೇಕು ಎಂಬಿತ್ಯಾದಿ ವಿವರಗಳು ಇರಬೇಕು. ನಮ್ಮ ಸಮೀಪದ ಬಂಧುಗಳು ಅತ್ಯಂತ ನೋವಿನ ಕೆಲವು ನಿರ್ಧಾರ ಕೈಗೊಳ್ಳುವ ಇಕ್ಕಟ್ಟಿಗೆ ಸಿಲುಕುವುದನ್ನು ಇದರಿಂದ ತಪ್ಪಿಸಬಹುದು. ಮುಂದೆ ಅವರು ಪಶ್ಚಾತ್ತಾಪ ಪಡುವುದೂ ತಪ್ಪಬಹುದು. ಮುಖ್ಯವಾಗಿ ಆಸ್ತಿ ಹಂಚಿಕೆ ವಿವರಗಳು ಮೃತ್ಯುಪತ್ರದಲ್ಲಿ ಇರಬೇಕು. ಸತ್ತ ಅನಂತರ ಇದ್ದವರು ಆಸ್ತಿಗಾಗಿ ಕಾದಾಡು ವುದು ಬಹಳ. ಅನೇಕ ಬಾರಿ ಹೆಣ ಇಟ್ಟುಕೊಂಡೇ ಜಗಳಕ್ಕೆ ನಿಲ್ಲುತ್ತಾರೆ. ಇದನ್ನು ತಪ್ಪಿಸುವ ಪ್ಲ್ಯಾನ್‌ ಬದುಕಿದ್ದಾಗ ಮಾಡದಿ ದ್ದರೆ ಹೇಗೆ ಎಂದು ಶೌರಿ ಪ್ರಶ್ನಿಸಿದ್ದಾರೆ.

ಅರುಣ್‌ ಶೌರಿ ಅವರು ತಾವು ಒಂದು ವಿಲ್‌ ಬರೆದಿಟ್ಟಿದ್ದಾರೆ. ಅದನ್ನು ಯಥಾವತ್ತಾಗಿ ಈ ಕೃತಿಯಲ್ಲಿ ಪ್ರಕಟ ಮಾಡಿದ್ದಾರೆ. ಅದರ ವಿವರ ಅವರ ಸರಳ ವ್ಯಕ್ತಿತ್ವಕ್ಕೆ ಹಾಗೂ ವೈಚಾರಿಕ ನಿಲುವಿಗೆ ಸಾಕ್ಷಿಯಾಗಿದೆ. ಅದರ ಸಂಕ್ಷಿಪ್ತ ವಿವರ ಹೀಗಿದೆ: “ನನ್ನ ಮಿದುಳು ನಿಷ್ಕ್ರಿಯಗೊಂಡರೆ ಅಥವಾ ನಾನು ಮೊದಲಿ ನಂತಾಗುವ ಸಾಧ್ಯತೆ ಇಲ್ಲವೆಂಬುದು ಖಚಿತವಾದರೆ ಅಥವಾ ಚೇತರಿಸಿ ಕೊಂಡರೂ ಸ್ವತಂತ್ರವಾಗಿ ಬದುಕಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾದರೆ ನನ್ನನ್ನು ಕೃತಕವಾಗಿ “ಜೀವ ರಕ್ಷಕ ವ್ಯವಸ್ಥೆ’ ಮೂಲಕ ಜೀವಂತವಾಗಿ ಇರಿಸುವುದು ಬೇಡ. ಇದೊಂದು ಪ್ರೀತಿಯಿಂದ ಕೊಡುವ ಹಿಂಸೆ. ನನ್ನ ದೇಹದಲ್ಲಿ ಬೇರೆಯವರಿಗೆ ಉಪಯೋಗಕ್ಕೆ ಬರುವಂತಹ ಯಾವುದಾದರೂ ಅಂಗವಿದ್ದರೆ ಅದನ್ನು ದಾನ ಮಾಡಬೇಕು. ನನ್ನ ದೇಹವನ್ನು ಯಾವುದೇ ಧಾರ್ಮಿಕ ಆಚರಣೆಗಳಿಲ್ಲದೇ ಸುಟ್ಟು ಹಾಕಬೇಕು. ಗಂಧದ ಕಟ್ಟಿಗೆಯ ಆಡಂಬರ ಬೇಡ. ತೋಪು ಹಾರಿಸಿ ಗೌರವಿಸುವುದು ನಾನು ಒಪ್ಪುವ ಸಂಗತಿಯಲ್ಲ. ನನ್ನ ಸಾವಿನ ಅನಂತರ ಸಂತಾಪ ಸಭೆ, ಪ್ರಾರ್ಥನಾ ಕೂಟ ನಡೆಸಬಾರದು. ನಾನು ಸುಮ್ಮನೆ ಬಂದು ಸುಮ್ಮನೆ ಈ ಲೋಕದಿಂದ ಹೊರಟು ಹೋದಂತೆ ಇದೆಲ್ಲ ಸರಳವಾಗಿ ನಡೆಯುವುದಕ್ಕೆ ಎಲ್ಲರೂ ಸಹಕರಿಸಬೇಕು.’

ಹೀಗೆ ಅರುಣ್‌ ಶೌರಿ ಸಾವಿಗೆ ಸಜ್ಜಾಗಿರುವ ಸಂಗತಿ ನಿಜಕ್ಕೂ ಮಾದರಿಯಾಗಿದೆ. ಇದನ್ನು ಓದುವುದರಿಂದ ನಾವು ನಮ್ಮ ಸುತ್ತ ಕಟ್ಟಿ ಕೊಂಡಿರುವ ಅನೇಕ ಭ್ರಮೆ, ಗೊಂದಲಗಳಿಂದ ಪಾರಾಗಬಹುದು. ಅನುದಿನವೂ ತನುವಿ ನೊಳಗಿದ್ದು, ಮನಕ್ಕೆ ಹೇಳದೇ ಹೋದೆಯೆಲ್ಲೋ ಹಂಸ – ಎಂಬ ತತ್ವಪದ ಈ ಗಳಿಗೆಯಲ್ಲಿ ಮತ್ತೆ ಮತ್ತೆ ನೆನಪಾಗುತ್ತದೆ.

ತಾವು ನಿಧನರಾದ ಮೇಲೆ, ಮಗ ಆದಿತ್ಯನ ದೇಖ ರೇಖೀ ಹೇಗೆ ಮಾಡಬೇಕು, ಆತನ ಚಿಕಿತ್ಸೆ ಹಾಗೂ ಇತರೆ ಖರ್ಚುಗಳನ್ನು ಹೇಗೆ ನಿಭಾಯಿಸಬೇಕು ಎನ್ನುವುದನ್ನೂ ಶೌರಿ ವಿಲ್‌ನಲ್ಲಿ ಬರೆದಿದ್ದಾರೆ…

ಮಲ್ಲಿಕಾರ್ಜುನ ಹೆಗ್ಗಳಗಿ ಮುಧೋಳ

Advertisement

Udayavani is now on Telegram. Click here to join our channel and stay updated with the latest news.

Next