Advertisement

Vijayapura; ಪಾಕ್ ಘೋಷಣೆ ಕೂಗಿದವರನ್ನು ಭಾರತದಿಂದ ಹೊಡೆದೋಡಿಸಬೇಕು: ಯತ್ನಾಳ್ ಆಗ್ರಹ

02:21 PM Mar 02, 2024 | keerthan |

ವಿಜಯಪುರ: ಮಯನ್ಮಾರ್ ನಲ್ಲಿ ರೊಹಿಂಗ್ಯಾಗಳನ್ನು ಹೊಡೆದು ಹೊರಗಟ್ಟಿದಂತೆ ಪಾಕಿಸ್ತಾನದ ಪರ ಘೋಷಣೆ ಕೂಗಿದವರನ್ನೂ ಹೊಡೆದು ಭಾರತದಿಂದ ಹೊರ ಹಾಕಬೇಕಾಗುತ್ತದೆ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಿಡಿ ಕಾರಿದ್ದಾರೆ.

Advertisement

ಶನಿವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪಾಕ್ ಪರ ಘೋಷಣೆ ಕೂಗಿದ ದೆಶದ್ರೋಹಿಗಳನ್ನು ದೇಶದಿಂದ ಹೊರಗೆ ದಬ್ಬಬೇಕಾಗುತ್ತದೆ. ಈ ಪ್ರಕರಣದ ತನಿಖೆ ನಡೆಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಕಿಡಿಕಾರಿದರು.

ಪಾಕ್ ಘೋಷಣೆ ಪ್ರಕರಣವನ್ನು ಗೃಹ ಸಚಿವ ಪರಮೇಶ್ವರ ಸೇರಿದಂತೆ ಪ್ರಿಯಾಂಕ ಖರ್ಗೆ ಅವರು ಸಮರ್ಥಿಸಿಕೊಂಡಿದ್ದರು. ಎಫ್ಎಸ್ಎಲ್ ವರದಿಯಲ್ಲಿ ಪಾಕ್ ಪರ ಘೋಷಣೆ ಕೂಗಿರುವುದು ಸಾಬೀತಾಗಿದ್ದರೂ ನಾಸೀರ್ ಹುಸೇನ್ ವಿರುದ್ಧ ಕಾಂಗ್ರೆಸ್ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಘೋಷಣೆ ಕೂಗಿದ ಕುರಿತು ನಾನು ಮೊದಲೇ ಟ್ವೀಟ್ ಮಾಡಿದ್ದು, ಇದೀಗ ದೃಢಪಟ್ಟಿದೆ ಎಂದರು.

ಪಾಕ್ ಪರ ಘೋಷಣೆ ಕೂಗುವವರು ಪಾಕಿಸ್ತಾನಕ್ಕೆ ಹೋಗಲಿ ಎಂದು ಹರಿಹಾಯ್ದ ಯತ್ನಾಳ, ಈ ಪ್ರಕರಣದ ಕುರಿತು ನಾನು ಸದನದಲ್ಲಿ ಮಾತನಾಡುವಾಗ ಖಡಕ್ ಆಗಿ ಮಾತನಾಡಿ ಎಂದು ಸ್ಪೀಕರ್ ಯು.ಟಿ.ಖಾದರ್ ಬೆಂಬಲ ನೀಡಿದ್ದಕ್ಕಾಗಿ ಅವರನ್ನು ಅಭಿನಂದಿಸುವುದಾಗಿ ಹೇಳಿದರು.

ರಾಜ್ಯದಲ್ಲಿ ಭಯೋತ್ಪಾದನೆ ಇಂಬುಕೊಡುವ ಕೆಲಸ ನಡೆಯುತ್ತಿದೆ. ಬ್ರ್ಯಾಂಡ್ ಬೆಂಗಳೂರು ಬಾಂಬ್ ಬೆಂಗಳೂರು ಎಂಬಂತೆ ಪರಿವರ್ತನೆಯಾಗುತ್ತಿದೆ. ಕುಕ್ಕರ್ ಬಾಂಬ್ ಸ್ಫೋಟದ ಸಂದರ್ಭದಲ್ಲೂ ಕಾಂಗ್ರೆಸ್ ನಾಯಕರು ಇದೇ ರೀತಿ ಪ್ರತಿಕ್ರಿಯಿಸಿದ್ದರು ಎಂದು ಕುಟುಕಿದರು.

Advertisement

ರಾಜ್ಯದಲ್ಲಿನ ಈ ಪರಿಸ್ಥಿತಿ ನಿಭಾಯಿಸಲು ಅಸಾಧ್ಯವಾದರೆ ಗ್ಯಾರಂಟಿ ಯೋಜನೆ ಮಾತ್ರ ಹೇಳಿಕೊಂಡು ಹೋಗಬೇಡಿ, ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು‌ ಎಂದು ಆಗ್ರಹಿಸಿದರು.

ಬೆಂಗಳೂರಿನ ರಾಮೇಶ್ವರಂ ಹೊಟೇಲ್ ಬಾಂಬ್ ಸ್ಫೋಟ ಪ್ರಕರಣ ಉಲ್ಲೇಖಿಸಿದ ಯತ್ನಾಳ, ಈ ಕೃತ್ಯವನ್ನು ಭಜರಂಗ ದಳದ ಮೇಲೆ ಹೊರಿಸುವ ಹುನ್ನಾರವಿತ್ತು. ಬಾಂಬ್ ಸ್ಫೋಟ ಮಾಡುವವರಿಗೆ ಕರ್ನಾಟಕ ರಾಜ್ಯ ಪ್ರಯೋಗ ಶಾಲೆಯಾಗಿದೆ. ಮಾರುಕಟ್ಟೆ, ಸಿನಿಮಾ ಮಂದಿರದಂಥ ಜನನಿಬಿಡ ಪ್ರದೇಶದಲ್ಲಿ ಆಗಿದ್ದರೆ ಭಾರಿ ಅನಾಹುತ ಆಗುತ್ತಿತ್ತು‌ ಎಂದು ಆಕ್ರೋಶ ಹೊರಹಾಕಿದರು.

ಅಯೋಧ್ಯಾ ರಾಮ ಮಂದಿರ ನಿರ್ಮಾಣ ಆಗಿರುವುದರಿಂದಲೇ ಶುಕ್ರವಾರ ದಿನವೇ ಉದ್ದೇಶಪೂರ್ವಕವಾಗಿ ಹೊಟೇಲಿನಲ್ಲಿ ಸ್ಫೋಟ ನಡೆಸಲಾಗಿದೆ. ಇವರೆಲ್ಲ ನಾಶವಾಗುವ ಕಾಲ ಹತ್ತಿರ ಬಂದಿದೆ ಎಂದು ವಾಗ್ದಾಳಿ ನಡೆಸಿದರು.

ಲೋಕಸಭೆಗೆ ಶೀಘ್ರವೇ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯಲಿದ್ದು, ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಸಮಾನ ನಾಗರಿಕ ಕಾಯ್ದೆ ಜಾರಿಗೆ ಬರಲಿದೆ. ಒಂದು ಕುಟುಂಬಕ್ಕೆ ಎರಡೇ ಮಕ್ಕಳು ಕಾನೂನು ಬರಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next